ಬಿಜೆಪಿಯ ಧಾರ್ಮಿಕ ಸರ್ವಾಧಿಕಾರದ ವಿರುದ್ಧ ಹೋರಾಟ: ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು

ಆಮ್‌ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ʼದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.;

Update: 2024-04-04 02:00 GMT

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಕನಿಷ್ಠ ಇಪ್ಪತ್ತು ಸ್ಥಾನಗಳಲ್ಲಾದರೂ ವಿಜಯ ಸಾಧಿಸಿ, ಬಿಜೆಪಿ ನೇತೃತ್ವದ ಎನ್‌ ಡಿ ಎ ಮೈತ್ರಿ ಕೂಟಕ್ಕೆ ಮುಖಭಂಗ ಮಾಡಬೇಕೆಂಬ ಕಾಂಗ್ರೆಸ್‌ ಗೆ ಆಮ್‌ ಆದ್ಮಿ ಪಕ್ಷ (AAP) ಬೆನ್ನೆಲುಬಾಗಿ ನಿಲ್ಲಲಿದೆ.

“AAP ಪ್ರತಿಷ್ಠೆಗಾದರೂ ತನ್ನ ಅಭ್ಯರ್ಥಿಗಳನ್ನು ಕೆಲವು ಕ್ಷೇತ್ರದಲ್ಲಾದರೂ ಕಣಕ್ಕಿಳಿಸಿದರೆ, ಅದರಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆಯನ್ನು ಮನಗಂಡು; ಧರ್ಮ ನಿರಪೇಕ್ಷ ರಾಜಕಾರಣ, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು, ವಿವಿಧತೆಯಲ್ಲಿ ಏಕತೆಯ ಸಿದ್ಧಾಂತದಲ್ಲಿ ನಂಬಿಕೆ ಇರುವ ಮತದಾರರ ಮತಗಳು ಅನಾವಶ್ಯಕವಾಗಿ ವಿಭಜನೆ ಆಗಕೂಡದು ಎಂಬ ಉದ್ದೇಶದಿಂದ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಲ್ಲಲು AAP ನಿರ್ಧರಿಸಿದೆ” ಎನ್ನುತ್ತಾರೆ ರಾಜ್ಯ AAP ಅಧ್ಯಕ್ಷ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು.

AAP ಪಕ್ಷವೂ ಸೇರಿದಂತೆ INDIA ಬ್ಲಾಕ್‌ನ ಹತ್ತು ರಾಜಕೀಯ ಪಕ್ಷಗಳ ನಾಯಕರು ಕಾಂಗ್ರೆಸ್‌ ಜತೆ ಸೇರಿ ಸಮನ್ವಯ ಸಮಿತಿಯೊಂದನ್ನು ರಚಿಸಿಕೊಂಡು, ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಜಾತ್ಯಾತೀತ, ಸಂವಿಧಾನ ಬದ್ಧತೆಯ ಅನೇಕತೆಯಲ್ಲಿ ಏಕತೆಯನ್ನು ನಂಬುವವರ ಮತಗಳು ವಿಭಜನೆಯಾಗದಂತೆ ಕಾರ್ಯಕ್ರಮವೊಂದನ್ನು ರೂಪಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ʼದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದ ಆಯ್ದ ಭಾಗ

ಕರ್ನಾಟಕದಲ್ಲಿ ಆಮ್‌ ಆದ್ಮಿ ಪಕ್ಷವು ಕಾಂಗ್ರೆಸ್‌ ಬೆನ್ನಿಗೆ ನಿಲ್ಲಲು ನಿಜವಾದ ಕಾರಣವೇನು?

ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಟಿಕೆಟ್‌ ಹಂಚಿಕೆಯಲ್ಲಿ ಕಾಂಗ್ರೆಸ್‌ನೊಂದಿಗಿದ್ದ ಭಿನ್ನಾಭಿಪ್ರಾಯ ಈಗ ಶಮನವಾಗಿದೆ. ಕಾಂಗ್ರೆಸ್ ಗೆ AAP ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟು ಇನ್ನು ನಾಲ್ಕರಲ್ಲಿ ತಾನು ಸ್ಪರ್ಧಿಸುತ್ತಿದೆ. ಉಭಯ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯನ್ನು ಹೊಂದಿದೆ. ಹಾಗಾಗಿ ಪಕ್ಷದ ನಾಯಕ ಅರವಿಂದ್‌ ಕೇಜ್ರೀವಾಲ್‌ ಅವರ ಆದೇಶದ ಮೇರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಮ್ಮ ಪಕ್ಷ ಶ್ರಮಿಸಲಿದೆ.

