ಟ್ರಂಪ್ ಮಾತು ಕೇಳಿ, ವ್ಯಾಪಾರ ಒಪ್ಪಂದದ ಭಯಕ್ಕೆ ಪಾಕ್ ಜತೆ ಸಂಘರ್ಷ ನಿಲ್ಲಿಸಿಲ್ಲ; ವಿದೇಶಾಂಗ ಸಚಿವಾಲಯ
ಪ್ರಧಾನಿ ಮೋದಿ ಅವರ ಆದಂಪುರ್ ವಾಯುಸೇನಾ ನಿಲ್ದಾಣದ ಭೇಟಿಯು ಪಾಕಿಸ್ತಾನದ ಇತ್ತೀಚಿನ ಹೇಳಿಕೆಗೆ ಪರೋಕ್ಷ ಸಂದೇಶವೆಂದು ಪರಿಗಣಿಸಲಾಗಿದೆ. ಪಾಕಿಸ್ತಾನವು ಆದಂಪುರದಲ್ಲಿ ಭಾರತದ ಪ್ರಮುಖ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿದೆ ಎಂದು ಹೇಳಿಕೊಂಡಿತ್ತು.;
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ 'ಇಂಡಸ್ ವಾಟರ್ಸ್ ಟ್ರೀಟಿಯನ್ನು (ಸಿಂಧೂ ಜಲ ಒಪ್ಪಂದ) ತಟಸ್ಥವಾಗಿ ಇಡಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದಾಗ ಪಾಕಿಸ್ತಾನವೇ ಕದನ ವಿರಾಮಕ್ಕೆ ಮನವಿ ಮಾಡಿತ್ತು ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವಂತೆ ವ್ಯಾಪಾರದ ವಿಷಯವು ಚರ್ಚೆಗೆ ಬಂದಿರಲಿಲ್ಲ ಎಂದು ನುಡಿದರು.
ಮೋದಿಯಿಂದ ವಾಯುಪಡೆ ಸಿಬ್ಬಂದಿ ಜತೆ ಮಾತುಕತೆ
ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್‌ನ ಆದಂಪುರ್ ವಾಯುಸೇನಾ ನಿಲ್ದಾಣಕ್ಕೆ ಭೇಟಿ ನೀಡಿ, ಇತ್ತೀಚಿನ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಾಯುಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ದೇಶದ ಎರಡನೇ ಅತಿ ದೊಡ್ಡ ವಾಯುಸೇನಾ ನೆಲೆಯಾದ ಆದಂಪುರ್‌ನಲ್ಲಿ ಪ್ರಧಾನಿ ಮೋದಿ ಅವರು ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. "ನಮ್ಮ ಸಶಸ್ತ್ರ ಪಡೆಗಳು ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತ ಸದಾ ಕೃತಜ್ಞವಾಗಿರುತ್ತದೆ. ನೀವೆಲ್ಲರೂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದ್ದೀರಿ. ನಿಮ್ಮಿಂದಾಗಿಯೇ ನಾವು ತಲೆಯೆತ್ತಿ ನಿಲ್ಲಲು ಸಾಧ್ಯವಾಗಿದೆ. ನೀವು ಇತಿಹಾಸ ಸೃಷ್ಟಿಸಿದ್ದೀರಿ. ನಿಮಗೆ ನನ್ನ ಗೌರವ ಸಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನೀವೆಲ್ಲರೂ ಧೈರ್ಯಶಾಲಿ ಯೋಧರು, ಮತ್ತು ದೇಶವು ನಿಮ್ಮನ್ನು ಹೊಂದಿರುವುದಕ್ಕೆ ಹೆಮ್ಮೆಪಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.
ತಮ್ಮ ಎಕ್ಸ್ ಖಾತೆಯಲ್ಲಿಯೂ ಈ ಕುರಿತು ಬರೆದುಕೊಂಡಿರುವ ಪ್ರಧಾನಿ ಮೋದಿ, "ಇಂದು ಬೆಳಿಗ್ಗೆ ನಾನು ಎಎಫ್‌ಎಸ್ ಆದಂಪುರಕ್ಕೆ ಭೇಟಿ ನೀಡಿ, ನಮ್ಮ ಧೈರ್ಯಶಾಲಿ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯ ಪ್ರತೀಕವಾಗಿರುವ ಅವರೊಂದಿಗೆ ಸಮಯ ಕಳೆಯುವುದು ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ರಾಷ್ಟ್ರಕ್ಕಾಗಿ ಮಾಡುವ ಸೇವೆಗೆ ಭಾರತ ಎಂದೆಂದಿಗೂ ಕೃತಜ್ಞ" ಎಂದು ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಪರೋಕ್ಷ ಸಂದೇಶ
ಪ್ರಧಾನಿ ಮೋದಿ ಅವರ ಆದಂಪುರ್ ವಾಯುಸೇನಾ ನಿಲ್ದಾಣದ ಭೇಟಿಯು ಪಾಕಿಸ್ತಾನದ ಇತ್ತೀಚಿನ ಹೇಳಿಕೆಗೆ ಪರೋಕ್ಷ ಸಂದೇಶವೆಂದು ಪರಿಗಣಿಸಲಾಗಿದೆ. ಪಾಕಿಸ್ತಾನವು ಆದಂಪುರದಲ್ಲಿ ಭಾರತದ ಪ್ರಮುಖ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿದೆ ಎಂದು ಹೇಳಿಕೊಂಡಿತ್ತು. ಈ ನಿಲ್ದಾಣವು ಭಾರತದ ಪ್ರಮುಖ ಸೈನಿಕ ನೆಲೆಗಳಲ್ಲಿ ಒಂದಾಗಿದೆ. ಪ್ರಧಾನಿ ಮೋದಿ ಅವರ ಈ ಭೇಟಿಯು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯ ಹೆಚ್ಚಿಸುವ ಜೊತೆಗೆ, ದೇಶದ ಭದ್ರತೆಗಾಗಿ ಭಾರತದ ಬದ್ಧತೆಯನ್ನು ಮತ್ತೊಮ್ಮೆ ಸಾರಿ ಹೇಳಿದೆ.