Tirupati Laddu Controversy| ತಿರುಪತಿ ಲಡ್ಡುಗಳಲ್ಲಿ ದನದ ಕೊಬ್ಬು,ಮೀನಿನ ಎಣ್ಣೆ: ಗುಜರಾತ್ ಖಾಸಗಿ ಪ್ರಯೋಗಾಲಯದ ವರದಿ

ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಮೀನಿನ ಎಣ್ಣೆ, ದನ ಮತ್ತು ಹಂದಿಯ ಕೊಬ್ಬು ಇದೆ ಎಂದು ಆನಂದ್‌ನಲ್ಲಿರುವ ಖಾಸಗಿ ಪ್ರಯೋಗಾಲಯದ ವರದಿ ಹೇಳಿದೆ.;

Update: 2024-09-20 06:07 GMT

ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಖಾಸಗಿ ಪ್ರಯೋಗಾಲಯದ ವರದಿ ದೃಢಪಡಿಸಿದೆ.

ಹಿಂದಿನ ವೈಎಸ್‌ಆರ್ ಸರ್ಕಾರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದರು . ಗುಜರಾತ್‌ನ ಆನಂದ್‌ನಲ್ಲಿರುವ ಪಶು ಆಹಾರ ಮತ್ತು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ(ಎನ್ಡಿ‌ಡಿಬಿ ಕಾಲ್ಫ್ NDDB CALF) ವರದಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ, ಗೋಮಾಂಸದ ಕೊಬ್ಬು ಮತ್ತು ಹಂದಿ ಕೊಬ್ಬು ಸೇರಿದಂತೆ ವಿದೇಶಿ ಕೊಬ್ಬು ಪದಾರ್ಥಗಳು ಇವೆ ಎಂದು ಹೇಳಿದೆ.

ತಿರುಪತಿ ಲಡ್ಡು ಪ್ರಸಾದವನ್ನು ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುತ್ತದೆ. ದೇವಾಲಯವನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ನಿರ್ವಹಿಸುತ್ತದೆ.

ಬುಧವಾರ (ಸೆಪ್ಟೆಂಬರ್ 18) ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ನಾಯ್ಡು, ದೇವಾಲಯದ ಲಡ್ಡುಗಳನ್ನು ತಯಾರಿಸಲು ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳಿದ್ದರು. ಈಗ ಶುದ್ಧ ತುಪ್ಪವನ್ನು ಬಳಸಲಾಗುತ್ತಿದೆ ಮತ್ತು ದೇವಸ್ಥಾನವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ ಮತ್ತು ಗುಣಮಟ್ಟವನ್ನು ಸುಧಾರಿಸಲಾಗಿದೆ ಎಂದು ಹೇಳಿದ್ದರು.

ದುರುದ್ದೇಶಪೂರಿತ: ವೈಎಸ್‌ಆರ್‌ ಸಿಪಿ

ಆರೋಪಕ್ಕೆ ಪ್ರತಿಕ್ರಿಯಿಸಿದ ವೈಎಸ್‌ಆರ್‌ಸಿಪಿ, ನಾಯ್ಡು ಅವರ ಆರೋಪ ʻದುರುದ್ದೇಶಪೂರಿತʼ. ಟಿಡಿಪಿ ವರಿಷ್ಠರು ʻರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕಾದರೂ ಇಳಿಯುತ್ತಾರೆʼ ಎಂದು ಹೇಳಿದ್ದರು. 

ವೈಎಸ್‌ಆರ್‌ಸಿಪಿ ನಾಯಕ ಮತ್ತು ರಾಜ್ಯಸಭೆ ಸದಸ್ಯ ಸುಬ್ಬಾ ರೆಡ್ಡಿ ಅವರು ʼಸಿಎಂ ತಮ್ಮ ಹೇಳಿಕೆಯಿದ ಪವಿತ್ರ ತಿರುಮಲದ ಪಾವಿತ್ರ್ಯ ಮತ್ತು ಕೋಟ್ಯಂತರ ಹಿಂದುಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ,ʼ ಎಂದು ಆರೋಪಿಸಿದ್ದಾರೆ.

ʻತಿರುಮಲ ಪ್ರಸಾದದ ಬಗ್ಗೆ ಅವರ ಹೇಳಿಕೆಗಳು ಅತ್ಯಂತ ದುರುದ್ದೇಶಪೂರಿತ. ಯಾವುದೇ ವ್ಯಕ್ತಿ ಇಂತಹ ಮಾತು ಆಡುವುದಿಲ್ಲ ಅಥವಾ ಇಂತಹ ಆರೋಪ ಮಾಡುವುದಿಲ್ಲʼ ಎಂದು ಸುಬ್ಬಾ ರೆಡ್ಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪವಿತ್ರ ದೇವಾಲಯ: ಈ ಹಿಂದೆ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಕೂಡ ಈ ವಿಚಾರವಾಗಿ ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದರು.

ʻತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯವು ನಮ್ಮ ಅತ್ಯಂತ ಪವಿತ್ರ ದೇವಾಲಯವಾಗಿದೆ. ವೈ.ಎಸ್. ಜಗನ್ ಮೋಹನ್ ರೆಡ್ಡಿ ಆಡಳಿತವು ತಿರುಪತಿ ಪ್ರಸಾದದಲ್ಲಿ ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ತಿಳಿದು ನನಗೆ ಆಘಾತವಾಗಿದೆ,ʼ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 





Tags:    

Similar News