ಜಮ್ಮು- ಕಾಶ್ಮೀರದಲ್ಲಿ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಅಪಹರಿಸಿ ಕೊಂದ ಉಗ್ರರು

ಉಗ್ರರ ಕೃತ್ಯಕ್ಕೆ ಎಲ್ಲ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ. ಉಗ್ರರನ್ನು ಪತ್ತೆ ಮಾಡಿ ನಿರ್ಮೂಲನೆ ಮಾಡುವುದಕ್ಕಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ.;

Update: 2024-11-08 07:21 GMT
ಜಮ್ಮು ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿಯಿಂದ ಪರಿಶೀಲನೆ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯ ಗ್ರಾಮಗಳಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಭಯೋತ್ಪಾದಕರು ಗುರುವಾರ ಗಲ್ಲಿಗೇರಿಸಿ ಕೊಂದಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಬಲಿಪಶುಗಳ ಮೃತದೇಹ ಇನ್ನೂ ಸಿಕ್ಕಿಲ್ಲ. ಆದರೆ, ಹತ್ಯೆಯಾದವರ ಮೊಬೈಲ್‌ ಮೂಲಕ ಉಗ್ರರು ಅವರ ಕಟುಂಬದ ಸದಸ್ಯರಿಗೆ ಚಿತ್ರಗಳನ್ನು ಕಳುಹಿಸಿ ಕ್ರೌರ್ಯ ಮೆರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈ ಭೀಕರ ಹತ್ಯೆ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಉಗ್ರರನ್ನು ಪತ್ತೆ ಮಾಡಿ ನಿರ್ಮೂಲನೆ ಮಾಡುವುದಕ್ಕಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆಯು ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ.

ಓಹ್ಲಿ-ಕುಂಟ್ವಾರಾ ನಿವಾಸಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಉಗ್ರರಿಂದ ಹತರಾದವರು. ಅವರಿಬ್ಬರು ಬೆಳಗ್ಗೆ ಅಧ್ವಾರಿ ಪ್ರದೇಶದ ಮುಂಜ್ಲಾ ಧಾರ್ ಅರಣ್ಯದಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಆದರೆ ಅವರು ವಾಪಸ್‌ ಬಂದಿರಲಿಲ್ಲ. = ಭಯೋತ್ಪಾದಕರು ಅವರನ್ನು ಅಪಹರಿಸಿ ಗಲ್ಲಿಗೇರಿಸಿ ಕೊಲೆ ಮಾಡಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಭಯಭೀತಿ ಸ್ಥಿತಿ ಉಂಟಾಗಿದೆ.

"ನನ್ನ ಸಹೋದರ ಮತ್ತು ಆತನ ಜತೆಗಿದ್ದ ಅಹ್ಮದ್‌ನನ್ನು ಭಯೋತ್ಪಾದಕರು ಅಪಹರಿಸಿ ಕೊಂದಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅವರು ಗ್ರಾಮ ರಕ್ಷಣಾ ಗಾರ್ಡ್ (ವಿಡಿಜಿ) ಆಗಿದ್ದರು. ಎಂದಿನಂತೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು" ಎಂದು ಕುಮಾರ್ ಸಹೋದರ ಪೃಥ್ವಿ ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕರಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗಲ್ಲಿಗೇರಿಸಿದವರ ಶವಗಳನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ತಂದೆ ಅಮರ್ ಚಂದ್ ಒಂದು ವಾರದ ಹಿಂದೆ ನಿಧನರಾಗಿದ್ದರು. ಇದೀಗ ಸಹೋದರನ ಹತ್ಯೆಯ ವರದಿಗಳು ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದೆ ಎಂದು ಹೇಳುತ್ತಾ ಪೃಥ್ವಿ ಕಣ್ಣೀರು ಹಾಕಿದ್ದಾರೆ.

