Pahalgam Terror Attack | ಕಾಶ್ಮೀರ ತೊರೆಯುತ್ತಿರುವ ಪ್ರವಾಸಿಗರು; ಕಾಶ್ಮೀರಿಗರಿಗೆ ತುತ್ತಿನ ಚೀಲ ತುಂಬಿಸುವ ಚಿಂತೆ

ಹೋಟೆಲ್ ಮಾಲೀಕರು, ಕುದುರೆ ಸವಾರಿ, ಕ್ಯಾಬ್ ಚಾಲಕರು, ಬೋಟ್​ಹೌಸ್​ ಮಾಲೀಕರು, ಪ್ರವಾಸಿ ಗೈಡ್​ಗಳು, ಕರಕುಶಲ ವ್ಯಾಪಾರಿಗಳು ಮತ್ತು ಹೋಮ್‌ ಸ್ಟೇ ಮಾಲೀಕರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುವುದು ಖಚಿತ.;

Update: 2025-04-24 01:30 GMT

"ಮಧ್ಯಾಹ್ನ 1:30ರ ಸುಮಾರಿಗೆ ಉಗ್ರಗಾಮಿಗಳ ದಾಳಿ ಸಂಭವಿಸಿತು. ನನ್ನ ಹೋಟೆಲ್‌ನಲ್ಲಿ ಉಳಿದಿದ್ದವರು ತಕ್ಷಣವೇ ಚೆಕ್‌ಔಟ್ ಮಾಡಿದರು. ದಂಪತಿಯೊಂದು ಆಗಷ್ಟೇ ಬಂದಿತ್ತಜ. ಕುಟುಂಬದವರು ಫೋನ್ ಮಾಡಿ ತಕ್ಷಣ ಮರಳುವಂತೆ ಕೋರಿಕೊಂಡ ಬಳಿಕ ಅವರೂ ಹೊರಟರು. ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾಡಿದ್ದ ಬುಕಿಂಗ್‌ಗಳೂ ಕ್ಯಾನ್ಸಲ್​ ಆಗುತ್ತಿವೆ. ಇದು ನಮಗೆ ಗರಿಷ್ಠ ಪ್ರವಾಸಿಗರು ಬರುವಂತಹ ಸಮಯ, ಈ ದಾಳಿಯ ಹಿನ್ನೆಲೆಯಲ್ಲಿ ಇನ್ಯಾವುದೇ ಪ್ರವಾಸಿಗರು ಇಲ್ಲಿಗೆ ಬರುವುದಿಲ್ಲ.

ವರ್ಷಾಂತ್ಯದವರೆಗೂ ಇದೇ ಸ್ಥಿತಿ ಇರುತ್ತದೆ ಎಂದು ಹೇಳುತ್ತಾರೆ ಪಹಲ್ಗಾಮ್‌ನ ಹೋಟೆಲ್ ಮಾಲೀಕ ಮತ್ತು ನಿವಾಸಿ ಯಾವರ್ ಲೋನ್, ಮಂಗಳವಾರದ ಭಯೋತ್ಪಾದಕ ದಾಳಿಯಿಂದ ತಮ್ಮ ಊರಿನ ಹೆಸರಿನ ಜೊತೆಗೆ ತಮ್ಮ ವ್ಯಾಪಾರದ ಮೇಲೆ ಆಗಿರುವ ಹಾನಿಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರವು 2.36 ಕೋಟಿ ಪ್ರವಾಸಿಗರನ್ನು ಸ್ವಾಗತಿಸಿದೆ. ಅವರಲ್ಲಿ 65,000 ವಿದೇಶಿಯರು ಸೇರಿದ್ದಾರೆ, ಇದು ಕಳೆದ ಒಂದು ದಶಕದಲ್ಲಿ ಅತ್ಯಧಿಕ. ಆದರೆ, ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು. 16 ಮಂದಿ ಗಾಯಗೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ಭಾರೀ ಹೊಡೆತವನ್ನುಂಟುಮಾಡಲಿದೆ.

