ಚೆನ್ನೈ, ಜೂ.26- ಜಾತಿ ಆಧಾರಿತ ಜನಗಣತಿಯನ್ನು ಶೀಘ್ರವೇ ಕೈಗೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಬುಧವಾರ ಅಂಗೀಕರಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇಂದ್ರ ಸರ್ಕಾರವು ಈ ಬಾರಿ ಜನಗಣತಿಯೊಂದಿಗೆ, ಜಾತಿ ಆಧಾರಿತ ಜನಗಣತಿಯನ್ನು ತಕ್ಷಣ ಆರಂಭಿಸಬೇಕು ಎಂದು ನಿರ್ಣಯ ಮಂಡಿಸಿದರು.
ʻಭಾರತದ ಪ್ರತಿಯೊಬ್ಬ ನಾಗರಿಕರಿಗೂ ಶಿಕ್ಷಣ, ಆರ್ಥಿಕತೆ ಮತ್ತು ಉದ್ಯೋಗದಲ್ಲಿ ಸಮಾನ ಹಕ್ಕು ಮತ್ತು ಸಮಾನ ಅವಕಾಶ ಖಚಿತಪಡಿಸಿ ಕೊಳ್ಳುವ ನೀತಿಗಳನ್ನು ರೂಪಿಸಲು ಜಾತಿ ಆಧಾರಿತ ಜನಗಣತಿ ಅತ್ಯಗತ್ಯ ಎಂದು ಈ ಸದನ ಪರಿಗಣಿಸಿದೆ,ʼ ಎಂದು ನಿರ್ಣಯ ಹೇಳಿದೆ.
ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ವಿಧಾನಸಭೆಯಿಂದ ಅಮಾನತುಗೊಂಡಿರುವ ಪ್ರಧಾನ ಪ್ರತಿಪಕ್ಷ ಎಐಎಡಿಎಂಕೆ ಸದಸ್ಯರ ಅನುಪಸ್ಥಿತಿಯಲ್ಲಿ ಮಂಡನೆಯಾದ ನಿರ್ಣಯವನ್ನು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಶಾಸಕರು ಬೆಂಬಲಿಸಿದರು.
ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಎಂ.ಅಪ್ಪಾವು ತಿಳಿಸಿದರು.