ಅಗ್ನಿಪಥ್ ಯೋಜನೆ: ಇನ್ನಷ್ಟು ತೀವ್ರಗೊಳ್ಳಲಿರುವ ಬಿಜೆಪಿ -ಕಾಂಗ್ರೆಸ್ ಜಟಾಪಟಿ
ಸೇನೆಗೆ ಹೆಚ್ಚು ಸಂಖ್ಯೆಯಲ್ಲಿ ಸೈನಿಕರನ್ನು ಪೂರೈಸುವ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯ ಲಿರುವುದರಿಂದ, ಅಗ್ನಿಪಥ ಯೋಜನೆ ವಿರುದ್ಧ ಕಾಂಗ್ರೆಸ್‌ನ ಹೋರಾಟ-ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಎಸ್ಪಿ ಭರವಸೆ ನೀಡಿದೆ.;
ಕೇಂದ್ರದ ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಗಳ ಮತ್ತಷ್ಟು ತೀವ್ರಗೊಳ್ಳಲಿದೆ.
ಗುರುವಾರ (ಜುಲೈ 4) ಕಾಂಗ್ರೆಸ್ ವಿವಾದಾತ್ಮಕವಾದ ಸಶಸ್ತ್ರ ಪಡೆಗಳ ತಾತ್ಕಾಲಿಕ ನೇಮಕ ಯೋಜನೆಯನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿತು. ಹತ್ಯೆಯಾದ ಅಗ್ನಿವೀರ ಅಜಯ್ ಕುಮಾರ್ ಅವರ ಕುಟುಂಬಕ್ಕೆ ʻಈಗಾಗಲೇ 98.39 ಲಕ್ಷ ರೂ. ಪಾವತಿಸ ಲಾಗಿದೆʼ ಮತ್ತು ಪೊಲೀಸ್ ದೃಡೀಕರಣದ ಬಳಿಕ ಅಂದಾಜು 67 ಲಕ್ಷ ರೂ. ಹೆಚ್ಚುವರಿ ಎಕ್ಸ್ ಗ್ರೇಷಿಯ ಮತ್ತು ಸೌಕರ್ಯಗಳನ್ನು ನೀಡಲಾಗುವುದು ಎಂಬ ಸೇನೆಯ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಸೇನೆಯ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾ ನಿರ್ದೇಶನಾಲಯ ನೀಡಿದ ʻಕುಮಾರ್ ಅವರ ಕುಟುಂಬವು ಅಂತಿಮವಾಗಿ ಸುಮಾರು 1.65 ಕೋಟಿ ರೂ.ಗಳನ್ನು ಪಡೆಯಲಿದೆ ಎಂಬ ಸ್ಪಷ್ಟೀಕರಣವು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಇತ್ತೀಚೆಗೆ ನೀಡಿದ ʻಅಗ್ನಿವೀರರು ಪರಿಹಾರ ಅಥವಾ ಹುತಾತ್ಮ ಸ್ಥಾನಮಾನವನ್ನು ಪಡೆಯುವುದಿಲ್ಲʼ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಬಂದಿದೆ. ಪಂಜಾಬ್‌ನ ಲೂಧಿಯಾನ ಜಿಲ್ಲೆಯ ರಾಮಗಢ ಸರ್ದಾರನ್ ಗ್ರಾಮದ ಕುಮಾರ್, ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನೆಲಬಾಂಬ್ ಸ್ಫೋಟದಿಂದ ಜನವರಿಯಲ್ಲಿ ಮೃತಪಟ್ಟರು.
ರಾಹುಲ್ ವಿಡಿಯೋ ಬಿಡುಗಡೆ: ಲೋಕಸಭೆಯಲ್ಲಿ ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ರಾಹುಲ್ ಮಾಡಿದ ಆರೋಪಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದರು.
ಅಗ್ನಿಪಥ್ ಬಗ್ಗೆ ರಾಹುಲ್ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದ ಸಿಂಗ್, ಹತ್ಯೆಗೀಡಾದ ಅಗ್ನಿವೀರರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು. ಸಿಂಗ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ರಾಹುಲ್, ಬುಧವಾರ (ಜುಲೈ 3) ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಸಿಂಗ್ ಅವರು ʻಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆʼ ಎಂದು ಆರೋಪಿಸಿದ್ದಾರೆ.
