Union Budget 2024: ಮೋದಿಯವರ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಮನಸ್ಥಿತಿಯ ಪ್ರತಿಬಿಂಬ

ನಿತೀಶ್ ಕುಮಾರ್ ಮತ್ತು ‌ಚಂದ್ರಬಾಬು ನಾಯ್ಡು ಅವರನ್ನು ಸಂತೋಷವಾಗಿಡುವುದು ಮುಖ್ಯವಾಗಿರುವುದರಿಂದ, ಸರ್ಕಾರ ಬಜೆಟ್ಟಿನಲ್ಲಿ ಅದನ್ನೇ ಮಾಡಿದೆ. ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ಆಹಾರ ಹಣದುಬ್ಬರದ ತಡೆ ತನ್ನ ಪ್ರಮುಖ ಆದ್ಯತೆ ಎಂದು ಹೇಳಿದೆ.

Update: 2024-07-26 03:38 GMT

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಏಳನೇ ಕೇಂದ್ರ ಬಜೆಟ್ ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳಿಂದ ಗಮನಾರ್ಹವಾಗಿ ಪ್ರಭಾವಿತವಾಗಿದೆ. ಉದ್ಯೋಗ ಸೃಷ್ಟಿ ಮತ್ತು ಆಹಾರ ಹಣದುಬ್ಬರದ ತಡೆ ತನ್ನ ಪ್ರಮುಖ ಆದ್ಯತೆಯೆಂದು ಪ್ರತಿಬಿಂಬಿಸಿದೆ. 

'ವಿಕಸಿತ್ ಭಾರತ' ಮತ್ತು ರಾಷ್ಟ್ರೀಯತೆ ಬಗ್ಗೆ ವಾಗಾಡಂಬರದಿಂದ ದೂರವಿರುವ ಅವರ ಬಜೆಟ್, ಉದ್ಯೋಗಗಳು ಮತ್ತು ಕೌಶಲದ ಮೇಲೆ ಕೇಂದ್ರೀಕರಿಸಿದೆ. ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಸಂಸ್ಕರಣೆ ಹೆಚ್ಚಿಸಲು ಗ್ರಾಮೀಣ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 

ಕೃಷಿ ಸಂಶೋಧನೆ, ನೈಸರ್ಗಿಕ ಕೃಷಿಗೆ ಗಮನ: ಒಟ್ಟಾರೆ ಹಣದುಬ್ಬರವು ಶೇ. 4.5 ರಷ್ಟುಇದ್ದು ನಿಯಂತ್ರಣದಲ್ಲಿದೆ, ಆದರೆ, ನಿರುದ್ಯೋಗ ಹೆಚ್ಚಳ ಮತ್ತು ಆಹಾರ ಹಣದುಬ್ಬರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಈ ಎರಡು ಅಂಶಗಳು, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಕಳಪೆ ಚುನಾವಣೆ ಫಲಿತಾಂಶಕ್ಕೆ ತಮ್ಮ ಕೊಡುಗೆ ನೀಡಿವೆ. 

ಸರಕಾರವು ಕೃಷಿ ಸಂಶೋಧನೆ ಮತ್ತು ನೈಸರ್ಗಿಕ ಕೃಷಿಗೆ ಆದ್ಯತೆ ನೀಡುತ್ತಿದೆ. ಹವಾಮಾನ ವೈಪರೀತ್ಯವನ್ನುತಡೆಯುವ ಮತ್ತು ಹೆಚ್ಚು ಇಳುವರಿ ನೀಡುವ 109 ತೋಟಗಾರಿಕೆ ಬೆಳೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹವಾಮಾನದ ಬದಲಾವಣೆಯಿಂದ ಹಣ್ಣುಗಳು ಮತ್ತು ತರಕಾರಿ ಹೆಚ್ಚು ಹಾನಿಗೊಳಗಾಗುವುದರಿಂದ, ಇದು ಗಮನಾರ್ಹ ನಡೆಯಾಗಿದೆ. 

