ಸಂಗೀತ ನಿರ್ದೇಶಕ ಇಳಯರಾಜಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ: ಕೃತಿಸ್ವಾಮ್ಯ ಅರ್ಜಿ ವಜಾ
ಸೋನಿ ಕಂಪನಿಯು, ಇಳಯರಾಜ ಅವರ 536 ಸಂಗೀತ ಕೃತಿಗಳನ್ನು ಬಳಸದಂತೆ ಇಳಯರಾಜ ಮ್ಯೂಸಿಕ್ ಎನ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (IMMPL) ವಿರುದ್ಧ ತಡೆಯಾಜ್ಞೆ ಕೋರಿತ್ತು.;
ತಮ್ಮ 500ಕ್ಕೂ ಹೆಚ್ಚು ಸಂಗೀತ ಸಂಯೋಜನೆಗಳಿಗೆ ಸಂಬಂಧಿಸಿದ ಕೃತಿಸ್ವಾಮ್ಯ ವಿವಾದವನ್ನು ಬಾಂಬೆ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ (ಜುಲೈ 28) ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಬೇಕೆಂಬ ಇಳಯರಾಜ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ಮನವಿಯನ್ನು ಪುರಸ್ಕರಿಸಲಿಲ್ಲ.
ಪ್ರಕರಣದ ಹಿನ್ನೆಲೆ ಏನು?
ಈ ಕಾನೂನು ಹೋರಾಟವು 2022ರಲ್ಲಿ ಸೋನಿ ಮ್ಯೂಸಿಕ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ಕಂಪನಿಯು ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವುದರೊಂದಿಗೆ ಆರಂಭಗೊಂಡಿತ್ತು. ಸೋನಿ ಕಂಪನಿಯು, ಇಳಯರಾಜ ಅವರ 536 ಸಂಗೀತ ಕೃತಿಗಳನ್ನು ಬಳಸದಂತೆ ಇಳಯರಾಜ ಮ್ಯೂಸಿಕ್ ಎನ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (IMMPL) ವಿರುದ್ಧ ತಡೆಯಾಜ್ಞೆ ಕೋರಿತ್ತು. ಓರಿಯಂಟಲ್ ರೆಕಾರ್ಡ್ಸ್ ಮತ್ತು ಎಕೋ ರೆಕಾರ್ಡಿಂಗ್ ಕಂಪನಿಗಳ ಮೂಲಕ ತಾವು ಈ ಕೃತಿಗಳ ಹಕ್ಕುಗಳನ್ನು ಪಡೆದಿರುವುದಾಗಿ ಸೋನಿ ಹೇಳಿಕೊಂಡಿದೆ.
ವಿವಾದಿತ 536 ಕೃತಿಗಳಲ್ಲಿ 310 ಕೃತಿಗಳ ಕುರಿತು ಈಗಾಗಲೇ ಮದ್ರಾಸ್ ಹೈಕೋರ್ಟ್‌ನಲ್ಲಿ ಸಮಾನಾಂತರ ಪ್ರಕರಣ ವಿಚಾರಣೆಯಲ್ಲಿದೆ ಎಂದು ಇಳಯರಾಜರ ಕಂಪನಿ ವಾದಿಸಿತ್ತು. ಇಳಯರಾಜ ಅವರು 2014ರಲ್ಲಿ ಎಕೋ ರೆಕಾರ್ಡಿಂಗ್ ವಿರುದ್ಧ ತಮ್ಮ ಸಂಯೋಜನೆಗಳ ಹಕ್ಕನ್ನು ಪ್ರಶ್ನಿಸಿ ಈ ಮೊಕದ್ದಮೆ ಹೂಡಿದ್ದರು. ಆ ಪ್ರಕರಣದಲ್ಲಿ 2019ರಲ್ಲಿ ಮದ್ರಾಸ್ ಹೈಕೋರ್ಟ್, ಸಂಯೋಜಕರಾಗಿ ಇಳಯರಾಜ ಅವರ ನೈತಿಕ ಮತ್ತು ವಿಶೇಷ ಹಕ್ಕುಗಳನ್ನು ಎತ್ತಿಹಿಡಿದು ಮಹತ್ವದ ತೀರ್ಪು ನೀಡಿತ್ತು.
ಭಾರತದ ಅತ್ಯಂತ ಪ್ರತಿಭಾವಂತ ಸಂಯೋಜಕರಲ್ಲಿ ಒಬ್ಬರಾದ ಇಳಯರಾಜ ಅವರು, 1,500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ 7,500ಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.