ತೋಟಗಾರಿಕೆಯ ಜೊತೆಗೆ, ಪ್ರವಾಸೋದ್ಯಮವು ಕಾಶ್ಮೀರ ಕಣಿವೆಯಲ್ಲಿ ಜೀವನೋಪಾಯದ ಪ್ರಮುಖ ಮೂಲ, ಬೇಸಿಗೆಯಲ್ಲಿ ಇಲ್ಲಿಗೆ ಗರಿಷ್ಠ ಮಂದಿ ಬರುತ್ತಾರೆ. ಆದರೆ, ರುದ್ರ ರಮಣೀಯ ತಾಣಕ್ಕೆ ಪ್ರವಾಸಿಗರು ಧೈರ್ಯದಿಂದ ಬರುವವರೆಗೆ ಇನ್ನೂ ಸಾಕಷ್ಟು ಕಾಲ ಬೇಕು.

ಪ್ರವಾಸಿಗರಲ್ಲಿ ಭಯ

"ನಾವು ಪದಗಳಿಗೂ ಮೀರಿದ ಭಯದಲ್ಲಿದ್ದೇವೆ. ಇದೊಂದು ಭೀಕರ ಅನುಭವ," ಎಂದು ಪಹಲ್ಗಾಮ್‌ನ ಹೋಟೆಲ್‌ನಿಂದ ಚೆಕ್‌ಔಟ್ ಮಾಡಿದ ಪ್ರವಾಸಿಯೊಬ್ಬರು ಹೇಳಿದ್ದಾರೆ. "ಕಾಶ್ಮೀರದಲ್ಲಿ ಇನ್ನೂ ಎರಡು ದಿನಗಳು ಇರಬೇಕೆಂಬ ಯೋಜನೆ ಇತ್ತು. ಆದರೆ ನಾವು ಜಮ್ಮುವಿನಿಂದಲೇ ಮನೆಗೆ ಮರಳುತ್ತಿದ್ದೇವೆ. ರಜೆಯೆಂಬುದು ನಮಗೆ ಅಗತ್ಯವಾದರೂ ಸುರಕ್ಷತೆಗೆ ಆದ್ಯತೆ ನೀಡಲೇಬೇಕು. ಜೀವ ಭಯದೊಂದಿಗೆ ಯಾವ ಸ್ಥಳವನ್ನೂ ಭೇಟಿಯಾಗಲು ಸಾಧ್ಯವಿಲ್ಲ. ವಾಪಸ್​​ ಹೋಗುತ್ತಿದ್ದೇವೆ ಎಂದು ಚೆನ್ನೈನ ಬಿಜಿತ್ ವಕ್ಕಲರಿ ಎಂಬ ಪ್ರವಾಸಿಯು ತಮ್ಮ ಕುಟುಂಬದೊಂದಿಗೆ ಯೋಜಿಸಿದ್ದ ಕಾಶ್ಮೀರ ಪ್ರವಾಸವನ್ನು ರದ್ದುಗೊಳಿಸಿದ ಕಾರಣ ವಿವರಿಸಿದ್ದಾರೆ.

"ನಾನು ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಪ್ರವಾಸ ಮಾಡಲು ಯೋಜಿಸಿದ್ದೆ. ಪಯಣ ಮತ್ತು ಹೋಟೆಲ್​​ಗಳ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆಯೇ ಬುಕ್ ಮಾಡಿದ್ದೆವು. ಪಹಲ್ಗಾಮ್‌ಗೂ ಭೇಟಿ ನೀಡುವ ಯೋಜನೆಯಿತ್ತು. ಈಗ ನನ್ನ ಕುಟುಂಬವು ಕಾಶ್ಮೀರಕ್ಕೆ ಭೇಟಿ ನೀಡಲು ಭಯಪಡುತ್ತಿದೆ. ಹೀಗಾಗಿ ಯೋಜನೆಯನ್ನು ಕ್ಯಾನ್ಸಲ್​ ಮಾಡಿದ್ದೇವೆ," ಎಂದು ದ ಫೆಡರಲ್​ ಜತೆಗೆ ಅವರು ಹೇಳಿದ್ದಾರೆ.

ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ

ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರವು ವಿಶ್ವದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಗುಲ್ಮಾರ್ಗ್, ಪಹಲ್ಗಾಮ್, ಯೂಸ್ಮಾರ್ಗ್, ಕೋಕರ್‌ನಾಗ್, ವೆರಿನಾಗ್, ದೂಧ್‌ಪತ್ರಿ, ಶ್ರೀನಗರ ಮತ್ತು ಸೋನಮಾರ್ಗ್‌ನ ಹುಲ್ಲುಗಾವಲುಗಳು ಜನಪ್ರಿಯ ಆಕರ್ಷಣೆಗಳಾಗಿವೆ, ಜೊತೆಗೆ ವೈಷ್ಣೋ ದೇವಿ ಮತ್ತು ಅಕ್ಷರಧಾಮ ಯಾತ್ರೆಗಳು ಸೇರಿವೆ.

ಸಾಂಕ್ರಾಮಿಕ ರೋಗದ ಹೊರತಾಗಿಯೂ, 2020ರಲ್ಲಿ 34 ಲಕ್ಷ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. 2021ರಲ್ಲಿ ಈ ಸಂಖ್ಯೆ 1.13 ಕೋಟಿಗೆ ಏರಿತು, 2022ರಲ್ಲಿ 1.88 ಕೋಟಿಗೆ ತಲುಪಿತು. ಯಾತ್ರೆ ಮತ್ತು ಸಾಹಸ ಪ್ರವಾಸೋದ್ಯಮದ ಜೊತೆಗೆ, 2023ರಲ್ಲಿ 2.11 ಕೋಟಿ ಪ್ರವಾಸಿಗರು ಆಗಮಿಸಿದರು. 2024ರಲ್ಲಿ, ಐದು ವರ್ಷಗಳಲ್ಲಿ ಅತ್ಯಧಿಕ 2.36 ಕೋಟಿ ಪ್ರವಾಸಿಗರು ಆಗಮಿಸಿದರು.

ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರವು ಸ್ಥಳೀಯ ಆರ್ಥಿಕತೆಗೆ ವಾರ್ಷಿಕವಾಗಿ 7,000-7,500 ಕೋಟಿ ರೂಪಾಯಿಗಳ ಆದಾಯ ತಂದುಕೊಡುತ್ತದೆ. ಆದರೆ, ಈ ದುರ್ಘಟನೆ ಹೋಟೆಲ್ ಮಾಲೀಕರು, ಕ್ಯಾಬ್ ಮತ್ತು ಕುದುರೆ ಸವಾರಿ ಚಾಲಕರು, ಗೈಡ್​ಗಳು, ಟೂರ್​ ಏಜೆನ್ಸಿಗಳು, ಕರಕುಶಲ ವ್ಯಾಪಾರಿಗಳು, ಬೋಟ್​ಹೌಸ್​ ಮಾಲೀಕರು ಮತ್ತು ಚಾಲಕರ ಜೀವನೋಪಾಯಕ್ಕೆ ತೀವ್ರ ಧಕ್ಕೆ ಉಂಟು ಮಾಡಿದೆ.

ವರ್ಷವಿಡೀ ಪ್ರವಾಸಿಗರು ಕಾಶ್ಮೀರಕ್ಕೆ ಆಗಮಿಸುತ್ತಾರಾದರೂ, ಮಾರ್ಚ್-ಜೂನ್ ತಿಂಗಳುಗಳು ತುಂಬಾ ಗಿಜಿಗುಡುವ ಕಾಲ. ಈ ಋತುವಿನ ಸಂಪಾದನೆಯೇ ಪ್ರವಾಸೋದ್ಯಮದಲ್ಲಿ ತೊಡಗಿರುವ ಸ್ಥಳೀಯರಿಗೆ ವರ್ಷವಿಡೀ ಜೀವನೋಪಾಯಕ್ಕೆ ಆಧಾರವಾಗಿದೆ. ಸರಾಸರಿಯಾಗಿ, ಪ್ರತಿ ತಿಂಗಳು 1.3 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಏಪ್ರಿಲ್‌ನಲ್ಲಿ 2.2 ಲಕ್ಷ, ಮೇನಲ್ಲಿ 3.5 ಲಕ್ಷ, ಜೂನ್ ಮತ್ತು ಜುಲೈನಲ್ಲಿ ಕ್ರಮವಾಗಿ 4.5 ಲಕ್ಷ ಮತ್ತು 3.5 ಲಕ್ಷ ಪ್ರವಾಸಿಗರು ಆಗಮಿಸುತ್ತಾರೆ.