ಪ್ರಮುಖ ನಗರಗಳ ಬಳಿ ತರಕಾರಿ ಉತ್ಪಾದನೆಗೆ ದೊಡ್ಡ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ; ಪೂರೈಕೆ ಸರಪಳಿಗಳು, ಸಂಗ್ರಹ ಮತ್ತು ಮಾರುಕಟ್ಟೆಯನ್ನು ನಿರ್ಮಿಸಲು, ರೈತ ಉತ್ಪಾದಕ ಸಂಸ್ಥೆಗಳನ್ನು ಉತ್ತೇಜಿಸಲಾಗುತ್ತಿದೆ. ದೇಶದಲ್ಲಿ ಬೆಳೆಯುವ 44,000 ಕೋಟಿ ರೂ. ಮೌಲ್ಯದ ತಾಜಾ ಹಣ್ಣು ಮತ್ತು ತರಕಾರಿಗಳಲ್ಲಿ ಪ್ರತಿ ವರ್ಷ ಶೇ. 12 ರಿಂದ 15 ರಷ್ಟು ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ. 

ಹಣಕಾಸು ಸಚಿವರು ಇತ್ತೀಚೆಗೆ ರೈತರಿಗೆ ಹೆಚ್ಚುಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ಕುರಿತು ಮಾತನಾಡಿದ್ದರು. ಆದರೆ, ರೈತರು ಕೇಳುತ್ತಿರುವ ಎಂಎಸ್ಪಿಗೆ ಕಾನೂನು ಖಾತರಿಯನ್ನು ಉಲ್ಲೇಖಿಸಲಿಲ್ಲ. 

ತೈಲ ಬೀಜಗಳು ಮತ್ತು ಬೇಳೆಕಾಳುಗಳ ಬೆಲೆ ಹೆಚ್ಚಳ ಕಳವಳಕ್ಕೆ ಕಾರಣವಾಗಿರುವುದರಿಂದ, ಅವುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಖಾದ್ಯ ತೈಲ ಮತ್ತು ಬೇಳೆಕಾಳುಗಳು ಜನಸಂಖ್ಯೆಯ ದೊಡ್ಡ ವರ್ಗದ ಮುಖ್ಯ ಆಹಾರವಾಗಿದ್ದು, ದೀರ್ಘ ಕಾಲದಿಂದ ಬೆಲೆ ಹೆಚ್ಚಿರುವುದರಿಂದ ಆಹಾರ ಹಣದುಬ್ಬರಕ್ಕೆ ಕಾರಣವಾಗಿವೆ.

ಉದ್ಯೋಗ, ಕೌಶಲದ ಮೇಲೆ ಒತ್ತು: ದೇಶದಲ್ಲಿ ನಿರುದ್ಯೋಗ ಮತ್ತು ಕಡಿಮೆ ಉದ್ಯೋಗ ಎರಡೂ ಅಸ್ತಿತ್ವದಲ್ಲಿದೆ ಎಂಬ ಅಂಶವನ್ನು ಗುರುತಿಸಿ, ಬಜೆಟ್ಟಿನಲ್ಲಿ ಉದ್ಯೋಗ ಮತ್ತು ಕೌಶಲಕ್ಕೆ ಪ್ಯಾಕೇಜ್ ನೀಡಲಾಗಿದೆ. ಪ್ರಧಾನ ಮಂತ್ರಿಯವರ ಪ್ಯಾಕೇಜ್ ವಾರ್ಷಿಕ 2 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಉದ್ಯೋಗ ಸಂಬಂಧಿತ ಪ್ರೋತ್ಸಾಹವನ್ನು ನೀಡುತ್ತದೆ.

