ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸಲು ಸಿದ್ದವಾಗಿವೆ. ಬಿಜೆಪಿಯು ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹೊಂದಿದೆ. ಈ ಉದ್ದೇಶದಿಂದ ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.
ವಿಶೇಷ ವಿಮಾನದ ಮೂಲಕ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ, ಇಂದು ಚುನಾವಣಾ ಪ್ರಚಾರ ಕಾರ್ಯಗಳ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.
ಇಂದು ಸಂಜೆ 5:50ಕ್ಕೆ ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಬಳಿಯ ಹೆಲಿಪ್ಯಾಡ್ಗೆ ಬಂದಿಳಿಯಲಿರುವ ಅಮಿತ್ ಶಾ ರಸ್ತೆ ಮಾರ್ಗ ಮೂಲಕ ಚಿಕ್ಕಮಳೂರು ಗ್ರಾಮಕ್ಕೆ ಆಗಮಿಸಲಿದ್ದಾರೆ. ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ಆರಂಭಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪರ ಸುಮಾರು ಒಂದೂವರೆ ಕಿ.ಮೀ ದೂರ ಮೆರವಣಿಗೆ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಅಮಿತ್ ಶಾ ಕಾರ್ಯಕ್ರಮದಲ್ಲಿ ವಿಜಯೇಂದ್ರ, ಅಶೋಕ್, ಕುಮಾರಸ್ವಾಮಿ, ನಿಖಿಲ್ ಸೇರಿ ಸ್ಥಳೀಯ ಮುಖಂಡರು ಭಾಗಿಯಾಗಲಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಲು ಬಿಜೆಪಿ ಮುಖಂಡರು ಪ್ಲಾನ್ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ನ ಏಕೈಕ ಸಂಸದನನ್ನ ಮಣಿಸಲು ಬಿಜೆಪಿ-ಜೆಡಿಎಸ್ ಮೊದಲ ಬಾರಿಗೆ ಬೃಹತ್ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ.
ಇನ್ನು ಮುಖ್ಯವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲೋಕಸಭೆ ವಿಚಾರವಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಬಂಡಾಯವೆದ್ದ ನಾಯಕರನ್ನು ಕರೆದು ಬಂಡಾಯ ಶಮನ ಮಾಡುವ ಸಾಧ್ಯತೆ ಇದೆ.