ಕಪ್ಪು ಬಾವುಟ ಪ್ರದರ್ಶಿಸುವುದು ಕಾನೂನು ಬಾಹಿರ ಅಥವಾ ಮಾನಹಾನಿಕರವಲ್ಲ: ಕೇರಳ ಹೈಕೋರ್ಟ್
ಕಪ್ಪು ಬಾವುಟ ಪ್ರದರ್ಶಿಸುವುದು ಕಾನೂನುಬಾಹಿರ ಕೃತ್ಯವಲ್ಲ ಮತ್ತು ಅದು ಮಾನಹಾನಿಗೆ ಸಮವಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇರಳ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿ ಅವಮಾನ ಮಾಡಲಾಗಿದೆ ಎಂಬ ಪ್ರಕರಣದ ವಿಚಾರಣೆ ನಡೆಸುವ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.;
ಕಳೆದ ವರ್ಷ ರಾಜ್ಯ ಸರ್ಕಾರದ ಕಾರ್ಯಕ್ರಮವಾದ ʼನವ ಕೇರಳ ಸದನ್ʼ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಂದೆ ಕಪ್ಪು ಬಾವುಟಗಳನ್ನು ಬೀಸಿದ್ದಕ್ಕಾಗಿ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು. ಅದರ ವಿರುದ್ದ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ನ್ಯಾಯಪೀಠ ಈ ತೀರ್ಪು ಮಹತ್ವದ ತೀರ್ಪು ನೀಡಿದ್ದಾರೆ.
"ಚಿಹ್ನೆ ಮತ್ತು ಗೋಚರಿಸುವ ಪ್ರಾತಿನಿಧ್ಯಗಳು ವ್ಯಕ್ತಿಯನ್ನು ದೂಷಿಸುವ ವಿಧಾನವಾಗಿದ್ದರೂ, ಕಪ್ಪು ಧ್ವಜ ತೋರಿಸುವುದು ಅಥವಾ ಬೀಸುವುದು ಮಾನನಷ್ಟಕ್ಕೆ ಸಮನಾಗುವುದಿಲ್ಲ. ಅದೇ ರೀತಿ ಇದು ಕಾನೂನುಬಾಹಿರ ಕೃತ್ಯವಲ್ಲ" ಎಂದು ನ್ಯಾಯಮೂರ್ತಿ ಥಾಮಸ್ ಹೇಳಿ ಮೂವರ ವಿರುದ್ಧದ ಪ್ರಕರಣವನ್ನು ರದ್ಧಗೊಳಿಸುವಂತೆ ಆದೇಶಿಸಿದರು.
ಸಾಮಾನ್ಯವಾಗಿ, ಪ್ರತಿಭಟನೆಯ ಸಂಕೇತವಾಗಿ ಕಪ್ಪು ಧ್ವಜವನ್ನು ತೋರಿಸಲಾಗುತ್ತದೆ ಮತ್ತು ಅದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಅಂತಹ ನಡವಳಿಕೆಯು ಮಾನನಷ್ಟದ ಅಪರಾಧ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಮಾನನಷ್ಟದ ಅಪರಾಧ ಆರೋಪಿಸಲಾಗಿದೆ. ಯಾವುದೇ ಕಾನೂನು ಮಾನ್ಯತೆಯಿಲ್ಲದ ಪೊಲೀಸ್ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಏಕೆಂದರೆ ಅಂತಹ ಕ್ರಮವನ್ನು ಖಾಸಗಿ ದೂರಿನ ಆಧಾರದ ಮೇಲೆ ಮಾತ್ರ ಪ್ರಾರಂಭಿಸಬಹುದು ಎಂದು ಕೋರ್ಟ್ ಹೇಳಿದೆ. .
"ಪೊಲೀಸ್ ತಂಡವು ಪ್ರತಿಭಟನಾಕಾರರನ್ನು ತಡೆದ ಕಾರಣ ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಯಾವುದೇ ಅಡಚಣೆ ಉಂಟಾಗಿಲ್ಲ" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು
"ಕಾಂಗ್ರೆಸ್ ಕಾರ್ಯಕ ಯಾವುದೇ ವ್ಯಕ್ತಿಗೆ ಯಾವುದೇ ಅಡಚಣೆ ಉಂಟುಮಾಡಿದ್ದಾರೆ ಎಂದು ಸೂಚಿಸುವ ಆರೋಪಗಳೂ ಇಲ್ಲ ಎಂದು ಕೋರ್ಟ್ ನವೆಂಬರ್ 20ರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಆರೋಪಿಗಳು ಪ್ರತಿಭಟನೆ ನಡೆಸುತ್ತಿದ್ದಾಗ, ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸದಂತೆ ಪೊಲೀಸರು ತಡೆದರು ಮತ್ತು ಆ ವೇಳೆ ಆರೋಪಿಗಳು ಅಧಿಕಾರಿಗಳ ಸಮವಸ್ತ್ರ ಎಳೆದರು ಎಂದು ನ್ಯಾಯಾಲಯಕ್ಕೆ ಹೇಳಲಾಗಿದೆ. "ಒಬ್ಬ ವ್ಯಕ್ತಿಯನ್ನು ತಡೆಯುವಾಗ ತಳ್ಳುವಿಕೆ ಮತ್ತು ಎಳೆಯುವಿಕೆ ಸಾಮಾನ್ಯ . ಪೊಲೀಸರ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡಚಣೆ ಉಂಟಾಗಿರುವುದಿಲ್ಲ ಎಂಬುದಾಗಿಯೂ ಕೋರ್ಟ್ ಅಭಿಪ್ರಾಯಪಟ್ಟಿದೆ.