ರಕ್ತಪಾತ, ರದ್ದತಿಗಳು

ಮಂಗಳವಾರದ ಭಯೋತ್ಪಾದಕ ದಾಳಿಯ ನಂತರ, ಅನೇಕ ಪ್ರವಾಸಿಗರು ಊರಿನ ಕಡೆಗೆ ಮುಖ ಮಾಡಿದ್ದಾರೆ. ಅನೇಕರು ತಮ್ಮ ಪ್ರವಾಸ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ. ಬುಧವಾರ, ಶ್ರೀನಗರ ನಗರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗಿದೆ.

ಕಾಶ್ಮೀರದ ಕ್ಯಾಬ್ ಚಾಲಕ ಬಿಲಾಲ್, *ದಿ ಫೆಡರಲ್*ಗೆ ಫೋನ್ ಮೂಲಕ ಮಾತನಾಡಿ, ತಾನು ಮತ್ತು ತನ್ನ ಸಹೋದ್ಯೋಗಿಗಳು ಬೇಸಿಗೆಯ ಪ್ರವಾಸಿಗರ ಓಡಾಟದ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕೆಲವು ಗ್ರಾಹಕರು ಪಹಲ್ಗಾಮ್‌ಗೆ ಭೇಟಿ ನೀಡಲು ಯೋಜಿಸಿದ್ದರು, ಆದರೆ ಅವರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಹೇಳುತ್ತಿದ್ದಾರೆ. ಶ್ರೀನಗರದಲ್ಲಿದ್ದ ಅನೇಕರು ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ," ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಶ್ರೀನಗರ ವಿಮಾನ ನಿಲ್ದಾಣಕ್ಕೆ ಪ್ರತಿದಿನ 300-400 ವಾಹನಗಳು ಪ್ರವಾಸಿಗರನ್ನು ಕರೆತರಲು ಬರುತ್ತವೆ. ಆದರೆ ಬುಧವಾರ ಕೇವಲ ನಾಲ್ಕೈದು ವಾಹನಗಳು ಮಾತ್ರ ಕಾಣಿಸಿಕೊಂಡವು ಎಂದು ಬಿಲಾಲ್ ತಿಳಿಸಿದರು.

"ಮೇ ಎರಡನೇ ವಾರದವರೆಗೆ ಬುಕಿಂಗ್​ ಕ್ಯಾನ್ಸಲ್​ ಆಗಿವೆ. ಈಗ ಕೇವಲ ಶೇಕಡಾ 5ರಷ್ಟು ಪ್ರವಾಸಿಗರನ್ನು ಕಾಣುತ್ತಿದ್ದೇವೆ. ಕಾಶ್ಮೀರದ ಆರ್ಥಿಕತೆಯು ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಇದು ನಮ್ಮ ಜೀವನೋಪಾಯಕ್ಕೆ ನೇರವಾಗಿ ಪರಿಣಾಮ ಬೀರುತ್ತದೆ," ಎಂದು ಅವರು ವಿಷಾದಿಸಿದರು.

ಆಘಾತದ ಸ್ಥಿತಿ

ಕಾಶ್ಮೀರ ಕಣಿವೆಯ ಸ್ಥಳೀಯರು ಆಘಾತದಲ್ಲಿದ್ದಾರೆ. ಹಿಂದಿನ ಭಯೋತ್ಪಾದಕ ಘಟನೆಗಳು ಪ್ರವಾಸಿಗರನ್ನು ನೇರವಾಗಿ ಗುರಿಯಾಗಿಸಿರಲಿಲ್ಲ. ಈ ಇತ್ತೀಚಿನ ರಕ್ತಪಾತವು ಪಹಲ್ಗಾಮ್‌ನಂತಹ ಪ್ರಮುಖ ಪ್ರವಾಸಿ ಆಕರ್ಷಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಹೇಳುತ್ತಾರೆ.

