"ನನ್ನ ಸೇವೆ ನೀರಲ್ಲಿ ಕೊಚ್ಚಿ ಹೋಯ್ತು": ಮಲ್ಲಿಕಾರ್ಜುನ ಖರ್ಗೆ ನೋವಿನ ಮಾತಿನ ಮರ್ಮವೇನು?

ಖರ್ಗೆಯವರ ಹೇಳಿಕೆಯು ಕರ್ನಾಟಕ ಕಾಂಗ್ರೆಸ್‌ನಲ್ಲಿ ದಶಕಗಳಿಂದ ನಡೆಯುತ್ತಿರುವ ಆಂತರಿಕ ಅಧಿಕಾರ ರಾಜಕಾರಣಕ್ಕೆ ಹಿಡಿದ ಕೈಕನ್ನಡಿಯಾಗಿದೆ.;

Update: 2025-07-28 05:59 GMT

"ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಶ್ರಮಿಸಿದೆ, ಆದರೆ ಮುಖ್ಯಮಂತ್ರಿಯಾದದ್ದು ಬೇರೆಯವರು" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮತ್ತೊಮ್ಮೆ ತಮ್ಮ ದಶಕಗಳ ರಾಜಕೀಯ ನೋವನ್ನು ಹೊರಹಾಕಿದ್ದಾರೆ. ವಿಜಯಪುರದ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಈ ಮಾತುಗಳು, ಕೇವಲ ವೈಯಕ್ತಿಕ ಅಸಮಾಧಾನವಾಗಿ ಉಳಿಯದೆ, ಕರ್ನಾಟಕ ಕಾಂಗ್ರೆಸ್‌ನ ಆಂತರಿಕ ಅಧಿಕಾರ ಸಮೀಕರಣ ಮತ್ತು ಪ್ರಸ್ತುತ ರಾಜಕೀಯ ಚರ್ಚೆಗಳಿಗೆ ಇನ್ನಷ್ಟು ಇಂಬುಕೊಟ್ಟಿದೆ. ಅವರ ಮಾತಿನ ಮರ್ಮವೇನು ಎಂಬ ಚರ್ಚೆಯೇ ಜೋರಾಗಿದೆ.

ಅಂದ ಹಾಗೆ, ಖರ್ಗೆಯವರ ಈ ಅಸಮಾಧಾನಕ್ಕೆ ದಶಕಗಳ ಇತಿಹಾಸವಿದೆ. 1999ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದರೂ, ಮುಖ್ಯಮಂತ್ರಿ ಸ್ಥಾನ ಎಸ್.ಎಂ. ಕೃಷ್ಣ ಪಾಲಾಯಿತು. 2013ರಲ್ಲಿಯೂ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರೂ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಯಿತು. ಇದೀಗ 2023ರಲ್ಲಿಯೂ ಪಕ್ಷ ಅಧಿಕಾರಕ್ಕೆ ಬಂದಾಗ, ಅವರ ಹೆಸರು ಚಾಲ್ತಿಯಲ್ಲಿದ್ದರೂ ಅಂತಿಮವಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರು. ಈ ಸರಣಿ ಘಟನೆಗಳು, ತಮಗೆ ನಿರಂತರವಾಗಿ ಅನ್ಯಾಯವಾಗಿದೆ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಯ ಅಧಿಕಾರಾವಧಿ ಮತ್ತು ಭವಿಷ್ಯದ ನಾಯಕತ್ವದ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಖರ್ಗೆಯವರು ಈ ಹೇಳಿಕೆ ನೀಡಿರುವುದು ರಾಜಕೀಯ ಮಹತ್ವ ಪಡೆದಿದೆ. ಇದು ಸೂಕ್ತ ಸಮಯದಲ್ಲಿ ತಮ್ಮ ಅಸ್ತಿತ್ವವನ್ನು ನೆನಪಿಸುವ ಮತ್ತು ರಾಜ್ಯ ರಾಜಕಾರಣದ ಮೇಲೆ ತಮಗಿರುವ ಹಿಡಿತವನ್ನು ಪರೋಕ್ಷವಾಗಿ ಪ್ರದರ್ಶಿಸುವ ತಂತ್ರವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ರಾಷ್ಟ್ರ ರಾಜಕಾರಣಕ್ಕೆ ಸೀಮಿತವೇ?

ಖರ್ಗೆಯವರನ್ನು ರಾಜ್ಯ ರಾಜಕಾರಣದಿಂದ ವ್ಯವಸ್ಥಿತವಾಗಿ ದೂರವಿಟ್ಟು, ರಾಷ್ಟ್ರ ರಾಜಕಾರಣಕ್ಕೆ ಸೀಮಿತಗೊಳಿಸಲಾಗಿದೆ ಎಂಬ ವಾದವೂ ಮೊದಲಿನಿಂದಲೂ ಪ್ರಬಲವಾಗಿದೆ. ಎಐಸಿಸಿ ಅಧ್ಯಕ್ಷರಂತಹ ಉನ್ನತ ಹುದ್ದೆಯಲ್ಲಿದ್ದರೂ, ತವರು ರಾಜ್ಯದ ಅತ್ಯುನ್ನತ ಅಧಿಕಾರವಾದ ಮುಖ್ಯಮಂತ್ರಿ ಸ್ಥಾನ ಸಿಗದಿರುವುದೇ ಅವರಲ್ಲಿನ ನೋವಿಗೆ ಮೂಲ ಕಾರಣವಾಗಿದೆ. ನಿಗಮ-ಮಂಡಳಿ ನೇಮಕಾತಿ ಕುರಿತು ಕೇಳಿದ ಪ್ರಶ್ನೆಗೆ, 'ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕೇಳಿ' ಎಂದು ಹೇಳಿದ್ದೂ ರಾಜ್ಯ ನಾಯಕತ್ವದ ನಿರ್ಧಾರಗಳ ಬಗ್ಗೆ ಅವರಿಗಿರುವ ಅಸಮಾಧಾನದ ಸಂಕೇತ ಎಂದು ಹೇಳಲಾಗುತ್ತಿದೆ.

ಖರ್ಗೆಯವರ ಹೇಳಿಕೆಯು ಕರ್ನಾಟಕ ಕಾಂಗ್ರೆಸ್‌ನಲ್ಲಿ ದಶಕಗಳಿಂದ ನಡೆಯುತ್ತಿರುವ ಆಂತರಿಕ ಅಧಿಕಾರ ರಾಜಕಾರಣಕ್ಕೆ ಹಿಡಿದ ಕೈಕನ್ನಡಿಯಾಗಿದೆ. ಅಲ್ಲದೆ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಇರುವ ಬಲವಾದ ಹಿಡಿತದ ಬಗೆಗಿನ ಪ್ರತಿರೋಧದಂತೆ ಕಾಣುತ್ತಿದೆ. 

Tags:    

Similar News