ಉದ್ಯೋಗಿಗಳಿಗೆ ಸಬ್ಸಿಡಿ ರೂಪದಲ್ಲಿ ವೇತನ ದೊರೆಯುತ್ತಿದೆಯಾದರೂ, ಉದ್ಯೋಗದಾತರಿಗೆ ಉತ್ತೇಜನ ನೀಡಿರುವುದು ಗಮನಾರ್ಹ. 'ಉದ್ಯೋಗ ಸಂಬಂಧಿತ ಪ್ರೋತ್ಸಾಹಕಗಳ ಯೋಜನೆ'ಯು ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳಲ್ಲಿ,ವಿಶೇಷವಾಗಿ ಉತ್ಪಾದನಾ ವಲಯದಲ್ಲಿ, ಉದ್ಯೋಗವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ನಂಬಿದೆ.

ಕೌಶಲದ ಕೊರತೆಯು ನಿರುದ್ಯೋಗ ಮತ್ತು ಕಡಿಮೆಉದ್ಯೋಗಕ್ಕೆ ಕಾರಣವಾಗುವುದರಿಂದ, ಸರ್ಕಾರವು ಖಾಸಗಿ ವಲಯದ ಉದ್ಯೋಗದಾತ ರಿಗೆ ಕೌಶಲ, ತರಬೇತಿ ಮಾತ್ರವಲ್ಲದೆ, ಇಂಟರ್ನ್‌ಶಿಪ್‌ಗಳನ್ನು ನೀಡಲು ತೆರಿಗೆ ವಿನಾಯಿತಿ ಮತ್ತು ಆರ್ಥಿಕ ಪರಿಹಾರಗಳನ್ನು ನೀಡುತ್ತಿದೆ.

ಈ ಹೊಸ ಉಪಕ್ರಮದ ಮೂಲಕ ಉತ್ಪಾದನೆ ಕಂಪನಿಗಳು ಅಗತ್ಯವಿರುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಲಿವೆ ಎಂದು ಸರ್ಕಾರ ಭರವಸೆ ಇರಿಸಿಕೊಂಡಿದೆ. ಉದಾಹರಣೆಗೆ, ಲಾರ್ಸನ್ ಮತ್ತು ಟೂರ್ಬೊ ಅಧ್ಯಕ್ಷರು ಇತ್ತೀಚೆಗೆ ತಮ್ಮಲ್ಲಿ 45,000 ಇಂಜಿನಿಯರ್‌ಗಳ ಹುದ್ದೆಗಳು ಖಾಲಿ ಇವೆ. ಆದರೆ, ಅರ್ಹರು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

ಬಿಹಾರ, ಆಂಧ್ರಕ್ಕೆ ಉದಾರ ಅನುದಾನ: ಕೇಂದ್ರ ಸರ್ಕಾರದ ಎರಡು ಪ್ರಮುಖ ಮಿತ್ರಪಕ್ಷಗಳಾದ ಜನತಾ ದಳ (ಯು) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ)ದ ಆಡಳಿತವಿರುವ ಬಿಹಾರ ಮತ್ತು ಆಂಧ್ರಪ್ರದೇಶಗಳಿಗೆ ಉದಾರವಾಗಿ ಅನುದಾನ ನೀಡಿರುವುದು ಕೇಂದ್ರ ಸರ್ಕಾರದ ಉಳಿವಿಗೆ ನಿರ್ಣಾಯಕವಾಗಿದೆ.

ಎರಡು ರಾಜ್ಯಗಳು ಕೋರಿರುವ 'ವಿಶೇಷ ಹಣಕಾಸು ಪ್ಯಾಕೇಜ್' ಬೇಡಿಕೆಯನ್ನುಕಾನೂನಿನ ಪ್ರಕಾರ ಪೂರೈಸಲು ಸಾಧ್ಯವಿಲ್ಲ. ಆದ್ದರಿಂದ, ಸಚಿವೆ ಈ ರಾಜ್ಯಗಳಿಗೆ ವಿಶೇಷ ಯೋಜನೆಗಳನ್ನು ಒದಗಿಸಿದ್ದಾರೆ.