"ಇದು ಕೇವಲ ಪ್ರವಾಸಿಗರ ಮೇಲಿನ ದಾಳಿಯಲ್ಲ, ಇದು ಕಾಶ್ಮೀರದ ಆರ್ಥಿಕತೆಯ ಮೇಲಿನ ದಾಳಿ. ಜನರು ಮುಖ್ಯವಾಗಿ ಪ್ರವಾಸೋದ್ಯಮದಿಂದ ಜೀವನೋಪಾಯ ಅವಲಂಬಿಸಿದ್ದಾರೆ," ಎಂದು ಕಾಶ್ಮೀರಿ ಕರಕುಶಲ ಅಂಗಡಿಯ ಮಾಲೀಕ ಶೌಕತ್ 'ದ ಫೆಡರಲ್​​'ಗೆ ಫೋನ್ ಮೂಲಕ ತಿಳಿಸಿದ್ದಾರೆ. .

ಅವರ ಪ್ರಕಾರ, ಶ್ರೀನಗರ, ಗುಲ್ಮಾರ್ಗ್ ಮತ್ತು ಸೋನಮಾರ್ಗ್‌ನ ಕೆಲವು ಹೋಟೆಲ್‌ಗಳಲ್ಲಿ ಇನ್ನೂ ಕೆಲವು ಪ್ರವಾಸಿಗರಿದ್ದಾರೆ. ಆದರೆ ಪಹಲ್ಗಾಮ್‌ನ ಹೋಟೆಲ್‌ಗಳು ಸಂಪೂರ್ಣವಾಗಿ ಖಾಲಿಯಾಗಿವೆ.

"ಎಲ್ಲ ವ್ಯಾಪಾರಗಳ ಮೇಲೂ ಪರಿಣಾಮ ಬೀರುತ್ತದೆ. ಇಲ್ಲಿಗೆ ಭೇಟಿ ನೀಡಿದವರಿಗೆ ಕಾಶ್ಮೀರಿಗಳ ಬೆಂಬಲದ ಬಗ್ಗೆ ತಿಳಿದಿದೆ. ಆದರೆ ಇನ್ನೂ ಬರಬೇಕಿರುವವರು ಭಯದಲ್ಲಿರುತ್ತಾರೆ," ಎಂದು ಶೌಕತ್ ಹೇಳಿದ್ದಾರೆ.

ಸಾಮೂಹಿಕ ರದ್ದು ಪ್ರಕ್ರಿಯೆ

ಏಪ್ರಿಲ್ 22ರ ರಕ್ತಪಾತದ ನಂತರ, ಅನೇಕ ಹೋಟೆಲ್‌ಗಳು ಬಣಗುಟ್ಟಿದವು. ಬಹುತೇಕ ಹೋಟೆಲ್‌ಗಳ ಬುಕಿಂಗ್ ಕ್ಯಾನ್ಸಲ್ ಆಗಿವೆ. 7-8 ದಿನಗಳ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಯೋಜನೆ ಕಡಿಮೆ ಮಾಡಿದರು.

"ಜನರು ಸುರಕ್ಷಿತರಾಗಿರಬೇಕು ಮತ್ತು ಯಾವುದೇ ಸವಾಲುಗಳನ್ನು ಎದುರಿಸಬಾರದು ಎಂದು ನಾವು ಬಯಸುತ್ತೇವೆ. ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗರಿಗೆ ಉಚಿತ ವಸತಿ ನೀಡುತ್ತಿದ್ದೇವೆ. ರದ್ದುಗೊಳಿಸುವವರಿಗೆ ಸಂಪೂರ್ಣ ಮರುಪಾವತಿ ನೀಡುತ್ತಿದ್ದೇವೆ," ಹೋಟೆಲ್​ ಮಾಲೀಕ ಯಾವರ್ ಲೋನ್ ಹೇಳಿದ್ದಾರೆ. 

Similar News