ಬಾರಾಮುಲ್ಲಾ: ಮೂವರು ಭಯೋತ್ಪಾದಕರ ಹತ್ಯೆ

Update: 2024-09-14 06:15 GMT

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಶನಿವಾರ ಬೆಳಗ್ಗೆ ಗುಂಡಿಕ್ಕಿ ಹತ್ಯೆ ಮಾಡಿವೆ.

ಭಯೋತ್ಪಾದಕರ ಉಪಸ್ಥಿತಿಗೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿ ಆಧಾರದ ಮೇಲೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದರು. ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ತಾಪರ್ ಕ್ರೀರಿಯಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಯಿತು. ಭಯೋತ್ಪಾದಕರು ಗುಂಡು ಹಾರಿಸಿದ ನಂತರ, ಸೈನಿಕರು ಪ್ರತಿದಾಳಿ ನಡೆಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ರಾತ್ರಿ ವೇಳೆ ನಾಕಾಬಂದಿ ಹಾಕಲಾಯಿತು. ಶನಿವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಅವರ ಗುರುತು ಮತ್ತು ಯಾವ ಗುಂಪಿಗೆ ಸೇರಿದವರು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. 

ಕಥುವಾದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ, ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಘಟಕದ ಪಡೆಗಳು ಶುಕ್ರವಾರ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ. 

ಇಬ್ಬರು ಸೈನಿಕರು ಸಾವು: ಇದಕ್ಕೂ ಮೊದಲು, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಶುಕ್ರವಾರ ನಡೆದ ಚಕಮಕಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಇಬ್ಬರು ಸೇನೆ ಸಿಬ್ಬಂದಿ ಹತರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. 

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಿಂದ ಕಿಶ್ತ್ವಾರ್ ಅನ್ನು ಸಂಪರ್ಕಿಸುವ ಮಾರ್ಗದಲ್ಲಿರುವ ನೈದ್‌ಗಾಮ್ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ಭದ್ರತಾ ತಂಡ ಕಾರ್ಯಾಚರಣೆ ಪ್ರಾರಂಭಿಸಿದಾಗ, ಗುಂಡಿನ ಚಕಮಕಿ ನಡೆಯಿತು. 

ಪ್ರಧಾನಿ ಭೇಟಿ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣೆ ಸಭೆಗೆ ಮುನ್ನ ಈ ಎನ್‌ಕೌಂಟರ್‌ಗಳು ನಡೆದಿವೆ. ಸಭೆಯನ್ನು ಶಾಂತಿಯುತ ಮತ್ತು ಸುಗಮವಾಗಿ ನಡೆಸಲು ದೋಡಾ ಮತ್ತು ಕಿಶ್ತ್ವಾರ್ ಅವಳಿ ಜಿಲ್ಲೆಗಳಾದ್ಯಂತ ಬಹು ಹಂತದ ಭದ್ರತೆಯನ್ನು ನಿಯೋಜಿಸಲಾಗಿದೆ. ಕಳೆದ 42 ವರ್ಷಗಳಲ್ಲಿ ಪ್ರಧಾನಿಯೊಬ್ಬರು ದೋಡಾಗೆ ಇದೇ ಮೊದಲು ಬಾರಿ ಭೇಟಿ ನೀಡುತ್ತಿದ್ದಾರೆ. 

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಹಾಗೂ ಮತಗಳ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ.

Tags:    

Similar News