ಯೋಜನೆಗಳನ್ನು ಬಜೆಟ್ಟಿನ ಬೇರೆ ಬೇರೆ ಕಡೆ ಸೇರಿಸಿರುವುದರಿಂದ, ಖರ್ಚುಗಳು ಕ್ರೋಡೀಕರಣಗೊಂಡಿಲ್ಲ. ಉದಾಹರಣೆಗೆ, ಬಜೆಟ್‌ ಭಾ ಷಣದಲ್ಲಿ ಬಿಹಾರದ ಎಕ್ಸ್‌ಪ್ರೆಸ್‌ವೇಗಳು ಮತ್ತು ಸೇತುವೆಗಳಿಗೆ 26,000 ಕೋಟಿ ರೂ.ಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಆದರೆ, ರಾಜ್ಯದ ಪಿರ್ಪೈಂಟಿಯಲ್ಲಿ 2,400 ಮೆಗಾವ್ಯಾಟ್‌ ಸಾಮರ್ಥ್ಯದ ವಿದ್ಯುತ್ ಯೋಜನೆಯನ್ನು ಸ್ಥಾಪಿಸುವ ಪ್ರಸ್ತಾಪವೂ ಇದೆ.

ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯ ಅಭಿವೃದ್ಧಿಗೆ 15,000 ಕೋಟಿ ರೂ. ನೀಡಲಾಗುತ್ತಿದೆ. ಬಹುಪಕ್ಷೀಯ ಏಜೆನ್ಸಿಗಳ ಮೂಲಕ ಹಣವನ್ನು ವ್ಯವಸ್ಥೆಗೊಳಿಸುತ್ತಿದ್ದು, ಕೇಂದ್ರವು ಖಾತ್ರಿ ನೀಡುತ್ತದೆ.

ಪೊಲಾವರಂ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಹೇಳಲಾಗಿದೆ. ಈ ಎರಡು ರಾಜ್ಯಗಳಿಗೆ ನೀಡಿರುವ ಅನುದಾನಗಳು ಇತರ ರಾಜ್ಯಗಳ ಮುಖ್ಯಮಂತ್ರಿಗಳ ಸಿಟ್ಟು ಹೆಚ್ಚಿಸಲಿದೆ.

ವಿತ್ತೀಯ ಕೊರತೆಯ ನಿಯಂತ್ರಣ: ಹಣಕಾಸು ಸಚಿವರು ಲೆಕ್ಕಾಚಾರ ಮಾಡುವಾಗ, ಹಣಕಾಸಿನ ಬಲವರ್ಧನೆಯನ್ನು ಕಡೆಗಣಿಸಿಲ್ಲ. ವಿತ್ತೀಯ ಕೊರತೆ ಜಿಡಿಪಿಯ ಶೇ.4.9 ರಷ್ಟು ಇದ್ದು, ನಿಯಂತ್ರಣದಲ್ಲಿದೆ. 2026 ರ ವೇಳೆಗೆ, ಎಫ್‌ಆರ್‌ಬಿಎಂ(ಫಿಸ್ಕಲ್‌ ರೆಸ್ಪಾನ್ಸಿಬಿಲಿಟಿ ಆಂಡ್‌ ಬಜೆಟ್‌ ಮ್ಯಾನೇಜ್ಮೆಂಟ್‌ ಕಾಯಿದೆ) ಅನ್ವಯ ಶೇ. 4.5 ರ ಗುರಿಯನ್ನು ಸಾಧಿಸುವ ವಿಶ್ವಾಸ ಹೊಂದಿದ್ದಾರೆ.

ಬಜೆಟ್‌ನಲ್ಲಿ ಅದರ ಬಗ್ಗೆ ಮಾತನಾಡದಿದ್ದರೂ, ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ವಿತ್ತ ಸಚಿವಾಲಯಕ್ಕೆ ಲಾಭಾಂಶದ ರೂಪದಲ್ಲಿ 2.11 ಲಕ್ಷ ಕೋಟಿ ರೂ. ನೀಡಿರುವುದರಿಂದ, ಹಣಕಾಸು ಸಚಿವರಿಗೆ ಸಾಕಷ್ಟು ಸ್ವಾತಂತ್ರ್ಯ ಲಭ್ಯವಾಗಿದೆ.

