DELHI CM POST | ಯಾರಾಗಲಿದ್ದಾರೆ ದೆಹಲಿಯ ನೂತನ ಮುಖ್ಯಮಂತ್ರಿ?
ಕೇಜ್ರಿವಾಲ್ ಅವರು ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು,ಲೆಫ್ಟಿನೆಂಟ್ ಗವರ್ನರ್ ಅಂಗೀಕರಿಸಿದ ಬಳಿಕ ಹೊಸ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಹಾಗಾದರೆ, ಯಾರಾಗಲಿದ್ದಾರೆ ಮುಂದಿನ ದೆಹಲಿ ಸಿಎಂ?;
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್ ಸೆಪ್ಟೆಂಬರ್ 15 ರಂದು ಘೋಷಿಸಿದ್ದಾರೆ. ಫೆಬ್ರವರಿ 2025ರಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಹುದ್ದೆ ಕೆಲವೇ ತಿಂಗಳಿಗೆ ಸೀಮಿತವಾಗಿದೆ. ಎಎಪಿ ನವೆಂಬರ್‌ನಲ್ಲಿ ಚುನಾವಣೆಗೆ ಒತ್ತಾಯಿಸುತ್ತಿದೆ. ಎಎಪಿ ನಾಯಕತ್ವವು ಪ್ರಮುಖ ವಿಷಯಗಳಲ್ಲಿ ಪಕ್ಷದ ನಿಲುವನ್ನು ವ್ಯಕ್ತಪಡಿಸಬಲ್ಲ ಮತ್ತು ಪಕ್ಷದಲ್ಲಿ ಎಲ್ಲರಿಗೂ ಸಮ್ಮತ ನಾಯಕನನ್ನು ಹುಡುಕುತ್ತಿದೆ.
ಇನ್ನೂ ಚರ್ಚೆ ನಡೆದಿಲ್ಲ: ದೆಹಲಿ ಸಚಿವ ಸೌರಭ್ ಭಾರದ್ವಾಜ್ ಪ್ರಕಾರ, ಕೇಜ್ರಿವಾಲ್ ಅವರು ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬದಲಿ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ʻ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅವರು ಲೆಫ್ಟಿನೆಂಟ್ ಗವರ್ನರ್ ಗೆ ರಾಜೀನಾಮೆ ಸಲ್ಲಿಸಿ, ಅವರು ರಾಜೀನಾಮೆ ಅಂಗೀಕರಿಸಿದ ನಂತರ ಶಾಸಕರ ಸಭೆ ನಡೆಸಲಾಗುವುದು,ʼ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ʻಆಯ್ಕೆಯಾದವರು ಎಲ್‌ಜಿ ಮೂಲಕ ರಾಷ್ಟ್ರಪತಿಗೆ ತಮ್ಮ ಹಕ್ಕು ಸಲ್ಲಿಸುತ್ತಾರೆ. ನಮಗೆ ಬಹುಮತವಿದೆ. ನಮ್ಮನ್ನು ಆಹ್ವಾನಿಸಿದ ಬಳಿಕ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಒಂದು ವಾರ ಬೇಕು,ʼ ಎಂದು ಹೇಳಿದರು.
ಸಿಸೋಡಿಯಾ ಮತ್ತು ಸುನೀತಾ ಕೇಜ್ರಿವಾಲ್?: ಮುಖ್ಯಮಂತ್ರಿ ಹುದ್ದೆಗೆ ಹೆಚ್ಚು ಸಂಭವನೀಯರಾದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮದ್ಯ ನೀತಿ ಪ್ರಕರಣದಲ್ಲಿ ಆರೋಪಿ. ತಾವಿಬ್ಬರೂ ʻಪ್ರಾಮಾಣಿಕʼರು ಎಂದು ಜನ ಹೇಳಿದ ನಂತರವಷ್ಟೇ ಮರಳುತ್ತೇವೆ ಎಂದು ಕೇಜ್ರಿವಾಲ್ ಕಾರ್ಯಕರ್ತರಿಗೆ ಹೇಳಿದ್ದಾರೆ.
ಕೇಜ್ರಿವಾಲ್ ಅವರ ಪತ್ನಿ ಹರಿಯಾಣ, ದೆಹಲಿ ಮತ್ತು ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಮುಖ ಪ್ರಚಾರಕ ರಾಗಿದ್ದರಿಂದ, ಅವರಿಗೆ ಉನ್ನತ ಹುದ್ದೆ ನೀಡಬಹುದೇ? ಆದರೆ, ಅವರು ಪಕ್ಷದ ಸದಸ್ಯೆಯಲ್ಲ ಮತ್ತು ಸಿಎಂ ಆದ ಮೂರು ತಿಂಗಳೊಳಗೆ ಶಾಸಕಿಯಾಗಿ ಆಯ್ಕೆಯಾಗಬೇಕಾಗುತ್ತದೆ.
