ಅಧಿಕಾರಕ್ಕೆ ಬಂದರೆ ಧಾರಾವಿ ಟೆಂಡರ್ ರದ್ದು, ಮುಂಬೈ ಅದಾನಿ ನಗರ ಆಗಲು ಬಿಡುವುದಿಲ್ಲ: ಉದ್ಧವ್

ವಿಶ್ವದ ಅತ್ಯಂತ ದಟ್ಟ ನಗರ ಪ್ರದೇಶಗಳಲ್ಲಿ ಒಂದಾದ ಧಾರಾವಿಯ ಪುನರಾಭಿವೃದ್ಧಿ ಯೋಜನೆಯಲ್ಲಿ ಅದಾನಿ ಗ್ರೂಪ್‌ಗೆ ಒಪ್ಪಂದದಲ್ಲಿ ಇಲ್ಲದ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಉದ್ಧವ್‌ ಠಾಕ್ರೆ ದೂರಿದ್ದಾರೆ.;

Update: 2024-07-20 11:23 GMT

ʻಮಹಾರಾಷ್ಟ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯಮಿ ಗೌತಮ್ ಅದಾನಿ ಅವರ ಸಂಸ್ಥೆಗೆ ನೀಡಲಾದ ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಯ ಟೆಂಡರ್ ರದ್ದುಗೊಳಿಸಲಾಗುವುದು,ʼ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ (ಜುಲೈ 20) ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧಾರಾವಿಯ ನಿವಾಸಿಗಳು ಮತ್ತು ಉದ್ಯಮವನ್ನು ಬೇರುಸಹಿತ ಕಿತ್ತು ಹಾಕದಂತೆ ತಮ್ಮ ಪಕ್ಷ ಖಚಿತಪಡಿಸುತ್ತದೆ. ಅಲ್ಲಿ ವಾಸಿಸುವ ಜನರಿಗೆ 500 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ನೀಡಬೇಕು ಎಂದು ಹೇಳಿದರು. 

ʻಧಾರಾವಿ ಸ್ಲಂ ಪುನರಾಭಿವೃದ್ಧಿ ಯೋಜನೆಯ ಟೆಂಡರ್‌ ಈಗಲೇ ಏಕೆ ರದ್ದುಗೊಳಿಸಬಾರದು ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕು. ಮುಂಬೈಯನ್ನು ಅದಾನಿ ನಗರವಾಗಲು ನಾವು ಬಿಡುವುದಿಲ್ಲ,ʼ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. 

ಅದಾನಿ ಕಂಪನಿಗೆ ಹೆಚ್ಚುವರಿ ರಿಯಾಯಿತಿ: ವಿಶ್ವದ ಅತ್ಯಂತ ದಟ್ಟ ನಗರ ಪ್ರದೇಶಗಳಲ್ಲಿ ಒಂದಾದ ಧಾರಾವಿಯ ಪುನರಾಭಿವೃದ್ಧಿ ಯೋಜನೆಯಲ್ಲಿ ಅದಾನಿ ಗ್ರೂಪ್‌ಗೆ ಒಪ್ಪಂದದಲ್ಲಿ ಇಲ್ಲದ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗಿದೆ. ನಾವು ಅಧಿಕ ರಿಯಾಯಿತಿ ನೀಡುವುದಿಲ್ಲ. ಧಾರಾವಿ ನಿವಾಸಿಗಳಿಗೆ ಯಾವುದು ಒಳ್ಳೆಯದು ಎಂದು ನೋಡುತ್ತೇವೆ ಮತ್ತು ಅಗತ್ಯವಿದ್ದರೆ ಹೊಸದಾಗಿ ಟೆಂಡರ್ ನೀಡುತ್ತೇವೆ, ʼಎಂದು ಹೇಳಿದರು. 