ಮೇ ತಿಂಗಳಲ್ಲಿ ಕುಮಾರ್ ಅವರ ಕುಟುಂಬದೊಂದಿಗೆ ರಾಹುಲ್ ನಡೆಸಿದ ಸಂವಾದ ವಿಡಿಯೋದಲ್ಲಿ ಇದೆ. ಕುಮಾರ್ ಅವರ ತಂದೆ ʻಪಂಜಾಬ್ ಸರ್ಕಾರ ನಮಗೆ 1 ಕೋಟಿ ರೂ. ನೀಡಿದೆ. ಕೇಂದ್ರ ಸರ್ಕಾರ ಯಾವುದೇ ಹಣ ನೀಡಿಲ್ಲʼ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಹುಲ್ ಮತ್ತು ರಾಜನಾಥ್ ಸಿಂಗ್ ನಡುವೆ ನಡೆದ ಬಿಸಿ ಬಿಸಿ ಚರ್ಚೆ ಬಳಿಕ ಕುಮಾರ್ ಅವರ ತಂದೆ ನೀಡಿದ ಹೊಸ ಹೇಳಿಕೆ ಕೂಡ ವಿಡಿಯೋದಲ್ಲಿದೆ. ʻಕೇಂದ್ರ ತಮ್ಮ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ ಮತ್ತು ರಾಹುಲ್ ಗಾಂಧಿ ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆʼ ಎಂದು ಕುಮಾರ್ ತಂದೆ ಹೇಳಿದ್ದಾರೆ. ರಾಹುಲ್ ಈ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಸೇನೆಯ ಎಡಿಜಿಪಿ ಐ, ಎಕ್ಸ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ʻಅಗ್ನಿವೀರ ಅಜಯ್ ಕುಮಾರ್ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಭಾರತೀಯ ಸೇನೆ ವಂದನೆ ಸಲ್ಲಿಸುತ್ತದೆʼ ಎಂಬ ಎಡಿಜಿಪಿಐ ಹೇಳಿಕೆಯು ರಾಹುಲ್ ವಿರುದ್ಧ ಪ್ರತಿದಾಳಿ ನಡೆಸಲು ಬಿಜೆಪಿಗೆ ಮದ್ದುಗುಂಡು ನೀಡುತ್ತದೆ ಎಂದು ಕೇಂದ್ರ ಆಶಿಸಿರಬಹುದು. ಆದರೆ, ಕಾಂಗ್ರೆಸ್ ಇನ್ನಷ್ಟು ತೀವ್ರವಾಗಿ ಪ್ರತಿದಾಳಿ ನಡೆಸಿತು.
ಕಾಂಗ್ರೆಸ್ಸಿನ ಹೊಸ ಅಸ್ತ್ರ: ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರಿಂದ ಗುರುವಾರ ಮೊದಲ ಬಾಣ ಬಂದಿತು. ಖೇರಾ ಎಕ್ಸ್‌ನ ಪೋಸ್ಟ್‌ನಲ್ಲಿ ಕೇಂದ್ರ ಮತ್ತು ರಾಜನಾಥ್ ಸಿಂಗ್ ಮೇಲೆ ದಾಳಿ ನಡೆಸಿದರು; ʼದಯವಿಟ್ಟು ಭಾರತೀಯ ಸೇನೆಯ ಹಿಂದೆ ಅಡಗಿಕೊಳ್ಳಬೇಡಿ. ಹುತಾತ್ಮ ಯೋಧ ಅಜಯ್ ಕುಮಾರ್ ಅವರ ಕುಟುಂಬಕ್ಕೆ 1 ಕೋಟಿ ರೂ. ನೀಡಲಾಗಿದೆ ಎಂದು ನೀವು ಸಂಸತ್ತಿನಲ್ಲಿ ಘೋಷಿಸಿದಿರಿ. ಅವರ ತಂದೆ ಹಣ ನೀಡಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ನೀವು ಕೊಟ್ಟಿದ್ದೇವೆ ಎಂದು ಹೇಳುತ್ತಿರುವ ಮೊತ್ತದಲ್ಲಿ ವಿಮೆ ಹಣ ಎಷ್ಟು? ರಾಜ್ಯ ಸರ್ಕಾರ ನೀಡಿರುವ ಮೊತ್ತ ಎಷ್ಟು? ಹುತಾತ್ಮರ ಕುಟುಂಬಕ್ಕೆ ನೀಡಿದ ವಿಮೆ ಹಣವನ್ನೂ ನಿಮ್ಮಸರ್ಕಾರ ನೀಡಿದ ಉಪಕಾರ ಎಂದು ನೀವು ಹೇಳುತ್ತಿದ್ದೀರಾ?ʼ
ಆನಂತರ, ಕಾಂಗ್ರೆಸ್‌ನ ಮಾಜಿ ಸೈನಿಕರ ವಿಭಾಗದ ಅಧ್ಯಕ್ಷ ಕರ್ನಲ್ (ನಿವೃತ್ತ) ರೋಹಿತ್ ಚೌಧರಿ ಮತ್ತು ಪಕ್ಷದ ವಕ್ತಾರ ವಿಂಗ್ ಕಮಾಂಡರ್ (ನಿವೃತ್ತ) ಅನುಮಾ ಆಚಾರ್ಯ ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, ಎಡಿಜಿಪಿಐ ಹೇಳಿಕೆಯಲ್ಲಿನ ಲೋಪಗಳ ಮಾಹಿತಿ ನೀಡಿದರು.
