ಮಾ.22-ಡಿಎಂಕೆ ನಾಯಕ ಕೆ. ಪೊನ್ಮುಡಿ ಅವರನ್ನು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಲು ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಒಪ್ಪಿಗೆ ನೀಡಿದ್ದಾರೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಶುಕ್ರವಾರ (ಮಾರ್ಚ್ 22) ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ರಾಜ್ಯಪಾಲರು ಪೊನ್ಮುಡಿ ಅವರನ್ನು ಮಧ್ಯಾಹ್ನ 3:30ಕ್ಕೆ ಆಹ್ವಾನಿಸಿದ್ದಾರೆ ಎಂದು ಮು.ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವೆಂಕಟರಮಣಿ ತಿಳಿಸಿದರು. ʻರಾಜ್ಯಪಾಲರಿಗೆ ನ್ಯಾಯಾಲಯವನ್ನು ಕಡೆಗಣಿಸುವ ಯಾವುದೇ ಉದ್ದೇಶವಿಲ್ಲʼ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠಕ್ಕೆ ಎಜಿ ತಿಳಿಸಿದರು.
ಸುಪ್ರೀಂ ಕಪಾಳಮೋಕ್ಷ: ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದರೂ ರಾಜ್ಯ ಸಂಪುಟದಲ್ಲಿ ಪೊನ್ಮುಡಿ ಅವರನ್ನು ಸಚಿವರನ್ನಾಗಿ ಮಾಡಲು ರಾಜ್ಯಪಾಲ ರವಿ ನಿರಾಕರಿಸಿದ ಬಗ್ಗೆ ಗುರುವಾರ ಎಸ್‌ಸಿ ʻಗಂಭೀರ ಕಳವಳʼ ವ್ಯಕ್ತಪಡಿಸಿತ್ತು. 24 ಗಂಟೆಯೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಚಿವ ಸಂಪುಟಕ್ಕೆ ಪೊನ್ಮುಡಿ ಅವರನ್ನು ಸೇರ್ಪಡೆಗೊಳಿಸುವಂತೆ ಮತ್ತು ಹಿಂದುಳಿದ ವರ್ಗಗಳ ಸಚಿವ ಆರ್.ಎಸ್.ರಾಜಕಣ್ಣಪ್ಪನ್ನ ಅವರು ಹೊಂದಿರುವ ತಾಂತ್ರಿಕ ಶಿಕ್ಷಣ, ಎಲೆಕ್ಟ್ರಾನಿಕ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಉನ್ನತ ಶಿಕ್ಷಣವನ್ನು ಅವರಿಗೆ ನೀಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ರಾಜ್ಯಪಾಲರ ನಿರಾಕರಣೆ: ಸಿಎಂ ಶಿಫಾರಸಿನ ಹೊರತಾಗಿಯೂ ರಾಜ್ಯಪಾಲರು ಪೊನ್ಮುಡಿ ಅವರ ಮರುಸೇರ್ಪಡೆಗೆ ನಿರಾಕರಿಸಿದರು. ತ್ರಿಸದಸ್ಯ ಪೀಠ, ʻಪೊನ್ಮುಡಿ ಅವರ ಮರುಸೇರ್ಪಡೆ ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ ಎಂದು ರಾಜ್ಯಪಾಲರು ಹೇಗೆ ಹೇಳುತ್ತಾರೆ?ʼ ಎಂದು ಆಶ್ಚರ್ಯ ವ್ಯಕ್ತಪಡಿಸಿತು.