2 ಕೋಟಿ ನಗದು ವಶ: ಬಿಜೆಪಿ ಕಾರ್ಯದರ್ಶಿ ಸೇರಿ ಇಬ್ಬರ ವಿರುದ್ಧ ಎಫ್‌ ಐಆರ್

Update: 2024-04-21 14:59 GMT

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ಎರಡು ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವ ಚುನಾವಣಾ ಅಕ್ರಮ ತಡೆ ತಂಡ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇತರೆ ಇಬ್ಬರ ವಿರುದ್ಧ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಿಸಿದೆ.

ಕಾರು ತಪಾಸಣೆ ವೇಳೆ ಈ ಭಾರೀ ಪ್ರಮಾಣದ ನಗದು ಸಿಕ್ಕಿದೆ. ಅದು ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದು ಎಂದು ಕಾರಿನಲ್ಲಿದ್ದವರು ದಾಖಲೆ ಒದಗಿಸಿದ್ದಾರೆ. ನಗದನ್ನು ಆದಾಯ ತೆರಿಗೆ ಇಲಾಖೆಗೆ ನೀಡಿರುವ ಚುನಾವಣಾಧಿಕಾರಿಗಳು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

ಬ್ಯಾಂಕಿನಿಂದ ಹಣ ಪಡೆದ ಬಗ್ಗೆ ದಾಖಲೆಗಳಿದ್ದರೂ ನಗದು ಸಾಗಣೆಯ ವಿಷಯದಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘನೆಯಾಗಿದೆ. ಆ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼನಗದನ್ನು ಬ್ಯಾಂಕ್‌ನಿಂದ ಚೆಕ್‌ ಮೂಲಕ ನಗದೀಕರಿಸಿದ್ದು, ಬಿಜೆಪಿ ಕಾರ್ಯಕರ್ತರಿಗೆ ನೀಡಲು ಕಳಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದು ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯದ ಪತ್ರ ಕಾರಿನಲ್ಲಿತ್ತು. ಈ ಕುರಿತು ಐಟಿ ಇಲಾಖೆ ತನಿಖೆ ನಡೆಸಿದ್ದು ಆದಾಯ ತೆರಿಗೆ ನಿಯಮ ಉಲ್ಲಂಘಟನೆಯಾಗಿಲ್ಲ ಎಂದು ಕಂಡುಬಂದಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಫ್‌ ಐಆರ್‌ ದಾಖಲಿಸಲು ಅನುಮತಿ ಕೋರಿ ಶನಿವಾರವೇ ನ್ಯಾಯಾಲಯಕ್ಕೆ ಕೋರಲಾಗಿತ್ತು. ಆದರೆ, ನ್ಯಾಯಾಲಯ ಭಾನುವಾರ ಬೆಳಿಗ್ಗೆ ಅನುಮತಿ ಸಿಕ್ಕಿದೆ. ಆ ಹಿನ್ನೆಲೆಯಲ್ಲಿ ಲೋಕೇಶ್‌ ಅಂಬೆಕಲ್ಲು, ವೆಂಕಟೇಶ್‌ ಪ್ರಸಾದ್ ಮತ್ತು ಗಂಗಾಧರ್‌ ಎಂಬುವರ ವಿರುದ್ಧ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Similar News