ಹಾಗಾದರೆ, ಇತರ ಪ್ರಬಲ ಸಂಭವನೀಯರು ಯಾರು?
ಅತಿಶಿ ಮರ್ಲೇನಾ: ಅರವಿಂದ್ ಕೇಜ್ರಿವಾಲ್ ಅವರು ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜವನ್ನು ಹಾರಿಸಲು ಅತಿಶಿ ಅವರನ್ನು ಆಯ್ಕೆ ಮಾಡಿದ್ದರು; ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವಕಾಶ ನೀಡಲಿಲ್ಲ.ಅತಿಶಿ(43) ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಮತ್ತು ರೋಡ್ಸ್ ವಿದ್ವಾಂಸೆ. ಪ್ರಸ್ತುತ 14 ಇಲಾಖೆಗಳ ಉಸ್ತುವಾರಿ ವಹಿಸಿದ್ದು, ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣವನ್ನು ಉತ್ತಮ ಹಂತಕ್ಕೆ ಏರಿಸಿದ್ದು, ರಾಜಧಾನಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಪ್ರಬಲ ವಾಕ್ಚಾತುರ್ಯ ಕೌಶಲವಿರುವ ಅವರು ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ.
ಗೋಪಾಲ ರೈ: ಕಾರ್ಮಿಕ ಹೋರಾಟ ಮತ್ತು ವಿದ್ಯಾರ್ಥಿ ಸಂಘಟನೆಯ ಹಿನ್ನೆಲೆ ಹೊಂದಿರುವ ಗೋಪಾಲ್ ರೈ(49), ನೆಲ ಮಟ್ಟದ ಕೆಲಸ ಮತ್ತು ಅನುಭವಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಪರಿಸರ, ಅರಣ್ಯ ಮತ್ತು ವನ್ಯಜೀವಿ, ಅಭಿವೃದ್ಧಿ ಮತ್ತು ಸಾಮಾನ್ಯ ಆಡಳಿತ ಖಾತೆಯ ಕ್ಯಾಬಿನೆಟ್ ಮಂತ್ರಿಯಾಗಿರುವ ಅವರು , ದೆಹಲಿಯ ಕಾರ್ಮಿಕ ವರ್ಗದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ತೋಳಿಗೆ ಗುಂಡು ತಗುಲಿ, ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವರು ಈಗ ಗುಣ ಹೊಂದಿದ್ದಾರೆ.
ಕೈಲಾಶ್ ಗೆಹ್ಲೋಟ್: ವೃತ್ತಿಯಲ್ಲಿ ವಕೀಲ; ಸಾರಿಗೆ, ಹಣಕಾಸು ಮತ್ತು ಗೃಹ ವ್ಯವಹಾರಗಳಂತಹ ಪ್ರಮುಖ ಖಾತೆ ಹೊಂದಿರುವ ಕೈಲಾಶ್( 50), 2015 ರಿಂದ ದೆಹಲಿಯ ನಜಾಫ್‌ಗಢ ಕ್ಷೇತ್ರದ ಶಾಸಕ. ನಗರದ ಸಾರಿಗೆ ಮೂಲಸೌಕರ್ಯ ಸುಧಾರಣೆಯಲ್ಲಿ ಗಣನೀಯ ಕೆಲಸ ಮಾಡಿ, ದೆಹಲಿಯಲ್ಲಿ ಚಿರಪರಿಚಿತರಾಗಿದ್ದಾರೆ. ಬಸ್ ಸೇವೆಗಳ ವಿಸ್ತರಣೆ, ಎಲೆಕ್ಟ್ರಿಕ್ ಬಸ್‌ಗಳ ಪರಿಚಯ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಕೆಲಸ ಮಾಡಿದರು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ ವಕೀಲಿಕೆ ಮಾಡಿದ್ದು, 2005-2007 ರ ನಡುವೆ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನಲ್ಲಿ ಕಾರ್ಯನಿರ್ವಾಹಕ ಸದಸ್ಯರಾಗಿದ್ದರು.
ಸೌರಭ್ ಭಾರದ್ವಾಜ್: ಮಾಜಿ ಸಾಫ್ಟ್‌ವೇರ್ ಇಂಜಿನಿಯರ್ ಸೌರಭ್ ಭಾರದ್ವಾಜ್, ಗ್ರೇಟರ್ ಕೈಲಾಶ್‌ನಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. ವಿಚಕ್ಷಣ ಮತ್ತು ಆರೋಗ್ಯ ಖಾತೆಗಳನ್ನು ಉಸ್ತುವಾರಿ ವಹಿಸಿದ್ದು, ಎಎಪಿಯ ರಾಷ್ಟ್ರೀಯ ವಕ್ತಾರ. ಮದ್ಯ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಬಂಧನದ ನಂತರ ಸಚಿವರಾದರು.