ಭಯೋತ್ಪಾದಕರು ಅಮಾಯಕರನ್ನು ನೇಣಿಗೇರಿಸುವ ಚಿತ್ರಗಳನ್ನು ಬಲಿಪಶುಗಳ ಫೋನ್‌ಗಳ ಮೂಲಕ ಹಂಚಿಕೊಂಡಿದ್ದಾರೆ. ಹೀಗಾಗಿ ಅಪಹರಣಕ್ಕೆ ಒಳಗಾದವರು ಮೃತಪಟ್ಟಿರುವ ಸಂಗತಿ ಗೊತ್ತಾಗಿದೆ ಎಂದು ಹೆಸರು ಹೇಳಲು ಬಯಸದ ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ ಶಾಖೆಯಾದ ಕಾಶ್ಮೀರ ಟೈಗರ್ಸ್ ಗ್ರಾಮ ವೀಕ್ಷಕರನ್ನು ಕೊಂದಿದೆ ಎಂದು ಹೇಳಿಕೊಂಡಿದೆ. ಬಲಿಪಶುಗಳ ದೇಹಗಳ ಚಿತ್ರಗಳನ್ನು ಸಹ ಅದು ಹಂಚಿಕೊಂಡಿದೆ.

ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು ವಿಡಿಜಿ ಸದಸ್ಯರ ಮೇಲಿನ ಘೋರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ನಾಶಪಡಿಸುವ ಮತ್ತು ಅನಾಗರಿಕ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸರ್ಕಾರದ ಸಂಕಲ್ಪವನ್ನು ಹೇಳಿಕೊಂಡಿದ್ದಾರೆ.

ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, "ವಿಡಿಜಿ ಸದಸ್ಯರ ಮೇಲಿನ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇವೆ ಎಂದು ಹೇಳಿದರು. "ಈ ಹೇಡಿತನದ ದಾಳಿಯಲ್ಲಿ ಹುತಾತ್ಮರಾದ ಧೈರ್ಯಶಾಲಿಗಳ ಪುತ್ರರ ಕುಟುಂಬಗಳಿಗೆ ನನ್ನ ಸಂತಾಪ ತಿಳಿಸುತ್ತೇನೆ. ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ನಾಶಪಡಿಸಲು ಮತ್ತು ಈ ಅನಾಗರಿಕ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಾವು ದೃಢವಾಗಿ ನಿರ್ಧರಿಸಿದ್ದೇವೆ" ಎಂದು ಸಿನ್ಹಾ ಹೇಳಿದ್ದಾರೆ.

ಮುಖ್ಯಮಂತ್ರಿ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕೂಡ ಹತ್ಯೆಯನ್ನು ಖಂಡಿಸಿದ್ದಾರೆ.

ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಈ ಭೀಕರ ಹತ್ಯೆಗಳನ್ನು ಖಂಡಿಸಿದ್ದಾರೆ ಮತ್ತು "ಇಂತಹ ಅನಾಗರಿಕ ಹಿಂಸಾಚಾರದ ಕೃತ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲೀನ ಶಾಂತಿಯನ್ನು ಸಾಧಿಸುವಲ್ಲಿ ಅಡಚಣೆಯಾಗಿ ಉಳಿದಿವೆ" ಎಂದು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಕವಿಂದರ್ ಗುಪ್ತಾ, ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರವೀಂದರ್ ಶರ್ಮಾ ಕೂಡ ಹತ್ಯೆಗಳನ್ನು ಖಂಡಿಸಿದ್ದಾರೆ.

ಕಿಶ್ತ್ವಾರ್ ಮತ್ತು ರಾಜೌರಿ, ಪೂಂಚ್, ರಿಯಾಸಿ, ಉಧಂಪುರ, ದೋಡಾ ಮತ್ತು ಕಥುವಾ ಸೇರಿದಂತೆ ಜಮ್ಮು ಪ್ರದೇಶದ ಹಲವಾರು ಜಿಲ್ಲೆಗಳು ಈ ವರ್ಷ ಹೆಚ್ಚಿದ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿವೆ. ಶಾಂತಿಯುತ ಪ್ರದೇಶದಲ್ಲಿ ಉಗ್ರಗಾಮಿ ಕೃತ್ಯಗಳನ್ನು ಪುನರುಜ್ಜೀವನಗೊಳಿಸಲು ಗಡಿಯುದ್ದಕ್ಕೂ ಭಯೋತ್ಪಾದಕ ಹ್ಯಾಂಡ್ಲರ್‌ಗಳು ಸಂಚು ನಡೆಸುತ್ತಿದ್ದಾರೆ ಎಂದು ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ. 

Tags:    

Similar News