Pahalgam Terror Attack | ಜಮ್ಮು- ಕಾಶ್ಮೀರದಲ್ಲಿ ಅಮಾನವೀಯ ದಾಳಿ ನಡೆಸಿದ ಟಿಆರ್​ಎಫ್​ ಸಂಘಟನೆಯ ಯಾವುದು? ಅದರ ಹಿನ್ನೆಲೆ ಏನು?

ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಎಂಬ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಹಾಗಾದರೆ ಈ ಉಗ್ರ ಸಂಘಟನೆ ಯಾವುದು? ಎಲ್ಲಿ ಈ ಸಂಘಟನೆಯ ಬೇರಿದೆ ಎಂಬೆಲ್ಲ ವಿವರಗಳು ಇಲ್ಲಿವೆ.;

Update: 2025-04-23 01:00 GMT

ಜಮ್ಮು ಮತ್ತು ಕಾಶ್ಮೀರದ ಅನಂತನಾಗ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್​ಗಾಮ್​ನಲ್ಲಿ ಮಂಗಳವಾರ (ಏಪ್ರಿಲ್​ 22ರಂದು) ನಡೆದ ಭೀಕರ ಭಯೋತ್ಪಾದಕ ದಾಳಿಯು ಇಡೀ ದೇಶವನ್ನೇ ಬೆಚ್ಚಿಬಿಳಿಸಿದೆ. ಈ ದಾಳಿಯಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ. ಬಹುತೇಕ ಎಲ್ಲರೂ ಪ್ರವಾಸಿಗರಾಗಿದ್ದು ಇಬ್ಬರು ಕನ್ನಡಿಗರೂ ಸೇರಿದ್ದಾರೆ.

ಈ ಅಮಾನುಷ ಕೃತ್ಯದ ಹೊಣೆಗಾರಿಕೆಯನ್ನು 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಎಂಬ ಭಯೋತ್ಪಾದಕ ಸಂಘಟನೆಯು ಹೊತ್ತುಕೊಂಡಿದೆ. ಹಾಗಾದರೆ ಈ ಉಗ್ರ ಸಂಘಟನೆ ಯಾವುದು? ಎಲ್ಲಿ ಈ ಸಂಘಟನೆಯ ಬೇರಿದೆ ಎಂಬೆಲ್ಲ ವಿವರಗಳು ಇಲ್ಲಿವೆ.

ಟಿಆರ್​ಎಫ್​ ಸಂಘಟನೆಯ ಹಿನ್ನೆಲೆ

ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬುದು 2019ರ ಅಕ್ಟೋಬರ್‌ನಲ್ಲಿ ರಚನೆಯಾದ ಒಂದು ಭಯೋತ್ಪಾದಕ ಸಂಘಟನೆ, ಇದು ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಸ್ಥಾಪನೆಗೊಂಡಿತು. ಈ ಸಂಘಟನೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಒಂದು ಶಾಖೆ ಎಂದು ಗುರುತಿಸಲಾಗಿದೆ. TRFನ ಸ್ಥಾಪಕನಾದ ಶೇಖ್ ಸಜ್ಜಾದ್ ಗುಲ್ (ಶೇಖ್ ಸಜ್ಜಾದ್) ಇದರ ಸರ್ವೋನ್ನತ ಕಮಾಂಡರ್ ಆಗಿದ್ದು, ಬಾಸಿತ್ ಅಹ್ಮದ್ ದಾರ್ ಇದರ ಕಾರ್ಯಾಚರಣಾ ಕಮಾಂಡರ್.

ಟಿಆರ್​​ಎಫ್​ ರಚನೆಯು ಆರಂಭದಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಕೆಡರ್‌ಗಳೊಂದಿಗೆ ನಡೆದಿತ್ತು. ಈ ಸಂಘಟನೆಯು ಕಾಶ್ಮೀರಿ ಹಿಂದೂಗಳು, ಸರ್ಕಾರಿ ಉದ್ಯೋಗಿಗಳು, ಕಾರ್ಮಿಕರು, ವ್ಯಾಪಾರಿಗಳು, ಸ್ಥಳೀಯ ರಾಜಕಾರಣಿಗಳು, ಪ್ರವಾಸಿಗರು ಮತ್ತು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳನ್ನೇ ನಡೆಸುತ್ತಿದೆ.

