Reservation Row | ಪರಿಶಿಷ್ಟರು, ಒಬಿಸಿಗಳ ಮೀಸಲಾತಿ ಮುಸ್ಲಿಮರಿಗೆ ಹಂಚಲು ಬಿಡಲ್ಲ; ಅಮಿತ್ ಶಾ
ಸಂವಿಧಾನ ಬದಲಿಸುವ ಕುರಿತ ಪ್ರತಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದು. ಕಾಂಗ್ರೆಸ್ ಪಕ್ಷವೇ ಮುಸ್ಲಿಮರ ಓಲೈಕೆಗಾಗಿ ಪರಿಶಿಷ್ಟರು ಹಾಗೂ ಹಿಂದುಳಿದವರ ಮೀಸಲಾತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.;
ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇಂತಹ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ 'ಅಜೆಂಡಾ ಆಜ್ ತಕ್ 2024' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೀಸಲಾತಿಯ ಬುಟ್ಟಿಗೆ ಕೈ ಹಾಕುವುದಿಲ್ಲ. ಆದರೆ, ಸಂವಿಧಾನ ಬದಲಿಸುವ ಕುರಿತ ಪ್ರತಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದು. ಕಾಂಗ್ರೆಸ್ ಪಕ್ಷವೇ ಮುಸ್ಲಿಮರ ಓಲೈಕೆಗಾಗಿ ಪರಿಶಿಷ್ಟರು ಹಾಗೂ ಹಿಂದುಳಿದವರ ಮೀಸಲಾತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತ ಬಳಿಕ ಆ ಪಕ್ಷದ ನಾಯಕ ರಾಹುಲ್‌ಗಾಂಧಿ ʼಅಹಂಕಾರಿʼಯಂತೆ ವರ್ತಿಸುತಿದ್ದಾರೆ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ.
2014, 2019 ಹಾಗೂ 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಳಿಸಿದ ಸ್ಥಾನಗಳಿಗಿಂತ ಬಿಜೆಪಿ ಗೆದ್ದಿರುವ ಸೀಟುಗಳ ಸಂಖ್ಯೆ ಹೆಚ್ಚಿದೆ ಎಂದು ಮೂದಲಿಸಿದ ಅವರು, ʼಒಂದು ರಾಷ್ಟ್ರ ಒಂದು ಚುನಾವಣೆ, ಅಸಂವಿಧಾನಿಕ ವಕ್ಫ್ ಕಾಯಿದೆಗೆ ತಿದ್ದುಪಡಿ, ರಾಷ್ಟ್ರೀಯ ಭದ್ರತೆ ಕಾಯ್ದೆಗಳ ಜಾರಿಗೆ ಸರ್ಕಾರ ಬದ್ಧವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ಮಾಧ್ಯಮದ ವರದಿ ಆಧಾರದಲ್ಲಿ ಕೆಲಸ ಮಾಡಲ್ಲ
ಅಮೆರಿಕ ನ್ಯಾಯಾಲಯ ಅದಾನಿ ಗ್ರೂಪ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ವಿಷಯದಲ್ಲಿ ರಾಹುಲ್ ಗಾಂಧಿ ಹಾಗೂ ಆ ಪಕ್ಷದ ಇತರೆ ನಾಯಕರು ವಿದೇಶಿ ಸಂಸ್ಥೆಗಳ ಪ್ರಭಾವಕ್ಕೆ ಒಳಗಾಗಿ ಈ ರೀತಿ ವರ್ತಿಸುತ್ತಿದ್ದಾರೆ. ಯಾವುದೇ ಸರ್ಕಾರ, ಮಾಧ್ಯಮ ವರದಿ ಆಧಾರದ ಮೇಲೆ ಕೆಲಸ ಮಾಡಲು ಸಾಧ್ಯವಿಲ್ಲ. ಅದಾನಿ ಗ್ರೂಪ್ ಅವ್ಯವಹಾರದ ಬಗ್ಗೆ ಸ್ಪಷ್ಟ ದಾಖಲೆಗಳು ಬಂದಾಗ ಆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅದಾನಿ ಗ್ರೂಪ್ ಜೊತೆ ಕೇಂದ್ರ ಸರ್ಕಾರದ ನಂಟಿರುವ ಕುರಿತು ಸೂಕ್ತ ಸಾಕ್ಷ್ಯವಿದ್ದರೆ ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ, ಪೆಗಾಸಸ್ ಪ್ರಕರಣದಲ್ಲಿ ಮಾಡಿದ ಆರೋಪಗಳು ಏನಾದವು ಎಂದು ಪ್ರಶ್ನಿಸಿದ ಅವರು, ಆರೋಪಗಳಲ್ಲಿ ಏನಾದರೂ ಸತ್ಯವಿದ್ದರೆ, ನ್ಯಾಯಾಲಯಗಳಿವೆ. ಅಲ್ಲಿ ಪ್ರಶ್ನಿಸಲಿ. ಆದರೆ, ಈವರೆಗೆ ಮೋದಿ ಸರ್ಕಾರದ ವಿರುದ್ಧ ಯಾರೂ ಕೂಡ ಯಾವುದೇ ಸಾಕ್ಷ್ಯ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಪರಿಸ್ಥಿತಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಒಂದು ವರ್ಷದಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ 2 ಕೋಟಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೂರು ದಶಕಗಳ ನಂತರ ಚಿತ್ರಮಂದಿರಗಳು ತೆರೆದಿವೆ. ತಾಜಿಯಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ. ಈತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ರಕ್ತಪಾತವಿಲ್ಲದೆ ನಡೆದಿದೆ. ಇದೆಲ್ಲವೂ 370ನೇ ವಿಧಿ ರದ್ದುಪಡಿಸಿದ್ದರಿಂದ ಅಲ್ಲಿ ಏನಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ .
