ಇಂಡಿಯ ಒಕ್ಕೂಟದಿಂದ ಟಿಎಂಸಿ ಹೊರನಡೆದಿದ್ದು ಏಕೆ? -ಸಮೀರ್ ಕೆ ಪುರ್ಕಾಯಸ್ಥ

Update: 2024-02-05 06:30 GMT

ಬರ್ಧ್ವಾನ್, ಜನವರಿ 24- ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪಕ್ಷ 2024 ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು.

ʻಸೀಟು ಹೊಂದಾಣಿಕೆ ಬಗ್ಗೆ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ನನ್ನ ಪ್ರಸ್ತಾಪವನ್ನು ಮೊದಲಿನಿಂದಲೂ ತಿರಸ್ಕರಿಸಲಾಗಿದೆʼ ಎಂದರು. ಒಂದು ದಿನ ಹಿಂದೆ ಕಾಂಗ್ರೆಸ್ ಗೆ 2 ಕ್ಕಿಂತ ಹೆಚ್ಚು ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.

ಕಾಂಗ್ರೆಸ್ 8 ರಿಂದ 14 ಸ್ಥಾನ ಕೇಳಿರುವುದು ʻಪ್ರಾಯೋಗಿಕವಲ್ಲದ ಬೇಡಿಕೆʼ ಎಂದು ಮಮತಾ ಮಂಗಳವಾರ ಬಿರ್ಭೂಮ್ನಲ್ಲಿ ಹೇಳಿದ್ದರು. ಪಕ್ಷ 2ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನೀಡುವುದಿಲ್ಲ. ಆದ್ದರಿಂದ ಎಲ್ಲಾ 42 ಸ್ಥಾನ ಗಳಲ್ಲಿ ಸ್ಪರ್ಧೆಗೆ ಸಿದ್ಧರಾಗಬೇಕು ಎಂದು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಗುವಾಹತಿಯಲ್ಲಿ ಮಾಧ್ಯಮಗಳ ಜೊತೆ ಮಾತನ್ನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಟಿಎಂಸಿ ಜತೆಗಿನ ಸಂಬಂಧದಲ್ಲಿ ಅಡೆತಡೆ ಇರುವುದಾಗಿ ಹೇಳಿದ್ದರು. ʻಮಮತಾ ಬ್ಯಾನರ್ಜಿ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಕೆಲವೊಮ್ಮೆ ಎರಡೂ ಪಕ್ಷದ ಕೆಲವರು ಭಿನ್ನ ಧ್ವನಿ ಹೊರಡಿಸುತ್ತಾರೆ. ಇಂಥ ಟೀಕೆಗಳು ಸಂಬಂಧದ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲʼ ಎಂದು ಹೇಳಿದ್ದರು.

ಹೋರಾಟಗಾರ ಅಧೀರ್: ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ನಾಯಕತ್ವದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಗಿದ್ದಾರೆ. ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಸಂದೇಶ ನೀಡುವುದು ಬ್ಯಾನರ್ಜಿ ಅವರ ಉದ್ದೇಶ ಎಂದು ಟಿಎಂಸಿ ಮೂಲಗಳು ಹೇಳಿವೆ. ಚೌಧರಿ ಅವರು ಟಿಎಂಸಿಯನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಚೌಧರಿ ಸಿಪಿಎಂ ಜೊತೆ ಚುನಾವಣೋತ್ತರ ಒಪ್ಪಂದಕ್ಕೆ ಸಿದ್ಧವಾಗಿದ್ದಾರೆ. ಟಿಎಂಸಿ ಜೊತೆ ಸೀಟು ಹಂಚಿಕೆಗೆ ಸಿದ್ಧವಿಲ್ಲ.

ಕಾಂಗ್ರೆಸ್-ಸಿಪಿಐಎಂ ಹೊಂದಾಣಿಕೆ:  ʻಚಂಡು ಕಾಂಗ್ರೆಸ್ ಅಂಕಣದಲ್ಲಿದೆ. ಕಾಂಗ್ರೆಸ್ ಪ್ರಾಯೋಗಿಕ ಬೇಡಿಕೆ ಇರಿಸಿದರೆ, ಈಗಲೂ ಒಪ್ಪಂದ ಸಾಧ್ಯವಿದೆ. ಕಾಂಗ್ರೆಸ್ ಸಿಪಿಐ(ಎಂ) ನಿಂದ ದೂರ ಉಳಿಯಬೇಕುʼ ಎಂದು ಟಿಎಂಸಿ ಸಂಸದರೊಬ್ಬರು ಫೆಡರಲ್‌ ಗೆ ತಿಳಿಸಿದರು.

2019 ರ ಲೋಕಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಬೆಹ್ರಾಂಪುರ ಮತ್ತು ಮಾಲ್ಡಾ ದಕ್ಷಿಣ ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೆ, 2021ರ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು. ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಕಸಿಯುವ ಸಾಧ್ಯತೆ ಇರುವುದರಿಂದ ಟಿಎಂಸಿ ಕಾಂಗ್ರೆಸ್ನೊಂದಿಗೆ ಮೈತ್ರಿಗೆ ಉತ್ಸುಕವಾಗಿದೆ ಎಂದು ವರದಿಯಾಗಿದೆ.

ಇಂಡಿಯ ಒಕ್ಕೂಟದ ಎಡ ಪಕ್ಷಗಳು ಟಿಎಂಸಿಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಕಮ್ಯುನಿಸ್ಟರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಟಿಎಂಸಿಗೆ ಇಷ್ಟವಿಲ್ಲ.

Tags:    

Similar News