Loksabha Election 2024 | ಬಿಜೆಪಿ-ಜೆಡಿಎಸ್ ಸುಗಮ ಸಮನ್ವಯಕ್ಕೆ ಅಮಿತ್ ಶಾ ಸೂಚನೆ
ಸ್ಥಳೀಯ ಬಿಜೆಪಿ ಮುಖಂಡರ ಜತೆ ಚರ್ಚಿಸಿ ಸಮನ್ವಯ ಸಾಧಿಸಲು ಕ್ರಮ ಕೈಗೊಳ್ಳುವಂತೆ ತಮ್ಮ ಪಕ್ಷದ ನಾಯಕರಿಗೆ ಅಮಿತ್ ಶಾ ಸೂಚಿಸಿದರು.;
ಬೆಂಗಳೂರು: ಬಿಜೆಪಿ- ಜೆಡಿಎಸ್ ಮೈತ್ರಿ ಬಳಿಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಂಗಳವಾರ(ಏ. 2) ಉಭಯ ಪಕ್ಷಗಳ ನಾಯಕರ ಸಮನ್ವಯ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಥಳೀಯವಾಗಿ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಎಲ್ಲಾ ಕ್ಷೇತ್ರಗಳಲ್ಲೂ ಜಂಟಿ ಸಮನ್ವಯ ಸಮಿತಿ ರಚಿಸಬೇಕು ಎರಡೂ ಪಕ್ಷಗಳ ನಾಯಕರಿಗೆ ಸೂಚಿಸಿದ್ದಾರೆ.
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಮಂಗಳವಾರ(ಏ. 2) ರಂದು ನಡೆದ ಬಿಜೆಪಿ- ಜೆಡಿಎಸ್ ಜಂಟಿ ಕೋರ್ ಕಮಿಟಿಯ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ, ಡಿ.ವಿ ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್ ಅಶ್ವತ್ಥ ನಾರಾಯಣ, ಜೆಡಿಎಸ್‌ನ ಮಾಜಿ ಸಚಿವರಾದ ಜಿ.ಟಿ ದೇವೇಗೌಡ, ಎಚ್.ಕೆ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ, ಸಾ.ರಾ.ಮಹೇಶ್, ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಇತರರು ಪಾಲ್ಗೊಂಡಿದ್ದರು.
ಕೆಲವು ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದ ಹೊಂದಾಣಿಕೆಯ ವಾತಾವರಣ ಸೃಷ್ಟಿಯಾಗಲಿಲ್ಲ. ಅಂತಹ ಕ್ಷೇತ್ರಗಳನ್ನು ಗುರುತಿಸಿ ಸ್ಥಳೀಯ ಬಿಜೆಪಿ ಮುಖಂಡರ ಜತೆ ಚರ್ಚಿಸಿ ಸಮನ್ವಯ ಸಾಧಿಸಲು ಕ್ರಮ ಕೈಗೊಳ್ಳುವಂತೆ ತಮ್ಮ ಪಕ್ಷದ ನಾಯಕರಿಗೆ ಅಮಿತ್ ಶಾ ಸೂಚಿಸಿದರು.
ಎರಡೂ ಪಕ್ಷದ ಮುಖಂಡರು ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಬೇಕು. 28 ಕ್ಷೇತ್ರಗಳಲ್ಲೂ ಗೆಲುವಿನ ಗುರಿಯೊಂದಿಗೆ ಕೆಲಸ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಮಿತ್ರಪಕ್ಷಗಳ ಮಧ್ಯೆ ಸಮನ್ವಯದ ಕೊರತೆ, ಗೊಂದಲ ಉದ್ಭವಿಸಿದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.