AAP ಸೇರುವ ಮೊದಲು ನೀವು ಕಾಂಗ್ರೆಸ್‌ನಲ್ಲಿದ್ದಿರಿ. ಹಾಗಾಗಿ ಈಗಲೂ ನಿಮಗೆ ಕಾಂಗ್ರೆಸ್ ಬಗ್ಗೆ ಒಲವಿದೆಯೇ? ಅದರ ಪರಿಣಾಮವೇ ಈ ಬೆಂಬಲವೇ?

ನೀವು ಹೇಳುತ್ತಿರುವಂತೆ ಕಾಂಗ್ರೆಸ್‌ಗೆ ನೀಡುತ್ತಿರುವ ಬೆಂಬಲ, ಕಾಂಗ್ರೆಸ್ ನ ಮೇಲಿನ ನನ್ನ ಒಲವಿನಂದಲ್ಲ. ನಮ್ಮ ಪಕ್ಷದ ಹೋರಾಟ ಬಿಜೆಪಿಯ ಸರ್ವಾಧಿಕಾರಿ ಧೋರಣೆ. ಅದರಲ್ಲೂ ಬಿಜೆಪಿಯವರು ಧರ್ಮದ ಹೆಸರಿನಲ್ಲಿ, ಆಧ್ಯಾತ್ಮಿಕತೆಯ ಮುಖವಾಡ ಹಾಕಿಕೊಂಡು, ರಾಮನ ಹೆಸರಿನಲ್ಲಿ ನಡೆಸುತ್ತಿರುವ ಸರ್ವಾಧಿಕಾರಿ ಆಡಳಿತದ ವಿರುದ್ಧ ನಮ್ಮ ಹೋರಾಟ. ಕಾಂಗ್ರೆಸ್‌ ಕೂಡ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತಿರುವುದರಿಂದ, ಆ ಪಕ್ಷದ ಬೆಂಬಲಕ್ಕೆ AAP ನಿಂತಿದೆ.

ಕೇಜ್ರೀವಾಲ್‌ ಅವರು ಯಾವುದೇ ತಪ್ಪು ಮಾಡದೆ ಅವರನ್ನು ರಾಜಕೀಯ ಬಲಿಪಶು ಮಾಡಲಾಗಿದೆ ಎಂಬುದು ನಿಮ್ಮ ಅಭಿಪ್ರಾಯವೇ?
ಕೇಜ್ರೀವಾಲ್‌ ಅವರು ತಪ್ಪು ಮಾಡಿರಬಹುದೆಂದು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ. ರಾಜಕಾರಣದ ನನ್ನ ಅನುಭವದಲ್ಲಿ ಹೇಳುವುದಾದರೆ ಅವರು ತಪ್ಪು ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳಿಂದ ತಪ್ಪಾಗಿದ್ದರೆ, ಅದನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಲು ಬೇರೆಯದೇ ದಾರಿಯಿದೆ. ಅಧಿಕಾರಸ್ತರ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸುತ್ತಿರುವ ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ ಮುಂತಾದ ಸ್ವಾಯತ್ತ ಎಂದು ಹೇಳಲಾಗುವ ಸಾಂಸ್ಥಿಕ ವ್ಯವಸ್ಥೆಯ ಬಲಿಪಶು ಎಎಪಿ. ಇದಕ್ಕೆ ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯದ ಹೇಳಿಕೆಗಳೇ ಸಾಕ್ಷಿ. AAP ಯ ಸಂಜಯ್‌ ಸಿಂಗ್ ಗೆ ಸಿಕ್ಕಿರುವ ಜಾಮೀನೇ ಸಾಕ್ಷಿ. ನನಗಿನ್ನೂ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಸಂಜಯ್‌ ಸಿಂಗ್‌ ರಂತೆ ಉಳಿದವರೂ ಆರೋಪ ಮುಕ್ತರಾಗುತ್ತಾರೆ ಎಂದು ನಾನು ನಂಬಿದ್ದೇನೆ. ಆದರೆ ಈ political witch hunt ನಿಲ್ಲುತ್ತದೆ ಎಂಬ ನಂಬಿಕೆ ನನಗಿಲ್ಲ.

ನೀವು ಬಿಜೆಪಿಯಲ್ಲಿಯೂ ಇದ್ದವರು. ಬಿಜೆಪಿಯ ಕರ್ನಾಟಕದ ಇಂದಿನ ನಾಯಕರ ಸಂಪರ್ಕದಲ್ಲಿದ್ದವರು. ಆಗ ನಿಮಗೆ ಅವರದು ಸರ್ವಾಧಿಕಾರಿ ಧೋರಣೆ ಎನ್ನಿಸಲಿಲ್ಲವೇ?