ಅಗ್ನಿವೀರ್ ಕಾರ್ಯನೀತಿ ಪ್ರಕಾರ, ಕರ್ತವ್ಯದಲ್ಲಿರುವಾಗ ಮೃತರಾದವರು 48 ಲಕ್ಷ ರೂ. ವಿಮೆ, 44 ಲಕ್ಷ ರೂ ಎಕ್ಸ್ ಗ್ರೇಷಿಯಾ ಮತ್ತು ಸೇನೆಯ ಯುದ್ಧ ಅಪಘಾತದ ಕಲ್ಯಾಣ ನಿಧಿಯಿಂದ 8 ಲಕ್ಷ ರೂ.ಗೆ ಅರ್ಹರು ಎಂದು ಚೌಧರಿ ಹೇಳಿದರು.
ಅವರ ಪ್ರಕಾರ, ಲೋಕಸಭೆಯಲ್ಲಿ ಸಿಂಗ್ ಅವರ ಪ್ರತಿಪಾದನೆ ʻಅರ್ಧ ಸತ್ಯʼ. ಇದು ಹತ್ಯೆಗೀಡಾದ ಅಗ್ನಿವೀರರಿಗೆ 1 ಕೋಟಿ ರೂ. (ವಿಮೆ ಮತ್ತು ಇತರ ನೆರವು), 15 ವರ್ಷ ಸಿಪಾಯಿ ಶ್ರೇಣಿಯಲ್ಲಿ ಸೇವೆ ಸಲ್ಲಿಸಿದ ಮತ್ತು ಹುತಾತ್ಮರಾದವರಿಗೆ 2.43 ಕೋಟಿ ರೂ.ಗಿಂತ ಹೆಚ್ಚು ಮತ್ತು 24 ವರ್ಷ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದವರಿಗೆ 3.25 ಕೋಟಿ ರೂ. ಪಾವತಿಸಲಾಗುತ್ತದೆ ಎಂಬ ಅಂಶವನ್ನು ಮರೆಮಾಚುತ್ತದೆ.
ಸೇನೆಯಲ್ಲಿ ಪ್ರತ್ಯೇಕ ಗುಂಪುಗಳ ಸೃಷ್ಟಿ: ಹತ್ಯೆಗೀಡಾದ ಅಗ್ನಿವೀರರು ಮತ್ತು ಸಶಸ್ತ್ರ ಪಡೆಗಳ ಸಾಮಾನ್ಯ ನೇಮಕಗಳಿಗೆ ನೀಡುವ ʻಪಾವತಿಯಲ್ಲಿನ ವ್ಯತ್ಯಾಸʼ ಗಳನ್ನು ಚೌಧರಿ ವಿವರಿಸಿದರು. ಅಗ್ನಿವೀರ ಯೋಜನೆಯು ʻಸಶಸ್ತ್ರ ಪಡೆಗಳೊಳಗೆ ವಿಭಾಗಗಳನ್ನು ಸೃಷ್ಟಿಸಿದೆ. ಇಬ್ಬರೂ ದೇಶಕ್ಕೆ ಸೇವೆ ಸಲ್ಲಿಸಿ, ಪ್ರಾಣ ಒತ್ತೆಯಿಟ್ಟು ಕಾರ್ಯ ನಿರ್ವಹಿಸುತ್ತಿದ್ದರೂ, ಎರಡು ಪ್ರತ್ಯೇಕ ಗುಂಪುಗಳನ್ನುಸೃಷ್ಟಿಸಿದೆ ಎಂದು ಅವರು ಹೇಳಿದರು.
