ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ, ರೈತರಿಗೆ ಜುಜುಬಿ ಎರಡು ಸಾವಿರ ಪರಿಹಾರ: ವಿಜಯೇಂದ್ರ ವಾಗ್ದಾಳಿ
ಬರದಿಂದ ತತ್ತರಿಸಿರುವ ರೈತರಿಗೆ ಭಿಕ್ಷೆಯಂತೆ ಕೇವಲ 2 ಸಾವಿರ ರೂ ಬೆಳೆ ಪರಿಹಾರ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ;
ಕಲಬುರಗಿ: "ರಾಜ್ಯದ ಬೊಕ್ಕಸವನ್ನು ಆರು ತಿಂಗಳಿನಲ್ಲಿಯೇ ದಿವಾಳಿ ಮಾಡಿರುವ ಸಿಎಂ ಸಿದ್ದರಾಮಯ್ಯರವರು ಅಲ್ಪಸಂಖ್ಯಾತರಿಗಾಗಿ ₹10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ಬರದಿಂದ ತತ್ತರಿಸಿರುವ ರೈತರಿಗೆ ಭಿಕ್ಷೆಯಂತೆ ಕೇವಲ 2 ಸಾವಿರ ರೂ ಬೆಳೆ ಪರಿಹಾರ ನೀಡಿದ್ದಾರೆ" ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಕಮಲಾಪುರ ಪಟ್ಟಣದಲ್ಲಿ ಮಂಗಳವಾರ(ಏ.30) ನಡೆದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ' ಎಂದರು.
'ಕಳೆದ ಬಾರಿ ಪ್ರವಾಹದಿಂದ ಬೆಳೆ ಹಾನಿಯಾದವರಿಗೆ ಯಡಿಯೂರಪ್ಪ ಸರ್ಕಾರ ಹೆಕ್ಟೇರ್‌ಗೆ ₹24 ಸಾವಿರ ಒದಗಿಸಿತ್ತು. ಗ್ಯಾರಂಟಿ ಹೆಸರಲ್ಲಿ ₹2 ಸಾವಿರ ಕೊಡುತ್ತಿರುವ ಸರ್ಕಾರ, 800 ರೈತರ ಆತ್ಮಹತ್ಯೆಗೆ ಪರಿಹಾರ ಒದಗಿಸಿಲ್ಲ. ನಾಲ್ಕು ತಿಂಗಳಿಂದ ಸಂಧ್ಯಾ ಸುರಕ್ಷಾ, ವಿವಿಧ ಪಿಂಚಣಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. 10 ಕೆ.ಜಿ ಅಕ್ಕಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಅದರಲ್ಲಿ 5 ಕೆ.ಜಿ ಕೇಂದ್ರ ಸರ್ಕಾರ ನೀಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಿ ಪುರುಷರ ಟಿಕೆಟ್ ದರವನ್ನು ಶೇ.30ರಷ್ಟು ಹೆಚ್ಚಿಸಿದ್ದಾರೆ. ವಿದ್ಯುತ್ ದರ ಹೆಚ್ಚಿಸಿದ್ದಾರೆ. ರೈತರು ಜಮೀನಿನಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಕೇವಲ ₹25 ಸಾವಿರ ಇತ್ತು. ಕಾಂಗ್ರೆಸ್ ಸರ್ಕಾರ ಅದನ್ನು ₹2 ಲಕ್ಷಕ್ಕೆ ಹೆಚ್ಚಿಸಿದೆ. ಮದ್ಯದ ದರ, ನೋಂದಣಿ ಮುದ್ರಾಂಕ ದರ ಹೆಚ್ಚಿಸಿ ಜನರನ್ನು ಸುಲಿಗೆ ಮಾಡುತ್ತಿದೆ' ಎಂದು ಆರೋಪಿಸಿದರು.