ಭಾರತದ ಬಾಹ್ಯ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ.0.7 ಇದೆ ಮತ್ತು ವಿದೇಶಿ ವಿನಿಮಯ ಮೀಸಲು ಆರರಿಂದ ಎಂಟು ತಿಂಗಳ ಆಮದು ಬಿಲ್‌ ನಿರ್ವಹಿಸುವಷ್ಟಿದೆ. ವಿದೇಶದಿಂದ ಹಣದ ಹರಿವು ಆರೋಗ್ಯಕರವಾಗಿದೆ; ಇದು ಕಡಿಮೆ ರಫ್ತು ಮತ್ತು ಹೆಚ್ಚಿನ ಆಮದುಗಳಿಂದ ಉಂಟಾದ ವ್ಯಾಪಾರ ಸಮತೋಲವನ್ನು ಗಣನೀಯವಾಗಿ ಸರಿದೂಗಿಸಿದೆ.

ತೆರಿಗೆದಾರರಿಗೆ ಅಲ್ಪ ಪರಿಹಾರ, ಚಿಲ್ಲರೆ ಹೂಡಿಕೆದಾರರಿಗೆ ಕುತ್ತು: ಹಣಕಾಸು ಸಚಿವರು ಹಳೆಯ ತೆರಿಗೆ ಪದ್ಧತಿ ಬದಲು, ಹೊಸ ತೆರಿಗೆ ಪದ್ಧತಿ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಕನಿಷ್ಠ ಪರಿಹಾರ ನೀಡಿದ್ದಾರೆ. ಆದರೆ, ಕಡಿಮೆ ಅವಧಿಯ ಬಂಡವಾಳ ಲಾಭ ತೆರಿಗೆ (ಎಸ್‌ಟಿಸಿಜಿ) ಯನ್ನು ಶೇ.5 ಮತ್ತು ದೀರ್ಘಾವಧಿ ಲಾಭ ತೆರಿಗೆ (ಎಲ್‌ಟಿಸಿಜಿ)ಯನ್ನು ಶೇ.2.5 ರಷ್ಟು ಹೆಚ್ಚಿಸುವ ಮೂಲಕ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವವರ ಮೇಲೆ ಪ್ರಹಾರ ನಡೆಸಿದ್ದಾರೆ. ಇದರಿಂದ, ಷೇರು ಮಾರುಕಟ್ಟೆಗಳು ತಕ್ಷಣ ಕುಸಿದವು.

ಫ್ಯೂಚರ್ಸ್‌ ಮತ್ತು ಆಪ್ಷನ್‌(ಎಫ್‌ ಆಂಡ್‌ ಒ) ವಿಭಾಗದಲ್ಲಿ ಊಹಾಪೋಹ ಹೆಚ್ಚಳದಿಂದ, ಷೇರುಗಳ ಅಧಿಕ ಮೌಲ್ಯಮಾಪನ ಆತಂಕದ ಅಂಶವಾಗಿದೆ. ಎಫ್ ಮತ್ತು ಒ ವಿಭಾಗಕ್ಕೆ ತೆರಿಗೆ ವಿಧಿಸಲಾಗುತ್ತಿದೆ.

ಇಷ್ಟಲ್ಲದೆ, ಇದರಿಂದ ಠೇವಣಿಗಳು ಸ್ಟಾಕ್ ಮಾರುಕಟ್ಟೆಗಳ ಕಡೆಗೆ ಚಲಿಸುತ್ತವೆ ಎಂದು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಕಳವಳ ವ್ಯಕ್ತಪಡಿಸಿವೆ. ಇದು ಅವುಗಳ ಸಾಲ-ಠೇವಣಿ ಅನುಪಾತವನ್ನು ಘಾಸಿಗೊಳಿಸುತ್ತದೆ.