2026 ರೊಳಗೆ ಎಡಪಂಥೀಯ ಉಗ್ರವಾದ ಕೊನೆ
ಮಾರ್ಚ್ 2026 ರೊಳಗೆ ಭಾರತದಲ್ಲಿ ನಕ್ಸಲ್ ಚಟುವಟಿಕೆ ಕೊನೆಗಾಣಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಈಗ ನಕ್ಸಲರ ಹಾವಳಿ ನಿಂತಿದೆ. ಛತ್ತೀಸಗಢದ ಎರಡು ಜಿಲ್ಲೆಗಳು ಮಾತ್ರ ನಕ್ಸಲರ ಕೊನೆಯ ಭದ್ರಕೋಟೆಗಳಾಗಿವೆ. ಅಲ್ಲಿಯೂ ಈಗಾಗಲೇ ಶೇ.70 ರಷ್ಟು ನಕ್ಸಲ್ ಚಟುವಟಿಕೆಗೆ ಇತಿಶ್ರೀ ಹಾಡಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಛತ್ತೀಸಗಢದಲ್ಲಿ300 ಕ್ಕೂ ನಕ್ಸಲರನ್ನು ಹತ್ಯೆಗೈದು, 900 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 2026 ರ ವೇಳೆಗೆ ಸಂಪೂರ್ಣ ನಕ್ಸಲರ ಹಾವಳಿಗೆ ಕೊನೆ ಹಾಡುತ್ತೇವೆ ಎಂದು ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಲಾಪದ ಸುಗಮ ಕಾರ್ಯನಿರ್ವಹಣೆಗೆ ಪ್ರತಿಪಕ್ಷಗಳು ಅವಕಾಶ ನೀಡುತ್ತಿಲ್ಲ. ಸರ್ಕಾರ ಪ್ರತಿ ವಿಷಯವನ್ನೂ ಚರ್ಚಿಸಲು ಸಿದ್ಧವಿದೆ. ಏಕೆಂದರೆ ಪ್ರತಿಪಕ್ಷಗಳು ಪ್ರಸ್ತಾಪಿಸುವ ವಿಷಯಗಳಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಆದರೆ, ಅವರೇ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಮಂಡನೆ
ಮುಂದಿನ ವಾರ ಸಂಸತ್ತಿನಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆʼ ಮಸೂದೆಯನ್ನು ಮಂಡಿಸಲಾಗುವುದು. ಒಕ್ಕೂಟ ವ್ಯವಸ್ಥೆಗೆ ಮಸೂದೆ ವಿರೋಧವಾಗಿದೆ ಎಂಬ ಪ್ರತಿಪಕ್ಷಗಳ ಟೀಕೆಯಲ್ಲಿ ಅರ್ಥವಿಲ್ಲ. ಆ ಬಗ್ಗೆ ಮಾತನಾಡಲು ಅರ್ಹತೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ.
ಮಣಿಪುರ ಹಿಂಸಾಚಾರ ಕುರಿತಂತೆ ಪ್ರತಿಕ್ರಿಯಿಸಿ, ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಜನಾಂಗೀಯ ಕಲಹದಿಂದ ಮಣಿಪುರ ನಲುಗಿದೆ. ಶೀಘ್ರದಲ್ಲೇ ಹಿಂಸಾಚಾರ ಕೊನೆಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ಕುರಿತಂತೆ ಮಾತನಾಡಿ, ಸರ್ಕಾರದ ಕಾಯ್ದೆಗಳಿಗೆ ಬಹುತೇಕ ರೈತರ ಸಹಮತವಿದೆ. ಆದರೆ, ಕೆಲವರು ವೃಥಾ ಆರೋಪಗಳನ್ನು ಮಾಡುತ್ತಾ ಪ್ರತಿಭಟನೆಗೆ ಇಳಿದಿದ್ದಾರೆ. ನಾವು ಸುಪ್ರೀಂಕೋರ್ಟ್ ನಿರ್ದೇಶನದಂತೆ ಅವರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.