ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು, 31 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ (ಜುಲೈ 19) ತಿಳಿಸಿದ್ದಾರೆ.
ಈಶಾನ್ಯ ರೈಲ್ವೆಯ ಗೊಂಡಾ-ಗೋರಖ್‌ಪುರ ವಿಭಾಗಕ್ಕೆ ಸೇರಿದ, ಲಖ್ನೋದಿಂದ 150 ಕಿಮೀ ದೂರದಲ್ಲಿರುವ ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ರೈಲಿನ ಎಂಟು ಬೋಗಿಗಳು ಗುರುವಾರ ಮಧ್ಯಾಹ್ನ ಹಳಿ ತಪ್ಪಿದವು.
ಗೊಂಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಶರ್ಮಾ, ʻನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 31 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ,ʼ ಎಂದು ಹೇಳಿದರು.
ರಾಹುಲ್(38), ಸರೋಜ್ ಕುಮಾರ್ ಸಿಂಗ್(31) ಮತ್ತು ಇಬ್ಬರು ಅಪರಿಚಿತ ಪ್ರಯಾಣಿಕರು ಮೃತಪಟ್ಟಿದ್ದಾರೆ. ಶವಗಳು ಜಿಲ್ಲಾಸ್ಪತ್ರೆಯಲ್ಲಿವೆ. ಸಂಬಂಧಿಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು. ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ.
ʻಮಂಕಾಪುರ ಜಂಕ್ಷನ್‌ನಲ್ಲಿ ತಾವು ಹಲವು ಪ್ರಯಾಣಿಕರನ್ನು ವಿಚಾರಿಸಿದ್ದು,ಸಹಪ್ರಯಾಣಿಕರು ಕಾಣೆಯಾದ ಬಗ್ಗೆ ಯಾರೂ ದೂರು ನೀಡಲಿಲ್ಲ.ರೈಲ್ವೆ ಹಳಿಯನ್ನು ಮರುಸ್ಥಾಪಿಸುವ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳ ಲಿದೆ,ʼ ಎಂದು ಅವರು ಹೇಳಿದರು.
ಶುಕ್ರವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿ, ಗಾಯಾಳುಗಳನ್ನು ಭೇಟಿ ಮಾಡಿದರು. ಸೂಕ್ತ ಚಿಕಿತ್ಸೆ ಮತ್ತು ಆರೈಕೆ ನೀಡುವಂತೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದರು. ಗಾಯಗೊಂಡ ಒಂಟಿ ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸುವಂತೆ ಮುಖ್ಯ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಪ್ರಯಾಣಿಕರು ಲಖ್ನೋದ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲಾ ನಾಲ್ವರು ಪ್ರಯಾಣಿಕರನ್ನು ಜಿಲ್ಲಾ ಆಸ್ಪತ್ರೆ ಮತ್ತು ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ತನಿಖೆ ಆರಂಭ: ರೈಲು ಹಳಿ ತಪ್ಪಲು ಕಾರಣ ಕಂಡು ಹಿಡಿಯಲು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೆ ತಾಂತ್ರಿಕ ತಂಡವು ಅಪಘಾತ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದು, ಛಾಯಾಚಿತ್ರಗಳನ್ನು ತೆಗೆದುಕೊಂಡಿದೆ.
ಹಳಿಗಳ ಜೋಡಣೆ ಕಾರ್ಯ ಮುಂದುವರಿದಿದೆ. ಜನರೇಟರ್ ನೆರವಿನಿಂದ ರಾತ್ರಿಯಿಡೀ ಹಳಿ ಪುನಃಸ್ಥಾಪನೆ ಕಾರ್ಯ ನಡೆಯಿತು. ಶುಕ್ರವಾರ ಬೆಳಗ್ಗೆಯಿಂದ ಸುಮಾರು 800 ರೈಲ್ವೆ ನೌಕರರ ತಂಡ ದುರಸ್ತಿ ಕಾರ್ಯದಲ್ಲಿ ತೊಡಗಿದೆ. ಈಶಾನ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸೌಮ್ಯ ಮಾಥುರ್ ಅವರು ಸ್ಥಳದಲ್ಲಿ ಉಪಸ್ಥಿತರಿದ್ದು, ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆಸಿಬಿ ಮತ್ತು ಕ್ರೇನ್ ಬಳಸಿ ಉರುಳಿದ ಬೋಗಿಗಳನ್ನು ನೇರವಾಗಿ ನಿಲ್ಲಿಸುವ ಕಾರ್ಯ ನಡೆಯುತ್ತಿದೆ. ನೆಲಸಮಗೊಂಡಿರುವ ರೈಲು ಹಳಿಯನ್ನು ಸ್ಥಾಪಿಸಲಾಗುತ್ತದೆ. ಗೊಂಡಾ-ಗೋರಖ್‌ಪುರ ರೈಲು ಸಂಪೂರ್ಣ ವಿದ್ಯುದೀಕರಣಗೊಂಡ ಮಾರ್ಗವಾಗಿದ್ದು, ಅಪಘಾತದಿಂದ ವಿದ್ಯುತ್ ಕಂಬಗಳು ಮತ್ತು ತಂತಿಗಳು ಸಂಪೂರ್ಣವಾಗಿ ನಾಶವಾಗಿವೆ. ಅವುಗಳನ್ನು ಮರು ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಸುರಕ್ಷತಾ ಆಯೋಗದ ತನಿಖೆಯಲ್ಲದೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಗುರುವಾರ ತಿಳಿಸಿದೆ. ಮೃತರ ಕುಟುಂಬದವರಿಗೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.