West Bengal Bypoll : ಆಡಳಿತ ವಿರೋಧಿ ಪ್ರತಿಭಟನೆಗಳ ನಡುವೆಯೂ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಗೆ ಎಲ್ಲ 6 ಕ್ಷೇತ್ರದಲ್ಲಿ ಜಯಭೇರಿ
ಬಿಜೆಪಿ ಭದ್ರಕೋಟೆ ಮದರಿಹಾತ್ ಸೇರಿದಂತೆ ಆರು ಸ್ಥಾನಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿಎಂಸಿ ಬಂಗಾಳದಲ್ಲಿ ಪ್ರಾಬಲ್ಯ ಹೆಚ್ಚಿಸಿದೆ. ಎಡಪಂಥೀಯ ಪ್ರಾಬಲ್ಯವನ್ನು ಟಿಎಂಸಿ ಹೈಜಾಕ್ ಮಾಡಿದೆ ಹಾಗೂ ಬಿಜೆಪಿ ಸ್ಥಾನವನ್ನೂ ತನ್ನದಾಗಿಸಿಕೊಂಡಿದೆ.;
ಬಿಜೆಪಿ ಭದ್ರಕೋಟೆ ಮದರಿಹಾಟ್ ಸೇರಿದಂತೆ ಆರು ಸ್ಥಾನಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿಎಂಸಿ ಬಂಗಾಳದಲ್ಲಿ ಪ್ರಾಬಲ್ಯ ಹೆಚ್ಚಿಸಿದೆ. ಎಡಪಂಥೀಯ ಪ್ರಾಬಲ್ಯವನ್ನು ಟಿಎಂಸಿ ಹೈಜಾಕ್ ಮಾಡಿದೆ.
ಆರ್‌ಜಿಕಾರ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಬಳಿಕ ಉಂಟಾಗಿರುವ ಆಡಳಿತ ವಿರೋಧಿ ಪ್ರತಿಭಟನೆಗಳು ಹಾಗೂ ಇನ್ನಿತರ ಬೆಳವಣಿಗೆಗಳನ್ನು ಮೆಟ್ಟಿ ನಿಂತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲಕ ಕಾಂಗ್ರೆಸ್ ಪಕ್ಷ. ಉಪಚುನಾಣೆಯಲ್ಲಿ ಎಲ್ಲ ಆರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.
ರಾಜ್ಯದ ಆಡಳಿತಾರೂಢ ಟಿಎಂಸಿ ಪಕ್ಷವು ಬುಡಕಟ್ಟು ಪ್ರಾಬಲ್ಯದ ಮದರಿಹಾತ್ ಕ್ಷೇತ್ರ ಸೇರಿದಂತೆ ಎಲ್ಲಾ ಆರು ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ. ವಿಶೇಷ ಅಂದರೆ ಮದರಿಹಾತ್‌ನಲ್ಲಿ ಟಿಎಂಸಿ ಅಭ್ಯರ್ಥಿ ಗೆದ್ದಿರುವುದು ಇದೇ ಮೊದಲು ಹಾಗೂ ಹಿಂದಿನ ಚುನಾವಣೆಯಲ್ಲಿ ಅದು ಬಿಜೆಪಿ ಪಾಲಾಗಿತ್ತು.
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾದ ನಂತರ ತಮ್ಮ ವಿಧಾನಸಭಾ ಸ್ಥಾನಗಳನ್ನು ತೊರೆದ ಶಾಸಕರು ಸ್ಥಾನಗಳಿಗೆ ಚುನಾವಣೆ ನಡೆಸಿತ್ತು. ನೈಹತಿ, ಹರೋವಾ, ಮೇದಿನಿಪುರ, ತಲ್ದಂಗ್ರಾ, ಸಿತೈ (ಎಸ್ಸಿ) ಮತ್ತು ಮದರಿಹಾಟ್ (ಎಸ್ಟಿ) ನಲ್ಲಿ ಉಪಚುನಾವಣೆಗಳು ನಡೆದವು.
ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಘಟನೆಯ ಬಗ್ಗೆ ಹೆಚ್ಚಿದ ರಾಜಕೀಯ ಉದ್ವಿಗ್ನತೆ ಮತ್ತು ಪ್ರತಿಭಟನೆಗಳ ನಡುವೆ ಈ ಚುನಾವಣೆ ನಡೆದಿತ್ತು. ಹೀಗಾಗಿ ಈ ಚುನಾವಣೆ ಸಾರ್ವಜನಿಕ ಭಾವನೆಯ ನಿರ್ಣಾಯಕ ಸಂಗತಿ ಎಂದು ಹೇಳಲಾಗಿತ್ತು. ಆದರೆ, ಆಡಳಿತಾರೂಢ ಟಿಎಂಸಿ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂಬುದು ಫಲಿತಾಂಶದಿಂದ ಪ್ರಕಟವಾಗಿದೆ.
ಪರಿಶಿಷ್ಟ ಜಾತಿ ಕ್ಷೇತ್ರವಾದ ಸಿತೈನಲ್ಲಿ ಟಿಎಂಸಿಯ ಸಂಗೀತಾ ರಾಯ್ 1,30,636 ಮತಗಳ ಅಂತರದಿಂದ ಜಯಗಳಿದ್ದಾರೆ. ಇಲ್ಲಿ ಬಿಜೆಪಿಯ ದೀಪಕ್ ಕುಮಾರ್ ರೇ ಕೇವಲ 35,348 ಮತಗಳನ್ನು ಪಡೆದುಕೊಂಡಿದ್ದಾರೆ. ಅಂತೆಯೇ, ಉತ್ತರ ಬಂಗಾಳದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಮದರಿಹಾತ್‌ನಲ್ಲಿ ಟಿಎಂಸಿಯ ಜಯಪ್ರಕಾಶ್ ಟೊಪ್ಪೊ 28,168 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಸ್ಥಾನವನ್ನು ಗೆದ್ದಿತ್ತು.
ದಕ್ಷಿಣ ಬಂಗಾಳದಲ್ಲಿ ಟಿಎಂಸಿಯ ಹಿಡಿತ ಭದ್ರವಾಗಿದೆ. ನೈಹಾತಿಯಲ್ಲಿ ಸನತ್ ಡೇ ಬಿಜೆಪಿಯ ರೂಪಕ್ ಮಿತ್ರಾ ವಿರುದ್ಧ 49,277 ಮತಗಳ ಮುನ್ನಡೆ ಸಾಧಿಸಿದ್ದಾರೆ. ಹರೊವಾದಲ್ಲಿ ಟಿಎಂಸಿಯ ಎಸ್.ಕೆ.ರಬಿಯುಲ್ ಇಸ್ಲಾಂ ಅವರು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್‌ನ ಪಿಯಾರುಲ್ ಇಸ್ಲಾಂ ವಿರುದ್ಧ 1,03,144 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೇದಿನಿಪುರದಲ್ಲಿ ಸುಜೋಯ್ ಹಜ್ರಾ ಅವರು ಬಿಜೆಪಿಯ ಸುಭಾಜಿತ್ ರಾಯ್ ವಿರುದ್ಧ 22,417 ಮತಗಳ ಮುನ್ನಡೆ ಸಾಧಿಸಿದ್ದಾರೆ. ತಲ್ದಂಗ್ರಾದಲ್ಲಿ ಫಾಲ್ಗುಣಿ ಸಿಂಘಬಾಬು ಅವರು ಬಿಜೆಪಿಯ ಅನನ್ಯಾ ರಾಯ್ ಚಕ್ರವರ್ತಿ ವಿರುದ್ಧ 20,273 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳು ಸಾಂಪ್ರದಾಯಿಕವಾಗಿ ಟಿಎಂಸಿಯ ಭದ್ರಕೋಟೆಯಾಗಿರುವ ದಕ್ಷಿಣ ಬಂಗಾಳದಲ್ಲಿವೆ. ಉತ್ತರ ಬಂಗಾಳದ ಮದರಿಹಾತ್ ಬಿಜೆಪಿಯ ಭದ್ರಕೋಟೆಯಾಗಿತ್ತು.