ನಾನು ಬಿಜೆಪಿಯಲ್ಲಿ ಇದ್ದದ್ದು ನಿಜ. ಆದರೆ. ಅಂದಿನ ನಾಯಕರಾದ ಅಡ್ವಾಣಿ ಅವರಾಗಲೀ, ವಾಜಪೇಯಿ ಅವರಾಗಲಿ, ಈ ಮಟ್ಟದ ಸರ್ವಾಧಿಕಾರಿ ಧೋರಣೆ ಹೊಂದಿದವರಲ್ಲ. ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇತ್ತು. ಅಭಿಪ್ರಾಯ ಬೇಧಗಳನ್ನು ವ್ಯಕ್ತಪಡಿಸಲು ಅವಕಾಶವಿತ್ತು. ಆದರೆ, ಇಂದಿನ ಪರಿಸ್ಥಿತಿ ತೀರಾ ಭಿನ್ನ. ಈಗ ನಡೆಯುತ್ತಿರುವುದು Tax Terrorism. ಈಗ freeze ಆಗಿರುವುದು ಕಾಂಗ್ರೆಸ್ ನ ಅಕೌಂಟ್‌ ಅಲ್ಲ. ಫ್ರೀಜ್‌ ಆಗಿರುವುದು ಸಂವಿಧಾನ. ಅಘೋಷಿತ ಏಕಚಕ್ರಾಧಿಪತ್ಯ. ಈ ಹತ್ತು ವರ್ಷದಲ್ಲಿ ಆಗಿರುವುದು, ಜನತಂತ್ರ ವ್ಯವಸ್ಥೆಯ ಅಧೋಗತಿ. “ಬತ್ತಲಾರದ ಗಂಗೆಗೆ ಬಂತು ಎಂಥ ಕುತ್ತಿದು ನೋಡು” ಎಂದು ಅಂದು ಕವಿ ಗೋಪಾಲಕೃಷ್ಣ ಅಡಿಗರು ಹೇಳಿದಂತೆ. ಸಂವಿಧಾನಕ್ಕೆ ಇಂದು ಕುತ್ತು ಬಂದಿದೆ. ಸಂವಿಧಾನವನ್ನೇ ಮನುಸ್ಮೃತಿಯ ಆಧಾರದ ಮೇಲೆ ಬದಲಾಯಿಸುವ ನಿರಂತರ ಪ್ರಯತ್ನ ನಡೆದಿದೆ. ಆರ್‌ ಎಸ್‌ ಎಸ್‌ ಪ್ರಣೀತ ಹಿಂದುತ್ವದ ಹಿನ್ನೆಲೆಯಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಕ್ಷುದ್ರ ಪ್ರಯತ್ನ ನಡೆಯುತ್ತಿದೆ. ಒಕ್ಕೂಟ (Federal system) ವ್ಯವಸ್ಥೆ ಅಪಾಯದ ಅಂಚಿನಲ್ಲಿದೆ. ರಾಜ್ಯಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು, ಕೇಂದ್ರದ ಗುಲಾಮರಂತೆ ನಡೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಕಳೆದ ಹತ್ತು ವರ್ಷದಲ್ಲಿ ಭ್ರಷ್ಟಾಚಾರಿಗಳು ಮತ್ತಷ್ಟು ಭ್ರಷ್ಟರಾಗುವ ಅವಕಾಶ ನೀಡಲಾಗುತ್ತಿದೆ. ಆದರೆ ವ್ಯತ್ಯಾಸವಿಷ್ಟೇ. ಅವರು ಬಿಜೆಪಿ ಸೇರಬೇಕು, ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಯ ಬೊಕ್ಕಸ ತುಂಬ ಬೇಕು. ಹೇಳಿದಂತೆ ಕೇಳದಿದ್ದರೆ, CBI ED IT ಅಧಿಕಾರಿಗಳನ್ನು ಛೂಬಿಟ್ಟು ಹೆದರಿಸುವ ಕಾಲ ಬಂದಿದೆ. ಅನಧಿಕೃತ ತುರ್ತುಸ್ಥಿತಿಯಲ್ಲಿ ನಾವಿಂದು ದಿನ ದೂಡುತ್ತಿದ್ದೇವೆ.

ಹಾಗಾದರೆ ಪರಿಸ್ಥಿತಿ ಬದಲಿಸಲು ಸಾಧ್ಯವಿರುವುದು ಕಾಂಗ್ರೆಸ್‌ ಪಕ್ಷದಿಂದ ಸಾಧ್ಯ ಎಂದು ನಿಮ್ಮ ಅನಿಸಿಕೆಯೇ?