ಹವಾಮಾನ ಬದಲಾವಣೆ ತಗ್ಗಿಸುವ ಕ್ರಮಗಳು: ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಹಠಾತ್ ಪ್ರವಾಹ ಮತ್ತು ಮೇಘಸ್ಫೋಟದ ವಿಪತ್ತುಗಳನ್ನು ತಗ್ಗಿಸುವಿಕೆ, ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯವನ್ನು ಸುಧಾರಿಸಲು ನಗರ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ಉಲ್ಲೇಖಿಸಿದೆ.

ರೈಲ್ವೆ, ರಕ್ಷಣೆ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಂತಹ ಸಚಿವಾಲಯಗಳಿಗೆ ವಲಯವಾರು ಹಂಚಿಕೆ ಬಗ್ಗೆ ಬಜೆಟ್ ಏನೂ ಹೇಳಿಲ್ಲ. ಹಿಂದೆ ಪ್ರತ್ಯೇಕ ಬಜೆಟ್ ಮಂಡಿಸುತ್ತಿದ್ದ ರೈಲ್ವೆ ಸಚಿವಾಲಯ, ಈಗ ಸಚಿವರ ಬಜೆಟ್ ಭಾಷಣದಲ್ಲಿ ಉಲ್ಲೇಖವನ್ನೇ ಕಾಣಲಿಲ್ಲ.

ದಿಕ್ಕು ಬದಲು: ಹಿಂದಿನ ದೀರ್ಘ ಭಾಷಣಗಳಿಗೆ ಹೋಲಿಸಿದರೆ, ಈ ಬಾರಿಯ ಬಜೆಟ್‌ ಚಿಕ್ಕದಾಗಿದ್ದು, ಕೇವಲ 14,498 ಪದಗಳನ್ನು ಹೊಂದಿದೆ. ಇದೊಂದು ದೊಡ್ಡ ಪರಿಕಲ್ಪನೆ ಅಲ್ಲದೆ ಇರಬಹುದು; ಆದರೆ, ಬೆಳವಣಿಗೆಯ ಗುರಿಯನ್ನು ಹೊಂದಿರುವ ಹಿಂದಿನ ಕಾರ್ಯನೀತಿಗಳ ದಿಕ್ಕಿನ ತಿದ್ದುಪಡಿ ಮತ್ತು ಬಲವರ್ಧನೆಯನ್ನುತೋರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಡೆತಡೆ ಬಂದಾಗ ತಮ್ಮ ಸ್ವಂತ ಯೋಜನೆಗಳನ್ನು, ವಿಶೇಷವಾಗಿ ಅವು ಅವರ ಚುನಾವಣೆ ಲೆಕ್ಕಾಚಾರಗಳಿಗೆ ಧಕ್ಕೆ ತಂದಾಗ, ಹಿಂಪಡೆಯಲು ಹಿಂಜರಿಯುವುದಿಲ್ಲ.

ಈ ಹಿಂದೆ ಅವರು ಕೃಷಿ ಕಾಯಿದೆಗಳನ್ನು ಹಿಂಪಡೆದಿದ್ದರು, ಭೂಸುಧಾರಣೆಗಳನ್ನು ನಿಧಾನಿಸಿದರು ಮತ್ತು ಇತರ 'ಕಿರಿಕಿರಿ' ಕೇಂದ್ರ ಕಾನೂನುಗಳನ್ನು ವರ್ಜಿಸಿದರು. ಆ ಅರ್ಥದಲ್ಲಿ ನೋಡಿದರೆ, ಬಜೆಟ್ ಅದರ ಮುಂದುವರಿಕೆ ಎನ್ನಬಹುದು. 

ಘೋಷಣೆಗಳನ್ನು ದಾಟಿ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸವಾಲಾಗಿರಲಿದೆ.

Tags:    

Similar News