Hema Committee fallout| ಪತ್ರಕರ್ತರ ಮೇಲೆ ದೂರು ನೀಡಿದ ಕೇಂದ್ರ ಸಚಿವ ಸುರೇಶ್ ಗೋಪಿ
ಎಫ್‌ಐಆರ್ ಪ್ರಕಾರ, ವರದಿಗಾರರು ಅತಿಕ್ರಮವಾಗಿ ಪ್ರವೇಶಿಸಿ ಗೋಪಿ ಅವರು ವಾಹನವನ್ನು ಪ್ರವೇಶಿಸದಂತೆ ತಡೆದರು ಮತ್ತು ಅವರ ಭದ್ರತಾ ಅಧಿಕಾರಿಗೆ ಅಡ್ಡಿಪಡಿಸಿದರು.;
ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ತ್ರಿಶೂರ್ ರಾಮನಿಲಯಂ ಸರ್ಕಾರಿ ಅತಿಥಿ ಗೃಹದಿಂದ ಹೊರಟಾಗ ಮಾಧ್ಯಮದವರು ತಮ್ಮನ್ನು ತಡೆದರು ಎಂದು ಕೆಲವು ಪತ್ರಕರ್ತರ ವಿರುದ್ಧ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 329(3),126(2),132 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಕೇರಳ ಪೊಲೀ ಸರು ಹೇಳಿದ್ದಾರೆ.
ಸಾರ್ವಜನಿಕ ನೌಕರ ತನ್ನ ಕರ್ತವ್ಯ ನಿರ್ವಹಿಸುವುದನ್ನು ತಡೆ, ಅತಿಕ್ರಮಣ ಮತ್ತು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ ಸೇರಿದಂತೆ ವಿವಿಧ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ವರದಿಗಾರರು ಅತಿಕ್ರಮವಾಗಿ ಪ್ರವೇಶಿಸಿ ಗೋಪಿ ಅವರು ವಾಹನವನ್ನು ಪ್ರವೇಶಿಸದಂತೆ ತಡೆದರು ಮತ್ತು ಅವರ ಭದ್ರತಾ ಅಧಿಕಾರಿಗೆ ಅಡ್ಡಿಪಡಿಸಿದರು.
ಸಚಿವ ಸಿಡಿಮಿಡಿ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಸಿಪಿಐ(ಎಂ) ಶಾಸಕ ಮತ್ತು ನಟ ಎಂ. ಮುಖೇಶ್ ವಿರುದ್ಧ ಮಾಧ್ಯಮಗಳು ʻಮಾಧ್ಯಮ ವಿಚಾರಣೆʼ ನಡೆಸುತ್ತಿವೆ ಎಂದು ಗೋಪಿ ದೂರಿದ್ದಾರೆ. ಮುಖೇಶ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ. ಆದರೆ, ಅತ್ಯಾಚಾರದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಎಂದು ಗೋಪಿ ತಮ್ಮದೇ ಪಕ್ಷವನ್ನು ಟೀಕಿಸಿದರು.
ಮುಖೇಶ್ ವಿರುದ್ಧದ ಆರೋಪಗಳ ಬಗ್ಗೆ ಸುದ್ದಿಗಾರರು ಗೋಪಿ ಅವರನ್ನು ಮಂಗಳವಾರ ಕೇಳಿದಾಗ, ʼನೀವು (ಮಾಧ್ಯಮ) ನಿಮ್ಮ ಲಾಭಕ್ಕಾಗಿ ಜನರು ಪರಸ್ಪರ ಹೊಡೆದಾಡುವಂತೆ ಮಾಡುತ್ತಿರುವುದಲ್ಲದೆ, ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದೀರಿ. ದೂರುಗಳು ಸದ್ಯಕ್ಕೆ ಆರೋಪಗಳ ರೂಪದಲ್ಲಿವೆ. ನೀವು ಜನರಿಗೆ ಏನು ಹೇಳುತ್ತಿದ್ದೀರಿ? ನೀವು ನ್ಯಾಯಾಲಯವೇ? ನ್ಯಾಯಾಲಯ ತೀರ್ಮಾನಿಸುತ್ತದೆ,ʼ ಎಂದರು.
ʻಇದನ್ನು ನೀವು ಹಣ ಸಂಪಾದಿಸಲು ಬಳಸಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಪ್ರಕರಣ ನ್ಯಾಯಾಲಯದ ಮುಂದೆ ಇದೆ. ಮತ್ತು ಅವು ನಿರ್ಧಾರ ತೆಗೆದುಕೊಳ್ಳುವ ಬುದ್ಧಿವಂತಿಕೆ ಮತ್ತು ತಾರ್ಕಿಕ ಶಕ್ತಿ ಹೊಂದಿವೆ,ʼ ಎಂದು ಹೇಳಿದರು.
ಗೋಪಿ ವಿರುದ್ಧ ಬಿಜೆಪಿ ಅಸಮಾಧಾನ: ಗೋಪಿ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರು,ʼ ಅದು ಗೋಪಿ ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಪಕ್ಷದ ನಿಲುವನ್ನು ನಾಯಕತ್ವ ನಿರ್ಧರಿಸುತ್ತದೆ. ಮುಖೇಶ್ ವಿಧಾನಸಭೆಗೆ ರಾಜೀನಾಮೆ ನೀಡಬೇಕು,ʼ ಎಂದರು.
ʻರಾಜ್ಯ ಸರ್ಕಾರವು ಸಿಪಿಐ(ಎಂ) ಮತ್ತು ಸರ್ಕಾರಕ್ಕೆ ನಿಕಟವಾಗಿರುವವರನ್ನು ಬೆಂಬಲಿಸುತ್ತಿದೆ. ಮುಖ್ಯಮಂತ್ರಿ ಅವರು ಮುಖೇಶ್ ರಾಜೀನಾಮೆಗೆ ಒತ್ತಾಯಿಸಬೇಕು,ʼ ಎಂದರು.
ಆನಂತರ ಸುದ್ದಿಗಾರರು ಸುರೇಂದ್ರನ್ ಅವರ ಹೇಳಿಕೆ ಬಗ್ಗೆ ಗೋಪಿ ಅವರ ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದಾಗ, ನಟ ಕೋಪಗೊಂಡು ಕೆಲವರನ್ನು ತಳ್ಳಿದರು. ಇದು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ʻಇದೇನು? ನನ್ನ ದಾರಿ ನನ್ನ ಹಕ್ಕು. ದಯವಿಟ್ಟು ಜಾಗ ಬಿಡಿ,ʼ ಎಂದು ಹೇಳಿದರು.