ರಜಿನಿಕಾಂತ್ ಜತೆ ನಟಿಸಿದ್ದ ತಮಿಳು ಹಿರಿಯ ನಟ ಡೆಲ್ಲಿ ಗಣೇಶ್ ನಿಧನ
ಕೆ.ಬಾಲಚಂದರ್ ಅವರ ʼಪಟ್ಟಿನ ಪ್ರವೇಶಂʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು, ಬಾಲಚಂದರ್ ಅವರು ಅವರಿಗೆ ಡೆಲ್ಲಿ ಗಣೇಶ್ ಎಂದು ಸಿನಿಮಾ ರಂಗದ ಹೆಸರನ್ನು ನೀಡಿದ್ದರು.
ಹಿರಿಯ ತಮಿಳು ನಟ ಡೆಲ್ಲಿ ಗಣೇಶ್ (80 ವರ್ಷ) ಅವರು ಶನಿವಾರ (ನವೆಂಬರ್ 9ರಂದು) ರಾತ್ರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಅವರು ರಜನಿಕಾಂತ್ ಸೇರಿದಂತೆ ತಮಿಳು ಚಿತ್ರರಂಗದ ದೈತ್ಯ ಪ್ರತಿಭೆಗಳ ಜತೆ ಕೆಲಸ ಮಾಡಿದ್ದರು.
ಡೆಲ್ಲಿ ಗಣೇಶ್ ಆಗಸ್ಟ್ 1, 1944ರಂದು ಗಣೇಶನ್ ಆಗಿ ಜನಿಸಿದ್ದರು ಅವರು 1964 ರಿಂದ 1974 ರವರೆಗೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ನಿರ್ದೇಶಕ ಕೆ.ಬಾಲಚಂದರ್ ಅವರ ʼಪಟ್ಟಿನ ಪ್ರವೇಶಂʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಾಲಚಂದರ್ ಅವರು ಅವರಿಗೆ ʼಡೆಲ್ಲಿ ಗಣೇಶ್ʼ ಎಂದು ಸಿನಿಮಾ ರಂಗದ ಹೆಸರು ನೀಡಿದ್ದರು.
400ಕ್ಕೂ ಹೆಚ್ಚು ಚಲನಚಿತ್ರಗಳು
ಡೆಲ್ಲಿ ಗಣೇಶ್ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಮೂರು ಭಾಷೆಗಳಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಾಯಗನ್ (1987), ಮೈಕೆಲ್ ಮದನಾ ಕಾಮ ರಾಜನ್ (1990), ಅಪೂರ್ವ ಸಹೋದರಗಳ್ (1989), ಆಹಾ..! (1997), ತೆನಾಲಿ (2000), ಮತ್ತು ಎಂಗಮ್ಮ ಮಹಾರಾಣಿ (1981)ಯಲ್ಲಿ ಸ್ಮರಣೀಯ ಪಾತ್ರ ವಹಿಸಿದ್ದರು.
ಅವರು ಬಹುಮುಖ ನಟರಾಗಿ ಹೆಸರುವಾಸಿಯಾಗಿದ್ದರು. ಅವರು ತಮ್ಮ ಚಿತ್ರಗಳಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಪಾತ್ರಗಳನ್ನು ಒಳಗೊಂಡಂತೆ ವಿಭಿನ್ನ ಮಾದರಿಯ ಪಾತ್ರಗಳನ್ನು ಮಾಡಿದ್ದರು. ರಜಿನಿಕಾಂತ್, ಕಮಲ್ ಹಾಸನ್ ಮತ್ತು ವಿಜಯಕಾಂತ್ ಸೇರಿದಂತೆ ಉನ್ನತ ದರ್ಜೆಯ ತಾರೆಗಳೊಂದಿಗೆ ಕೆಲಸ ಮಾಡಿದ್ದರು.
ಪಾಸಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು 1979ರಲ್ಲಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ವಿಶೇಷ ಪ್ರಶಸ್ತಿ ಮತ್ತು 1994ರಲ್ಲಿ ಕಲೈಮಾಮಣಿ ಪ್ರಶಸ್ತಿ ತಮ್ಮದಾಗಿಕೊಂಡಿದ್ದರು.