ಕೆಲಸ ಕೊಡಿಸುವ ಆಮಿಷ; ಚಲಿಸುವ ವಾಹನದಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಸಂತ್ರಸ್ತ ಯುವತಿಯ ತಾಯಿ ಉದಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.;

Update: 2025-08-31 10:15 GMT

ಒಡಿಶಾದ ಮಯೂರ್‌ಬಂಜ್‌ ಜಿಲ್ಲೆಯ ಬರಿಪಾದ ನಗರದಲ್ಲಿ 21 ವರ್ಷದ ಯುವತಿ ಮೇಲೆ ಆರು ಮಂದಿ ದುಷ್ಕರ್ಮಿಗಳು ಚಲಿಸುವ ವ್ಯಾನ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. 

ಉದಾಲ–ಬಾಲೇಶ್ವರ ರಸ್ತೆಯಲ್ಲಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಆರೋಪಿಗಳು ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಾನ್‌ನಲ್ಲಿ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾರೆ. ಮಾರ್ಗಮಧ್ಯೆ ಆರು ಮಂದಿ ಆರೋಪಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿ ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾರೆ.    

ಸಂತ್ರಸ್ತ ಯುವತಿಯ ತಾಯಿ ಉದಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  ಉಳಿದ ನಾಲ್ವರು ಪತ್ತೆಗೆ ಬಲೆ ಬೀಸಿದ್ದಾರೆ. 

ಹೇಗಾಯಿತು ಘಟನೆ?

ಇಬ್ಬರು ಆರೋಪಿಗಳು ಬಂಗಿರಿಪೋಸಿ ಮಕರ ಸಂಭ್ರಮಾಚರಣೆ ವೇಳೆ ಯುವತಿಗೆ ಪರಿಚಯವಾಗಿದ್ದರು. ತಾವು ಕೆಲಸ ಮಾಡುವ ಖಾಸಗಿ ಕಂಪನಿಯಲ್ಲೇ ಕೆಲಸ ಕೊಡಿಸುವುದಾಗಿ ಹೇಳಿ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದರು. ಶುಕ್ರವಾರ ಇಬ್ಬರು ದುಷ್ಕರ್ಮಿಗಳು ಮನೆಯ ಬಳಿ ಬಂದು ಕೆಲಸಕ್ಕೆ ತಮ್ಮೊಂದಿಗೆ ಬರುವಂತೆ ಯುವತಿಯನ್ನು ಕರೆದಿದ್ದಾರೆ.

ಅದರಂತೆ ಯುವತಿ ವ್ಯಾನ್‌ ಹತ್ತಿದ್ದು, ಅದಾಗಲೇ ನಾಲ್ವರು ಯುವಕರು ವಾಹನದಲ್ಲಿದ್ದರು. ಎಲ್ಲರೂ ಕಂಪನಿ ಕೆಲಸಕ್ಕೆ ಹೋಗುವವರು ಇರಬಹುದು ಎಂದು ಭಾವಿಸಿ ಯುವತಿ ಸುಮ್ಮನಿದ್ದಳು. ವಾಹನವು ಕಪ್ಟಿಪಡ ಚೌಕ್‌ನಿಂದ ಬಾಲೇಶ್ವರದತ್ತ ತೆರಳಿದಾಗ ಬಂಗಿರಿಪೋಸಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ಯುವತಿಯ ಮೇಲೆ ದುಷ್ಕರ್ಮಿಗಳ ಗುಂಪು ಎರಗಿದೆ. ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡಾಗ ಸ್ಥಳೀಯರು ನೆರವಿಗೆ ಧಾವಿಸಿ,ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದರು.

ಬಂಗಿರಿಪೋಸಿ ಪೊಲೀಸ್‌ ಅಧಿಕಾರಿ ಬೀರೇಂದ್ರ ಸೇನಾಪತಿ ನೇತೃತ್ವದ ತಂಡ ಶನಿವಾರ ಬೆಳಗಿನ ಜಾವ ಸರಾತ್ ಪ್ರದೇಶದಲ್ಲಿ ಇಬ್ಬರು ಆರೋಪಿಗಳಿಗೆ ಹೆಡೆಮುರಿ ಕಟ್ಟಿದೆ. ತಲೆ ಮರೆಸಿಕೊಂಡಿರುವ ಉಳಿದ ನಾಲ್ವರ ಪತ್ತೆಗೆ ಬಲೆ ಬೀಸಲಾಗಿದೆ. 

Tags:    

Similar News