ಭಾರತದಲ್ಲಿ ರೈತರ ಎರಡು ಮಹಾ ಆಂದೋಲನ: 2021 ಮತ್ತು 2024 ಬದಲಾಗಿದ್ದೇನು ?
ಲೋಕಸಭೆ ಚುನಾವಣೆ: ಎಚ್ಚರಿಕೆಯ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ;
ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ದೆಹಲಿ ಚಲೋ ಕರೆ ನೀಡಿದಾಗಿನಿಂದ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಫೆಬ್ರವರಿ 13ರಂದು ಪಂಜಾಬ್‌ನ ರೈತ ಸಂಘಟನೆಗಳು ದೆಹಲಿ ಚಲೋಗೆ ಕರೆ ನೀಡಿದಾಗಿನಿಂದ ಕೇಂದ್ರ ಸರ್ಕಾರ ಸಕಾರಾತ್ಮಕ ಹಾಗೂ ಶೀಘ್ರವಾಗಿ ಸ್ಪಂದಿಸುತ್ತಿದೆ.
2020ರಲ್ಲಿ ರೈತರ ಆಂದೋಲದಲ್ಲಿ ಉಂಟಾಗಿದ್ದ ಗೊಂದಲ ಹಾಗೂ ಅಪಾಯಕಾರಿ ಬೆಳವಣಿಗೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತಿದೆ.
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡ ಬೆನ್ನಲ್ಲಿಯೇ ಪ್ರತಿಭಟನಾನಿರತ ರೈತ ಸಂಘಟನೆಗಳೊಂದಿಗೆ ಮಾತುಕತೆ ಪ್ರಾರಂಭಿಸಲು ಕೇಂದ್ರ ಸರ್ಕಾರವು ಮೂವರು ಕೇಂದ್ರ ಸಚಿವರನ್ನು ನಿಯೋಜಿಸಿತ್ತು.
ಅಲ್ಲದೇ ಎರಡು ವಾರದ ಅವಧಿಯಲ್ಲಿ ನಾಲ್ಕು ಸುತ್ತಿನ ಮಾತುಕತೆಗಳನ್ನು ಈ ಸಚಿವರು ರೈತರೊಂದಿಗೆ ನಡೆಸಿದರು.
ರೈತರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಐದು ವರ್ಷಗಳ ಕಾಲ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಸಂಸ್ಥೆಗಳು
ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲು ಕೇಂದ್ರ ಸಚಿವರು ಭಾನುವಾರ ಪ್ರಸ್ತಾಪಿಸಿದರು. ಹೀಗಾಗಿ, ಮುಂದಿನ ಎರಡು ದಿನಗಳಲ್ಲಿ ತಜ್ಞರು ಹಾಗೂ ರೈತ ಮುಖಂಡರೊಂದಿಗೆ
ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಚರ್ಚಿಸಿ ಮುಂದಿನ ನಿರ್ಧರ ಪ್ರಕಟಿಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿಲುವೇನು ?
ರೈತ ಮುಖಂಡರೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಎನ್‌ಸಿಸಿಎಫ್ (ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್) ಮತ್ತು ಎನ್‌ಎಎಫ್‌ಇಡಿ
(ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ) ನಂತಹ ಸಹಕಾರಿ ಸಂಘಗಳು ಮುಂದಿನ ಐದು ವರ್ಷಗಳವರೆಗೆ ರೈತರ ಬೆಳೆಯನ್ನು ಎಂಎಸ್‌ಪಿಯಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಿವೆ.
ಇದರಲ್ಲಿ ಉದ್ದಿನ ಬೇಳೆ, ಬೇಳೆ ಅಥವಾ ಮೆಕ್ಕೆಜೋಳ ಧಾನ್ಯಗಳು ಇದರಲ್ಲಿ ಸೇರಿವೆ ಎಂದಿದ್ದಾರೆ.
