Maharashtra Poll Results | ಇದು ಜನರ ಆದೇಶವಲ್ಲ, ಇವಿಎಂ ಮೇಲೆ ಗಂಭೀರ ಆರೋಪ ಮಾಡಿದ ಉದ್ಧವ್ ಠಾಕ್ರೆ
ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಮೈತ್ರಿಕೂಟವು ಸೋಲಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮೋಸದಾಟ ಎಂದು ಆರೋಪ ಮಾಡಿದ್ದಾರೆ. ಫಲಿತಾಂಶಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ನಿರಾರಕಿಸಿದ್ದಾರೆ. ಫಲಿತಾಂಶವು ಮತದಾರರಲ್ಲಿನ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ. ಇದು ಮೋಸದಾಟ ಎಂದು ಹೇಳುವ ಮೂಲಕ ಇವಿಎಂ ಯಂತ್ರಗಳ ಮೇಲೆ ಮತ್ತೆ ಗುಮಾನಿ ವ್ಯಕ್ತಪಡಿಸಿದ್ದಾರೆ.
"ಇದು ಮಹಾರಾಷ್ಟ್ರ ಮತದಾರರ ಆದೇಶವಲ್ಲ" ಎಂದು ಠಾಕ್ರೆ ಹಿನ್ನಡೆ ಉಂಟಾದ ತಕ್ಷಣ ಹೇಳಿದ್ದಾರೆ. ಚುನಾವಣಾ ಫಲಿತಾಂಶಗಳ ಪ್ರಕಾರ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಠಾಕ್ರೆ ಅವರ ಸೇನೆ, ಕಾಂಗ್ರೆಸ್ ಮತ್ತು ಶರದ್ ಪವಾರ್ ಎನ್‌ಸಿಪಿಯ ಮಹಾ ವಿಕಾಸ್ ಅಘಾಡಿಯನ್ನು ಜೋರಾಗಿ ಹಿಮ್ಮೆಟ್ಟಿಸಿದೆ.
“ಇಷ್ಟೊಂದು ಕಡಿಮೆ ಗೆಲುವುಗಳನ್ನು ಪಡೆಯುವುದು ಅಸಾಧ್ಯ. ಈ ಫಲಿತಾಂಶಗಳನ್ನು ನಾವು ಸ್ವೀಕರಿಸುವುದಿಲ್ಲ, ”ಎಂದು ಉದ್ಧವ್ ಹೇಳಿಕೆ ನೀಡಿದ್ದಾರೆ.
ಸಂಜಯ್ ರಾವತ್ ಆರೋಪ
ಉದ್ಧವ್ ಠಾಕ್ರೆಯ ಸಹೋದ್ಯೋಗಿ ಸಂಜಯ್ ರಾವತ್ ಕೂಡ "ಫಲಿತಾಂಶಗಳಲ್ಲಿ ಏನೋ ಮೋಸವಿದೆ ಎಂದು ಹೇಳಿಕೆ ನೀಡಿದ್ದಾರೆ.
" (ಮುಖ್ಯಮಂತ್ರಿ ಏಕನಾಥ್ ಬಣದ ಎಲ್ಲರೂ ಹೇಗೆ ಗೆಲ್ಲುತ್ತಾರೆ ಮತ್ತು ಅಜಿತ್ ಪವಾರ್ ಬಣದವರು ಇಷ್ಟೊಂದು ಸ್ಥಾನಗಳನ್ನು ಹೇಗೆ ಪಡೆಯಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
“ನಾವು ಇದನ್ನು ಜನರ ಆದೇಶವೆಂದು ಒಪ್ಪಿಕೊಳ್ಳುವುದಿಲ್ಲ. ಚುನಾವಣಾ ಫಲಿತಾಂಶಗಳಲ್ಲಿ ಯಾರದ್ದೂ ಕೈವಾಡ ಇದೆ,ʼʼ ಎಂದು ಅವರು ಆರೋಪಿಸಿದ್ದಾರೆ