2023ರಲ್ಲಿ ಭಾರತ ಸರ್ಕಾರವು TRFನ್ನು ಗೃಹ ಸಚಿವಾಲಯದ ಅಕ್ರಮ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (UAPA) ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ. .

ಟಿಆರ್​ಎಫ್​ ತನ್ನ ದಾಳಿಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸುತ್ತದೆ ಮತ್ತು ಕಾಶ್ಮೀರದಲ್ಲಿ "ಅನ್ಯರ ಪ್ರವೇಶದ" ವಿರುದ್ಧ ಹೋರಾಡುವುದಾಗಿ ಹೇಳಿಕೊಳ್ಳುತ್ತದೆ. ಆದರೆ, ಇದರ ಕಾರ್ಯಾಚರಣೆಗಳು ಮತ್ತು ದಾಳಿಗಳು ಪಾಕಿಸ್ತಾನದಿಂದ ಪ್ರಾಯೋಜಿತವಾಗಿವೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ಆರೋಪಿಸಿವೆ. ಉದಾಹರಣೆಗೆ, ಈ ದಾಳಿಗೆ ಮುನ್ನ ಏಪ್ರಿಲ್‌ನ ಮೊದಲ ವಾರದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಪಹಲ್ಗಾಮ್‌ನ ಹೋಟೆಲ್‌ಗಳು ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿಗೆ ಬಂದಿದ್ದವು.

ದಾಳಿ ನಡೆದಿದ್ದು ಎಲ್ಲಿ?

ಮಂಗಳವಾರ ಮಧ್ಯಾಹ್ನ ಸುಮಾರು 2:30 ಗಂಟೆಗೆ ಈ ಭೀಕರ ದಾಳಿ ನಡೆದಿದೆ. ದಾಳಿ ನಡೆದ ಪ್ರದೇಶವು ದಟ್ಟ ಪೈನ್ ಕಾಡುಗಳು ಮತ್ತು ಪರ್ವತಗಳಿಂದ ಆವೃತವಾದ ವಿಶಾಲ ಹುಲ್ಲುಗಾವಲಾಗಿದ್ದು ಮಿನಿ ಸ್ವಿಜರ್ಲೆಂಡ್​ ಎಂದೇ ಕರೆಯಲಾಗುತ್ತದೆ. ಇಲ್ಲಿ ಆಹಾರ ಸವಿಯುವುದಕ್ಕೆ ಹಾಗೂ ಅಥವಾ ಪ್ರಕೃತಿಯ ಸೌಂದರ್ಯ ಆನಂದಿಸುವುದಕ್ಕೆ ಪ್ರವಾಸಿಗರು ಬರುತ್ತಾರೆ. ಅಂತೆಯೇ ಸೇನಾ ಸಮವಸ್ತ್ರ ಧರಿಸಿದ್ದ ಎರಡರಿಂದ ಮೂವರು ಭಯೋತ್ಪಾದಕರು ಆಗಮಿಸಿ, ಪ್ರವಾಸಿಗರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಒಬ್ಬೊಬ್ಬರನ್ನೇ ನೇರ ಗುಂಡಿಟ್ಟು ಹತ್ಯೆ ಮಾಡಿದ್ದರು. ಪ್ರವಾಸಿಗರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ನಿಂದ ಬಂದವರಾಗಿದ್ದರು. ಕೆಲವು ವಿದೇಶಿಯರೂ ಅಲ್ಲಿದ್ದರು.

ದಾಳಿಯ ಪರಿಣಾಮಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯನ್ನು ಖಂಡಿಸಿದ್ದಾರೆ. ಹೀಗಾಗಿ ಟಿಆರ್​ಎಫ್​ ವಿರುದ್ಧ ಕಾರ್ಯಾಚರಣೆ ಇನ್ನಷ್ಟು ಬಲವಾಗಲಿದೆ.  

Tags:    

Similar News