ಮಹಿಳೆಯರಿಗೆ ತಿಂಗಳಿಗೆ ಕನಿಷ್ಠ ಮೊತ್ತವಾದ 1,500 ರೂ. ನೀಡುವ ಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನೆಯಂತೆ 'ಲಡ್ಕಾ ಮಿತ್ರ' ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆಯೇ? ಎಂದು ಕುಟುಕಿದರು. 

ಚುನಾವಣೆಯಲ್ಲಿ ಮುಖ್ಯ ವಿಷಯ: ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ 2024 ರ ಲೋಕಸಭೆ ಚುನಾವಣೆಯಲ್ಲಿ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದ್ದವು. ಶಿವಸೇನಾ (ಯುಬಿಟಿ) ಅಭ್ಯರ್ಥಿ ಅನಿಲ್ ದೇಸಾಯಿ ಅವರು ಶಿವಸೇನೆಯ ಸಂಸದ ರಾಹುಲ್ ಶೆವಾಲೆ ಅವರನ್ನು ಧಾರಾವಿ ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿರುವ ಮುಂಬೈ ಸೌತ್ ಸೆಂಟ್ರಲ್ ಕ್ಷೇತ್ರದಿಂದ 53,384 ಮತಗಳ ಅಂತರದಿಂದ ಸೋಲಿಸಿದರು.

ʻಪ್ರತಿಯೊಂದು ಮನೆಗೆ ಸಂಖ್ಯೆಯೊಂದನ್ನು ನೀಡಲಾಗುತ್ತಿದೆ. ಧಾರಾವಿ ನಿವಾಸಿಗಳನ್ನು ಅನರ್ಹತೆಯ ಬಲೆಗೆ ಸಿಲುಕಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಸ್ಲಂ ಪುನರ್ವಸತಿ ಯೋಜನೆಯಡಿ ಭೂಮಿ ಸಂಗ್ರಹಿಸಿ, ಧಾರಾವಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ,ʼ ಎಂದು ಠಾಕ್ರೆ ಹೇಳಿದರು.

ಯೋಜನೆಯಿಂದ ಅಸಮತೋಲನ: ನಗರದಲ್ಲಿ ಮೂಲಸೌಕರ್ಯ ಕಾಮಗಾರಿ ಅಥವಾ ಅಭಿವೃದ್ಧಿ ಯೋಜನೆಗಳಿಗಾಗಿ ಇಂತಹ 20 ಸ್ಥಳಗಳ ಖರೀದಿಗೆ ಸರ್ಕಾರ ಮುಂದಾಗಿದೆ. ಇದರಿಂದ ನಗರದಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ. ನಿವಾಸಿಗಳನ್ನು ಸ್ಥಳಾಂತರಿಸಿದ ಸ್ಥಳಗಳಲ್ಲಿ ಮೂಲಸೌಕರ್ಯಗಳ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಠಾಕ್ರೆ ಹೇಳಿದರು.

ಧಾರಾವಿ ಯೋಜನೆಯು 20,000 ಕೋಟಿ ರೂ. ಆದಾಯ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಬಾಂ‌ದ್ರಾ-ಕುರ್ಲಾ ಕಾಂಪ್ಲೆಕ್ಸ್‌ (ಬಿಕೆಸಿ) ವ್ಯಾಪಾರ ಜಿಲ್ಲೆಯ ಸಮೀಪದಲ್ಲಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ನವೆಂಬರ್ 2022 ರಲ್ಲಿ ಅದಾನಿ ಪ್ರಾಪರ್ಟೀಸ್‌ಗೆ ಟೆಂಡರ್ ನೀಡಲಾಯಿತು. ಪ್ರಮುಖ ಸಂಸ್ಥೆಗಳಾದ ಡಿಎಲ್‌ಎಫ್ ಮತ್ತು ನಮನ್ ಡೆವಲಪರ್‌ ಕೂಡ ಪಾಲ್ಗೊಂಡಿದ್ದವು. 

Tags:    

Similar News