ಜೆಎ‌ನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಕ್ಷಗಳ ಗೆಲುವು

ಮೊದಲ ದಲಿತ ಅಧ್ಯಕ್ಷ ಧನಂಜಯ್;

Update: 2024-03-25 08:23 GMT

ನಾಲ್ಕು ವರ್ಷಗಳ ನಂತರ ನಡೆದ ನವದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಕ್ಷಗಳು ಎಲ್ಲ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ (ಮಾರ್ಚ್ 25) ಮುಂಜಾನೆ ಸಂಭ್ರಮಾಚರಣೆ ನಡೆಯಿತು. 

ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ)ದ ಧನಂಜಯ್ ಅವರು ಪ್ರತಿಸ್ಪರ್ಧಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ನ ಉಮೇಶ್ ಸಿ. ಅಜ್ಮೀರಾ ಅವರನ್ನು ಸೋಲಿಸಿದರು. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ)ದ ಅವಿಜಿತ್ ಘೋಷ್ ಉಪಾಧ್ಯಕ್ಷ, ಎಡಪಕ್ಷ ಬೆಂಬಲಿತ ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್‌ (ಬಾಪ್ಸಾ)ನ ಪ್ರಿಯಾಂಶಿ ಆರ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮೊಹಮ್ಮದ್ ಸಾಜಿದ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 

ಧನಂಜಯ್ ಯಾರು?: ಜೆಎನ್‌ಯುನ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಸೌಂದರ್ಯಶಾಸ್ತ್ರದ ಪಿಎಚ್‌ಡಿ ವಿದ್ಯಾರ್ಥಿಯಾದ ಧನಂಜಯ್‌, ಬಿಹಾರದ ಗಯಾ ಮೂಲದವರು. 1996-97ರಲ್ಲಿ ಬಟ್ಟಿ ಲಾಲ್ ಬೈರ್ವಾ ನಂತರ ಎಡಪಕ್ಷದಿಂದ ಜೆಎನ್‌ಯುಎಸ್‌ಯುನ ಮೊದಲ ದಲಿತ ಅಧ್ಯಕ್ಷ. ಅವರು 922 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಮಹಿಳೆಯರ ಸುರಕ್ಷತೆ, ನೀರು ಮತ್ತು ಮೂಲಸೌಕರ್ಯ ಕೊರತೆ ನಿವಾರಣೆ, ವಿದ್ಯಾರ್ಥಿವೇತನದಲ್ಲಿ ಹೆಚ್ಚಳ ಇತ್ಯಾದಿ ಅವರ ಕಾರ್ಯಸೂಚಿಯಾಗಿದೆ. 

ʻ ತಮ್ಮ ಗೆಲುವು ದ್ವೇಷ ಮತ್ತು ಹಿಂಸಾಚಾರದ ರಾಜಕೀಯದ ವಿರುದ್ಧ ವಿದ್ಯಾರ್ಥಿಗಳ ಜನಾಭಿಪ್ರಾಯ. ಶುಲ್ಕ ಹೆಚ್ಚಳದ ವಿರುದ್ಧ ಮತ್ತು ಎಲ್ಲರಿಗೂ ಹಾಸ್ಟೆಲ್ ಸಿಗುವಂತೆ ಮಾಡಿರುವುದದಿಂದ ವಿದ್ಯಾರ್ಥಿಗಳು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ' ಎಂದು ಧನಂಜಯ್ ಹೇಳಿದ್ದಾರೆ. 

Tags:    

Similar News