ಈ ರೀತಿ ಖರೀದಿ ಮಾಡುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ ಮತ್ತು ಇದಕ್ಕಾಗಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಪಂಜಾಬ್‌ನ ಕೃಷಿ
ಉಳಿಯುವುದರೊಂದಿಗೆ ಅಂತರ್ಜಲ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಭೂಮಿಯ ಬಂಜರುತನ ಕಡಿಮೆಯಾಗಲಿದೆ ಎಂದಿದ್ದಾರೆ.
ಬದಲಾದ ಕೇಂದ್ರ ಸರ್ಕಾರದ ತಂತ್ರ
2020ರಲ್ಲಿ ನಡೆದ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದ ರೀತಿಗೂ, ಈಗ ಕೇಂದ್ರ ಸರ್ಕಾರ ಪ್ರತಿಕ್ರಿಯಿಸುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.
2020ರಲ್ಲಿ ನಡೆದ ರೈತರ ಆಂದೋಲನವು ಭಾರಿ ಆಕ್ರೋಶ ಹುಟ್ಟುಹಾಕಿತ್ತು. ಅಲ್ಲದೇ ರೈತರ ಪ್ರತಿಭಟನೆಯು ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿತ್ತು.
ಆಗ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತರು ಒತ್ತಾಯಿಸಿದ್ದರು.
ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಸಹ ಇರುವುದರಿಂದ ಈ ಬಾರಿ ಕೇಂದ್ರ ಸರ್ಕಾರ ರೈತರೊಂದಿಗೆ ವೇಗವಾಗಿ ಮಾತುಕತೆ ನಡೆಸುತ್ತಿದೆ.
ಕೇಂದ್ರ ಸಚಿವರನ್ನೇ ಮಾತುಕತೆಗೆ ನೇಮಿಸಲಾಗಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆಯ ಸ್ವರೂಪ ಹಾಗೂ ಇದರಿಂದ ಆಗುವ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸಿದೆ.
ವಿಶೇಷವಾಗಿ ಸರ್ಕಾರವು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮತ್ತು ಪ್ರಸಿದ್ಧ ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ ಸಮಯದಲ್ಲಿ
ಈ ಬೆಳವಣಿಗೆ ನಡೆದಿದೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಬಹುದೊಡ್ಡ ರೈತ ಸಮುದಾಯವನ್ನು ಎದುರಾಕಿಕೊಳ್ಳುವುದು ವಿವೇಕಯುತ ನಡೆಯಲ್ಲ ಎನ್ನುವುದನ್ನು ಸಹ ಕೇಂದ್ರ ಸರ್ಕಾರ ತಿಳಿದುಕೊಂಡಿದೆ.
2020 ಮತ್ತು 2024ರ ಬದಲಾದ ಚಿತ್ರಣ
ರೈತರೊಂದಿಗೆ ಮಾತನಾಡುವ ಕ್ರಮದಲ್ಲಿಯೂ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಕಳೆದ ಬಾರಿ ರೈತರ ಬೃಹತ್ ಪ್ರತಿಭಟನೆಗಳು ನಡೆದಾಗ ಮೊದಲು ಅಧಿಕಾರಿಗಳನ್ನು ರೈತರೊಂದಿಗೆ ಮಾತನಾಡಲು ಕಳುಹಿಸಲಾಗಿತ್ತು.
ಅದು ವಿಫಲವಾದ ಸಂದರ್ಭದಲ್ಲಿ ಅಂದಿನ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಆದರೆ, ಇದೇ ಫೆಬ್ರವರಿ 8 ರಂದು ರೈತರೊಂದಿಗೆ ಮಾತುಕತೆ ನಡೆಸಲು
ಮೂರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅರ್ಜುನ್ ಮುಂಡಾ ಮತ್ತು ನಿತ್ಯಾನಂದ ರೈ ಅವರನ್ನು ನಿಯೋಜಿಸುವಲ್ಲಿ ಕೇಂದ್ರದ ಮುಂಜಾಗ್ರತಾ ಕ್ರಮವನ್ನು ತಿಳಿಸುತ್ತದೆ.