ʻಅಗ್ನಿವೀರರಿಗೆ ವಿಮೆ 48 ಲಕ್ಷ ರೂ. ಸಾಮಾನ್ಯ ನೇಮಕಕ್ಕೆ 75 ಲಕ್ಷ ರೂ.; ಅಗ್ನಿವೀರರಿಗೆ ಎಕ್ಸ್ ಗ್ರೇಷಿಯಾ 44 ಲಕ್ಷ ರೂ. ಸಾಮಾನ್ಯ ನೇಮಕಕ್ಕೆ 55 ಲಕ್ಷ ರೂ. ಕರ್ತವ್ಯದಲ್ಲಿರುವಾಗ ಮೃತಪಟ್ಟ ಸಾಮಾನ್ಯ ನೇಮಕ ಹೊಂದಿದವ ಹುತಾತ್ಮನ ಸ್ಥಾನಮಾನ ಪಡೆಯುತ್ತಾನೆ. ಆದರೆ, ಅಗ್ನಿವೀರರು ಹುತಾತ್ಮರಾಗುವುದಿಲ್ಲ.ಅಗ್ನಿವೀರರನ್ನು ಎಲ್ಲ ಅನುಕೂಲಗಳಿಂದ ಹೊರಗಿಡಲಾಗಿದೆ ಎಂದು ಚೌಧರಿ ಹೇಳಿದರು.
ಸೇನೆಯ ನೇಮಕ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕರ್ತವ್ಯದ ಮೊದಲ ದಿನ ಸೇವೆಯಲ್ಲಿರುವ ಅಗ್ನಿವೀರ ಕೊಲ್ಲಲ್ಪಟ್ಟರೆ, ಅವರ ಕುಟುಂಬಕ್ಕೆ ಮುಂದಿನ ನಾಲ್ಕು ವರ್ಷಗಳವರೆಗೆ ಸಂಪೂರ್ಣ ವೇತನ(ಸುಮಾರು 4 ಲಕ್ಷ ರೂ.) ನೀಡಲಾಗುತ್ತದೆ. ಆದರೆ, ಸಾಮಾನ್ಯ ನೇಮಕ ಗೊಂಡವರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಮುಂದಿನ 15 ವರ್ಷಗಳ ಪೂರ್ಣ ವೇತನ ನೀಡಲಾಗುತ್ತದೆ. ಜೊತೆಗೆ, ಜೀವಿತಾವಧಿ ಪಿಂಚ ಣಿ, ಗ್ರಾಚ್ಯುಟಿ ಮತ್ತು ವೈದ್ಯಕೀಯ ಪ್ರಯೋಜನ, ಕ್ಯಾಂಟೀನ್, ಶೈಕ್ಷಣಿಕ ಮತ್ತು ವಿದ್ಯಾರ್ಥಿವೇತನ ಪ್ರಯೋಜನಗಳು ಸಿಗುತ್ತವೆ.
ಅಗ್ನಿಪಥ ಯೋಜನೆ ಕುರಿತು ಕೇಂದ್ರ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಈ ಬೇಡಿಕೆಯನ್ನು ಮಂಡಿಸಲು ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಡಿಯ ಒಕ್ಕೂಟದ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ದ ಫೆಡರಲ್‌ಗೆ ತಿಳಿಸಿವೆ.