ಹಾಗೆನೂ ಇಲ್ಲ. ಪರಿಸ್ಥಿತಿ ಬದಲಾಗಬೇಕಾದರೆ, ಸಂವಿಧಾನ, ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ, ಅನೇಕತೆಯಲ್ಲಿ ಏಕತೆ ಎಂಬ ನಂಬಿಕೆ-ಈ ಎಲ್ಲ ಮೌಲ್ಯಗಳಲ್ಲಿ ಕನಿಷ್ಠ ನಂಬಿಕೆ ಇರುವ ಯಾವ ಪಕ್ಷವಾದರೂ ಸರಿ. ಅಥವ ಅಂಥ ಪಕ್ಷಗಳ ಒಂದು ಒಕ್ಕೂಟವಾದರೂ ಸರಿ. ಅವರನ್ನು ಬೆಂಬಲಿಸುವುದು ಒಬ್ಬ ವ್ಯಕ್ತಿಯಾಗಿ, ರಾಜಕಾರಣಿಯಾಗಿ, ಸಾಂಸ್ಕೃತಿಕ ಜಗತ್ತಿನ ಪ್ರಜೆಯಾಗಿ, ಕಲಾವಿದನಾಗಿ ನನ್ನ ಕರ್ತವ್ಯ ಎಂಬುದು ನನ್ನ ಅನಿಸಿಕೆ. ನನ್ನ ಸದ್ಯದ ಪರಿಸ್ಥಿತಿಯಲ್ಲಿ, ನನ್ನ ಮಿತಿಯಲ್ಲಿ, ಸದ್ಯಕ್ಕೆ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ನ್ನು ಬೆಂಬಲಿಸುವುದು ಸರಿ ಎನ್ನಿಸುತ್ತಿದೆ. ಹಾಗೆ ಮಾಡಬೇಕೆಂದು ನಮ್ಮ ಪಕ್ಷದ ನಾಯಕರೂ ಕೂಡ ಹೇಳಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಧರ್ಮ ನಿರಪೇಕ್ಷ ರಾಜಕಾರಣ, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು, ವಿವಿಧತೆಯಲ್ಲಿ ಏಕತೆಯ ಸಿದ್ಧಾಂತದಲ್ಲಿ ನಂಬಿಕೆ ಇರುವ ಮತದಾರರ ಮತಗಳು ಅನಾವಶ್ಯಕವಾಗಿ ವಿಭಜನೆ ಆಗಕೂಡದು ಎಂಬ ಉದ್ದೇಶದಿಂದ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಲ್ಲಲು ನಾವು ನಿರ್ಧರಿಸಿದ್ದೇವೆ.

ಆದರೆ ಕರ್ನಾಟಕದಲ್ಲಿ ನಿಮ್ಮ ಪಕ್ಷಕ್ಕೆ ಹೇಳಿಕೊಳ್ಳುವಂಥ ನೆಲೆ ಇಲ್ಲದಿರುವಾಗ. ನಿಮ್ಮ ಬೆಂಬಲದಿಂದ ಕಾಂಗ್ರೆಸ್ ಗೆ ಏನು ಲಾಭ?

ಪರಿಸ್ಥಿತಿ, ನೀವು ಹೇಳುತ್ತಿರುವಂತಿಲ್ಲ. ಕರ್ನಾಟಕದಲ್ಲಿ ನಮ್ಮ ಪಕ್ಷದ vote share ಶೇ. ಐದರಷ್ಟಿರಬಹುದು. ಆದರೆ, ನಮ್ಮ ಪಕ್ಷದ ಪ್ರಭಾವ, ಬೆಂಗಳೂರು ನಗರ, ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ ಮುಂತಾದ ನಗಗಳಲ್ಲಿವೆ. ಕಳೆದ ವಿಧಾನ ಸಭೆಯಲ್ಲಿ ರೋಣ ಕ್ಷೇತ್ರದಲ್ಲಿ ನಮಗೆ ಅತಿ ಹೆಚ್ಚ ಮತ ಬಂದಿದೆ. ಅಂದರೆ ನಾವು ಗ್ರಾಮೀಣ ಪ್ರದೇಶಕ್ಕೂ ನಿಧಾನವಾಗಿ ಪ್ರವೇಶಿಸುತ್ತಿದ್ದೇವೆ. ನಮ್ಮ ಪಕ್ಷದ ಎಲ್ಲ ಜಿಲ್ಲಾ ನಾಯಕರಿಗೂ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಬೆರತು ಪ್ರಚಾರ ಮಾಡಲು ಸೂಚಿಸಿದ್ದೇವೆ. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುವಂತೆ, ಕಾಂಗ್ರೆಸ್‌ ನಾಯಕರಿಗೂ ಹೇಳಿದ್ದೇವೆ. ಇದರಿಂದಾಗುವ ಪರಿಣಾಮದಿಂದಾಗಿ, ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಬಹುದು. 

Tags:    

Similar News