ಇದಾದ ನಂತರ ರೈತರೊಂದಿಗೆ ನಾಲ್ಕು ಸುತ್ತಿನ ಮಾತುಕತೆಗಳು ನಡೆದಿವೆ. ಕಳೆದ ಬಾರಿ 11 ಸುತ್ತುಗಳ ಮಾತುಕತೆಗಳ ಹೊರತಾಗಿಯೂ ಯಾವುದೇ ಸೂಕ್ತ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿರಲಿಲ್ಲ.
ಆದರೆ, ಈ ಬಾರಿ ಕೇಂದ್ರ ಸರ್ಕಾರವು ವರ್ತಿಸುವ ರೀತಿಯನ್ನು ನೋಡಿದರೆ, ಹಳೆಯ ತಪ್ಪುಗಳನ್ನು ಮರುಕಳಿಸಿದಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಅನುಸರಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ರೈತ ಸಂಘಟನೆಗಳಲ್ಲಿ ಬಿರುಕು
ಇನ್ನು ಕೇಂದ್ರ ಸರ್ಕಾರದ ಎಚ್ಚರಿಕೆಯ ಹೆಜ್ಜೆಯ ಜೊತೆ ಜೊತೆಗೆ ಕಳೆದ ಬಾರಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಇದ್ದ ರೈತ ಸಂಘಟನೆಗಳ ಬಗ್ಗಟ್ಟಿಗ್ಗು ಈ ಬಾರಿಗೂ ವ್ಯತ್ಯಾಸವಿದೆ.
ಕಳೆದ ಕೆಲವು ವರ್ಷಗಳಲ್ಲಿ ರೈತ ಸಂಘಗಳ ಸ್ವರೂಪ ಬದಲಾಗಿದೆ. ದೆಹಲಿ ಚಲೋ 2.0 ಅನ್ನು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿದೆ.
2020 ರ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಭಾರತೀಯ ಕಿಸಾನ್ ಯೂನಿಯನ್ ನಂತರ ಹಲವಾರು ಬಣಗಳಾಗಿ ವಿಭಜನೆಗೊಂಡಿವೆ.
ಬದಲಾದ ನಾಯಕರು
ರಾಕೇಶ್ ಟಿಕಾಯತ್ ಮತ್ತುಗುರ್ನಾಮ್ ಸಿಂಗ್ ಚದನಿ ಅವರು 2020ರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಮುಖ ರೈತರು ಆದರೆ, ಈ ಬಾರಿಯ ಪ್ರತಿಭಟನೆಯಲ್ಲಿ ಈ ನಾಯಕರು ಮುಂಚೂಣಿಯಲ್ಲಿ ಕಾಣಿಸುತ್ತಿಲ್ಲ.
ಬಲ್ಬೀರ್ ಸಿಂಗ್ ರಾಜೇವಾಲ್, ರಾಕೇಶ್ ಟಿಕಾಯತ್, ಗುರ್ನಾಮ್ ಸಿಂಗ್ ಚದನಿ ಮತ್ತು ಜೋಗಿಂದರ್ ಸಿಂಗ್ ಸೇರಿದಂತೆ ಹಲವು ರೈತ ಮುಖಂಡರು ಪ್ರತ್ಯೇಕವಾಗಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಆದರೆ, ಪಂಜಾಬ್ ಹಾಗೂ ಹರಿಯಾಣದ ಗಡಿಭಾಗದಲ್ಲಿ ಪೊಲೀಸರು ದೆಹಲಿ ಚಲೋ ತಡೆದಿದ್ದಾರೆ. 2020-21 ರೈತರ ಪ್ರತಿಭಟನೆಗೆ ಹಲವು ಕ್ಷೇತ್ರಗಳಿಂದ ಬೆಂಬಲ ವ್ಯಕ್ತವಾಗಿತ್ತು.