ಎಸ್ಪಿ ಬೆಂಬಲ: ಅಖಿಲೇಶ್ ಯಾದವ್ ಅವರು ಅಗ್ನಿಪಥ್ ವಿರುದ್ಧದ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿ ದ್ದಾರೆ. ಸಮಾಜವಾದಿ ಪಕ್ಷವು ಲೋಕಸಭೆಯಲ್ಲಿ 37 ಸದಸ್ಯರನ್ನು ಹೊಂದಿದೆ. ಎಸ್ಪಿಯ ರಾಜಕೀಯ ಕರ್ಮಭೂಮಿಯಾದ ಉತ್ತರ ಪ್ರದೇಶವು ಸಶಸ್ತ್ರ ಪಡೆಗಳಿಗೆ ಪ್ರಮುಖ ನೇಮಕ ನೆಲೆಯಾಗಿದೆ. ಈ ವಿವಾದಾತ್ಮಕ ಯೋಜನೆ ವಿರುದ್ಧ ಎಸ್ಪಿ-ಕಾಂಗ್ರೆಸ್ ಪ್ರಚಾರದಿಂದ ಲೋಕಸಭೆ ಚುನಾ ವಣೆಯಲ್ಲಿ ಬಿಜೆಪಿಗೆ ಹೊಡೆತ ಬಿದ್ದಿದೆ.
ಸಶಸ್ತ್ರ ಪಡೆಗಳ ಪ್ರಮುಖ ನೇಮಕ ರಾಜ್ಯಗಳಲ್ಲಿ ಒಂದಾದ ಹರಿಯಾಣದಲ್ಲಿ 2024ರ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಗ್ನಿಪಥ್ ವಿರುದ್ಧದ ಕಾಂಗ್ರೆಸ್ ಹೋರಾಟ ತೀವ್ರಗೊಳ್ಳಲಿದೆ ಎಂದು ಮೂಲಗಳು ಹೇಳುತ್ತವೆ.
ʻಅಗ್ನಿವೀರ ಹರಿಯಾಣದಲ್ಲಿ ದೊಡ್ಡ ವಿಷಯವಾಗಲಿದೆ. ಏಕೆಂದರೆ, ಇದು ಸಶಸ್ತ್ರ ಪಡೆಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಸೈನಿಕರನ್ನು ಕಳುಹಿಸುವ ರಾಜ್ಯ. ಅಗ್ನಿಪಥ್ ಯೋಜನೆ ಕುರಿತ ನಮ್ಮ ನಿಲುವು ಹರಿಯಾಣ ಮತ್ತು ಸೇನೆಗೆ ಹೆಚ್ಚು ಜನರನ್ನು ಕಳಿಸುವ ಎಲ್ಲಾ ರಾಜ್ಯಗಳಲ್ಲಿ ಮೆಚ್ಚುಗೆ ಪಡೆದಿದೆ ಎಂದು ಲೋಕಸಭೆ ಚುನಾವಣೆ ಫಲಿತಾಂಶಗಳು ತೋರಿಸುತ್ತವೆ. ಹೀಗಾಗಿ, ಕೇಂದ್ರ ಯೋಜನೆ ರದ್ದುಪಡಿಸುವವರೆಗೆ ನಾವು ಹೋರಾಡುತ್ತೇವೆ. ಯೋಜನೆಯ ನ್ಯೂನತೆಗಳು ಮತ್ತು ಸರ್ಕಾರದ ಸುಳ್ಳುಗಳನ್ನು ಬಹಿರಂಗಪಡಿಸಲು ಆಂದೋಲನ ಮತ್ತು ಪತ್ರಿಕಾಗೋಷ್ಠಿ ಗಳನ್ನು ಆಯೋಜಿಸಲಾಗುತ್ತದೆ,ʼ ಎಂದು ಹರಿಯಾಣದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ದಿ ಫೆಡರಲ್‌ಗೆ ತಿಳಿಸಿದರು.
ಕುಮಾರ್ ಅವರ ಕುಟುಂಬದೊಡನೆ ನಡೆಸಿದ ಸಂವಾದದಂತೆ, ಸರ್ಕಾರವು ಅಗ್ನಿವೀರರನ್ನು ಹುತಾತ್ಮರೆಂದು ಪರಿಗಣಿಸಲು ಕೂಡ ಸಿದ್ಧವಿಲ್ಲ ಎಂಬುದನ್ನು ಮನವರಿಕೆ ಮಾಡಲು ಕಾಂಗ್ರೆಸ್ ನಾಯಕರು ಮತ್ತು ಹತ್ಯೆಗೀಡಾದ 13 ಅಗ್ನಿವೀರರ ಕುಟುಂಬಗಳ ನಡುವೆ ಮುಂಬರುವ ತಿಂಗಳುಗಳಲ್ಲಿ ಸಂವಾದಗಳು ನಡೆಯಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.