ಕಾಮನ್‌ ವೆಲ್ತ್ ಕ್ರೀಡಾಕೂಟಕ್ಕೆ ಬಿಡ್ ಸಲ್ಲಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ

2030ರ ಸಿಡಬ್ಲ್ಯೂಜಿ ಆಯೋಜನೆಗೆ ಭಾರತವು ಅಧಿಕೃತವಾಗಿ ಬಿಡ್ ಸಲ್ಲಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.;

Update: 2025-08-27 12:33 GMT

2030ರ ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯೂಜಿ) ಆಯೋಜನೆಗಾಗಿ ಭಾರತವು ಅಧಿಕೃತವಾಗಿ ಬಿಡ್ ಸಲ್ಲಿಸಲು ಸಜ್ಜಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಸ್ತಾವನೆಗೆ ಕೇಂದ್ರ ಸಂಪುಟವು ಅನುಮೋದನೆ ನೀಡಿದೆ. ಸರ್ಕಾರದ ಸಂಬಂಧಿತ ಸಚಿವಾಲಯಗಳಿಂದ ಅಗತ್ಯವಿರುವ ಖಾತರಿಗಳೊಂದಿಗೆ ಆತಿಥೇಯ ಸಹಯೋಗ ಒಪ್ಪಂದಕ್ಕೆ ಸಹಿ ಹಾಕಲು ಸಹ ಸಂಪುಟವು ಒಪ್ಪಿಗೆ ನೀಡಿದೆ.

ಬಿಡ್ ಅಂಗೀಕಾರವಾದರೆ, ಸಂಬಂಧಿತ ಇಲಾಖೆಗಳು, ಪ್ರಾಧಿಕಾರಗಳು ಹಾಗೂ ಗುಜರಾತ್ ಸರ್ಕಾರಕ್ಕೆ ತಕ್ಷಣ ಅಗತ್ಯ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. 72 ದೇಶಗಳ ಕ್ರೀಡಾಪಟುಗಳು ಭಾಗವಹಿಸುವ ಈ ಕ್ರೀಡಾಕೂಟವು ಭಾರತಕ್ಕೆ ಅತಿದೊಡ್ಡ ಅಂತರರಾಷ್ಟ್ರೀಯ ಕ್ರೀಡಾ ಉತ್ಸವವಾಗಲಿದೆ.

ಕ್ರೀಡಾಪಟುಗಳು, ತರಬೇತುದಾರರು, ತಾಂತ್ರಿಕ ಅಧಿಕಾರಿಗಳು, ಪ್ರವಾಸಿಗರು, ಮಾಧ್ಯಮ ಪ್ರತಿನಿಧಿಗಳು ಭಾರತಕ್ಕೆ ಆಗಮಿಸುವುದರಿಂದ ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.

ಅಹಮದಾಬಾದ್ ಆತಿಥೇಯ ನಗರ

ಅಹಮದಾಬಾದ್ ವಿಶ್ವ ದರ್ಜೆಯ ಕ್ರೀಡಾಂಗಣಗಳು, ಆಧುನಿಕ ತರಬೇತಿ ಸೌಲಭ್ಯಗಳು ಮತ್ತು ಸಮೃದ್ಧ ಕ್ರೀಡಾ ಸಂಸ್ಕೃತಿಯ ಕಾರಣದಿಂದ ಆತಿಥೇಯ ನಗರವಾಗಿ ಆಯ್ಕೆ ಮಾಡಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣವು ಈಗಾಗಲೇ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಯಶಸ್ವಿಯಾಗಿ ಆಯೋಜಿಸಿರುವುದರಿಂದ ಜಾಗತಿಕ ಮಾನ್ಯತೆ ಪಡೆದಿದೆ.

ಕ್ರೀಡಾಕೂಟವು ಪ್ರವಾಸೋದ್ಯಮ, ಉದ್ಯೋಗಾವಕಾಶಗಳು ಮತ್ತು ಸ್ಥಳೀಯ ಆದಾಯವನ್ನು ಹೆಚ್ಚಿಸುವುದಲ್ಲದೆ ಕ್ರೀಡಾ ವಿಜ್ಞಾನ, ನಿರ್ವಹಣೆ, ಪ್ರಸಾರ, ಲಾಜಿಸ್ಟಿಕ್ಸ್, ಐಟಿ, ಮಾಧ್ಯಮ, ಸಾರ್ವಜನಿಕ ಸಂಪರ್ಕ ಮುಂತಾದ ಹಲವು ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ಉತ್ತಮ ಅವಕಾಶಗಳನ್ನು ನೀಡಲಿದೆ.

ಇಂತಹ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ರಾಷ್ಟ್ರೀಯ ಹೆಮ್ಮೆ, ಏಕತೆ ಮತ್ತು ಹೊಸ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ ಸಿಗಲಿದೆ. ಇದು ಕ್ರೀಡೆಯನ್ನು ವೃತ್ತಿ ಆಯ್ಕೆಯಾಗಿ ಮುಂದುವರಿಸಲು ಯುವಕರಲ್ಲಿ ಪ್ರೇರಣೆಯನ್ನೂ ಒದಗಿಸುತ್ತದೆ.

Tags:    

Similar News