ಆದರೆ, ಈ ಬಾರಿಯ ರೈತ ಪ್ರತಿಭಟನೆಗೆ ರೈತ ಸಂಘಗಳ ನೇರ ಬೆಂಬಲವೂ ಇಲ್ಲ ಎನ್ನುವಂತಾಗಿದೆ.
ಮುಂಜಾಗ್ರತಾ ಕ್ರಮ
ಕೇಂದ್ರ ಸರ್ಕಾರವು ರೈತರು ದೆಹಲಿ ಚಲೋಗೆ ಕರೆ ನೀಡಿದ ಬೆನ್ನಲ್ಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಈ ಬಾರಿ ಅನುಸರಿಸಿದೆ.
2020ರಲ್ಲಿ ರೈತರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಿ, ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಆದರೆ, ಈ ಬಾರಿ ಅವರು ದೆಹಲಿ ಪ್ರವೇಶಿಸುವುದನ್ನು ತಡೆಯಲು ಕ್ರಮವಹಿಸಲಾಗಿತ್ತು.
ರೈತರು ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ರಸ್ತೆಗಳಲ್ಲಿ ಮೊಳೆಗಳನ್ನು ಹೊಡೆಯಲಾಯಿತು , ಸಿಮೆಂಟ್ ಬ್ಯಾರಿಕೇಡ್‌ಗಳು ಮತ್ತು ಮುಳ್ಳುತಂತಿಗಳನ್ನು ಬಳಸಿ ದೆಹಲಿಯ ಎಲ್ಲಾ ರಸ್ತೆಗಳನ್ನು ಮುಚ್ಚಲಾಯಿತು.
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಭಾರೀ ವಿರೋಧವೂ ವ್ಯಕ್ತವಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಸರ್ಕಾರ ಸೆಕ್ಷನ್ 144 ಜಾರಿಗೊಳಿಸಲಾಯಿತು.
ಹರಿಯಾಣ ಸರ್ಕಾರವು ಪಂಜಾಬ್‌ಗೆ ಹೊಂದಿಕೊಂಡಿರುವ ಗಡಿಗಳನ್ನು ಮುಚ್ಚಿದೆ.
ಪ್ರತಿಭಟನಾ ನಿರತ ರೈತರು ಪಂಜಾಬ್‌ನ ಶಂಭು ಗಡಿ ಮತ್ತು ಖಾನೌರಿ ಗಡಿಯನ್ನು ದಾಡಿ ಮುಂದುವರಿಯಲು ಸಾಧ್ಯವಾಗದ ರೀತಿ ಮಾಡಲಾಗಿದೆ.
ರೈತರ ಪ್ರತಿಭಟನಾ ವಿಷಯಗಳೇನು ?
ಕಳೆದ ಬಾರಿ ರೈತರು ಹೊಸ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದರು. ಈ ಬಾರಿ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಕಳೆದ ಬಾರಿ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಬೆಲೆ ಮತ್ತು ಕೃಷಿ ಸೇವೆಗಳ ಕಾಯ್ದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯನ್ನು ರೈತರು ವಿರೋಧಿಸಿದ್ದರು.
ಈ ಬಾರಿ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿಗೆ ಕಾನೂನು ಖಾತರಿ, ರೈತರ ಸಂಪೂರ್ಣ ಸಾಲ ಮನ್ನಾ, 2020-21ರ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾದ
ಪ್ರಕರಣಗಳನ್ನು ಹಿಂಪಡೆಯುವುದು, ಸ್ವಾಮಿನಾಥನ್ ಆಯೋಗದ ಶಿಫಾರಸು ಅನುಷ್ಠಾನ ಮತ್ತು ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ಮುಂತಾದ ಬೇಡಿಕೆ ಇದೆ.