ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ನಾಗಾಲೋಟವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಶುಭಾಂಶು ಅವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದಾಗ ದೇಶಾದ್ಯಂತ ಜನರು ಸಂತಸದಿಂದ ಕುಣಿದಾಡಿದರು, ಪ್ರತಿಯೊಬ್ಬರ ಹೃದಯದಲ್ಲೂ ಹೆಮ್ಮೆಯ ಭಾವನೆ ಮೂಡಿತು ಎಂದು ಮೋದಿ ಹೇಳಿದ್ದಾರೆ.;

Update: 2025-07-27 06:54 GMT

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಮಹತ್ತರ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನದ ಯಶಸ್ಸನ್ನು ಉಲ್ಲೇಖಿಸಿದ ಅವರು, ದೇಶದ ಮಕ್ಕಳಲ್ಲಿ ಬಾಹ್ಯಾಕಾಶದ ಬಗ್ಗೆ ಹೊಸ ಕುತೂಹಲದ ಅಲೆ ಎದ್ದಿದೆ ಎಂದು ಹೇಳಿದರು.

ಭಾನುವಾರ (ಜುಲೈ 27) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇತ್ತೀಚೆಗೆ, ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಮರಳಿದ್ದರ ಬಗ್ಗೆ ದೇಶದಲ್ಲಿ ಬಹಳಷ್ಟು ಚರ್ಚೆಯಾಯಿತು. ಶುಭಾಂಶು ಅವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದಾಗ ದೇಶಾದ್ಯಂತ ಜನರು ಸಂತಸದಿಂದ ಕುಣಿದಾಡಿದರು, ಪ್ರತಿಯೊಬ್ಬರ ಹೃದಯದಲ್ಲೂ ಹೆಮ್ಮೆಯ ಭಾವನೆ ಮೂಡಿತು," ಎಂದರು.

ಹೆಚ್ಚುತ್ತಿರುವ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು

ದೇಶದಲ್ಲಿ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ವೇಗವಾಗಿ ಬೆಳೆಯುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, "ಐದು ವರ್ಷಗಳ ಹಿಂದೆ 50ಕ್ಕಿಂತ ಕಡಿಮೆ ಸ್ಟಾರ್ಟ್‌ಅಪ್‌ಗಳಿದ್ದವು. ಇಂದು ಕೇವಲ ಬಾಹ್ಯಾಕಾಶ ಕ್ಷೇತ್ರದಲ್ಲೇ 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದು ನಮ್ಮ ಯುವಕರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ," ಎಂದು ಹೇಳಿದರು.

ಆಗಸ್ಟ್ 23 ರಂದು ಆಚರಿಸಲಾಗುವ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವನ್ನು ಹೇಗೆ ವಿಶಿಷ್ಟವಾಗಿ ಆಚರಿಸಬೇಕು ಎಂಬುದರ ಕುರಿತು ಜನರಿಂದ ಸಲಹೆಗಳನ್ನು ಆಹ್ವಾನಿಸಿದರು.

ಇದೇ ವೇಳೆ, 'ವಿಕಸಿತ ಭಾರತ'ದ ಕನಸು 'ಆತ್ಮನಿರ್ಭರ ಭಾರತ'ದಿಂದ ಮಾತ್ರ ಸಾಧ್ಯ, ಮತ್ತು ಅದಕ್ಕೆ 'ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಎಂಬುದು ಬಲವಾದ ಅಡಿಪಾಯ ಎಂದು ಅವರು ಪ್ರತಿಪಾದಿಸಿದರು.

ಭಾರತದ ಯುವ ಪ್ರತಿಭೆಗಳು ರಸಾಯನಶಾಸ್ತ್ರದಿಂದ ಗಣಿತದವರೆಗೆ ಒಲಂಪಿಯಾಡ್‌ಗಳಲ್ಲಿ ಮಿಂಚುತ್ತಿರುವುದನ್ನು ಶ್ಲಾಘಿಸಿದ ಅವರು, ಶಿವಾಜಿ ಮಹಾರಾಜರ ಶೌರ್ಯ ಮತ್ತು ದೂರದೃಷ್ಟಿಯ ಸಂಕೇತಗಳಾದ 12 ಮರಾಠಾ ಕೋಟೆಗಳಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಸಿಕ್ಕಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು.

Similar News