Bomb Threat| ವಿಮಾನಗಳಿಗೆ 354 ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ ಮಹಾರಾಷ್ಟ್ರದ ಲೇಖಕನ ಬಂಧನ

ಜಗದೀಶ್ ಉಕೆ ಎಂಬ ಲೇಖಕ ಭಯೋತ್ಪಾದನೆ ಕುರಿತ ತಮ್ಮ ಪುಸ್ತಕ 'ಅಟಾಂಕ್ವಾಡ್-ಏಕ್ ತುಫಾನಿ ರಕ್ಷಾಶ್' ಜನರ ಗಮನ ಸೆಳೆಯುವಂತೆ ಮಾಡುವುದಕ್ಕಾಗಿ ಬೆದರಿಕೆ ತಂತ್ರ ಬಳಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

Update: 2024-11-03 12:12 GMT
ವಿಮಾನ ನಿಲ್ದಾಣದ ಸಾಂದರ್ಭಿಕ ಚಿತ್ರ.

ಸರ್ಕಾರಿ ಕಚೇರಿಗಳು, ವಿಮಾನಗಳು ಮತ್ತು ರೈಲ್ವೆ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು 354 ಹುಸಿ ಬಾಂಬ್‌ ದಾಳಿ ಇಮೇಲ್‌ ಕಳುಹಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಮಾವೋವಾದಿ ಪೀಡಿತ ಗೊಂಡಿಯಾ ಜಿಲ್ಲೆಯ ನಿವಾಸಿ 35 ವರ್ಷದ ಜಗದೀಶ್ ಉಕೆ ಎಂಬಾತನನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.

ಮಹತ್ವಾಕಾಂಕ್ಷೆಯ ಲೇಖಕ ಉಕೆ ಭಯೋತ್ಪಾದನೆಯ ಕುರಿತಾದ  ʼಅಟಾಂಕ್ವಾಡ್-ಏಕ್ ತುಫಾನಿ ರಕ್ಷಾಶ್ (ಭಯೋತ್ಪಾದನೆ: ಎ ಡೆಮೋನಿಕ್ ಸ್ಟಾರ್ಮ್)  ಎಂಬ ಪುಸ್ತಕ ಬರೆದಿದ್ದಾರೆ. ಆ ಕೃತಿಯ ಬಗ್ಗೆಎಲ್ಲರ ಗಮನ ಸೆಳೆಯಲು ಬೆದರಿಕೆಗಳನ್ನು ಕಳುಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರಿಗೆ ತನ್ನ ಸುಳಿವು ಸಿಕ್ಕಿದೆ ಎಂದು ಗೊತ್ತಾದ ತಕ್ಷಣ ಆತ ಪರಾರಿಯಾಗಿದ್ದ. ಆದರೆ, ನಾಗ್ಪುರ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ. 

ಪುಸ್ತಕ ಬಿಡುಗಡೆಗೆ ಸರ್ಕಾರದ ಅನುಮೋದನೆ ಕೋರಿಕೆ

ನಾಗ್ಪುರ ಡಿಸಿಪಿ ಲೋಹಿತ್ ಮಾತಾನಿ ಮಾತನಾಡಿ, ಜಗದೀಶ್‌ ಉಕೆ ಆರಂಭದಲ್ಲಿ ತಮ್ಮ ಪುಸ್ತಕ ಬಿಡುಗಡೆಗೆ ಸರ್ಕಾರದ ಅನುಮೋದನೆ ಕೋರಿದ್ದ. ಪ್ರಧಾನಿ ಕಚೇರಿ (ಪಿಎಂಒ) ಮತ್ತು ಹಿರಿಯ ಅಧಿಕಾರಿಗಳಿಗೆ ಪದೇ ಪದೇ ಇಮೇಲ್ ಮಾಡಿದ್ದ. ಹಲವಾರು ಪ್ರಯತ್ನಗಳ ನಂತರ  ಭಾರತದಾದ್ಯಂತ ಬಾಂಬ್ ಬೆದರಿಕೆಗಳು ಮತ್ತು ಸ್ಲೀಪರ್ ಸೆಲ್ ಚಟುವಟಿಕೆ ಎಂಬ ಹೆಸರಿನಲ್ಲಿ ಇಮೇಲ್‌ಗಳನ್ನು ಕಳುಹಿಸಲು ಆರಂಭಿಸಿದ್ದ.

ಸಂಕೀರ್ಣವಾಗಿ ಕೋಡ್‌ಗಳು

ಜಗದೀಶ್‌ ಉಕೆ ಬೆದರಿಕೆ ಇಮೇಲ್‌ಗಳನ್ನು ಕೋಡಿಂಗ್‌ ಭಾಷೆಯಲ್ಲಿ ಕಳುಹಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ನಿಗದಿತ ಕೋಡ್‌ಗಳನ್ನು ಬಳಸಿಕೊಂಡು ಮೇಲ್‌ಗಳನ್ನು ಕಳುಹಿಸಿದ್ದ. ʼಎʼ  ಎಂದರೆ ವಿಮಾನ, ʼಆರ್‌ʼ ಎಂದರೆ ರೈಲು ಎಂಬೆಲ್ಲ ರೀತಿಯಲ್ಲಿ ಮೇಲ್‌ಗಳನ್ನು ರವಾನಿಸುತ್ತಿದ್ದ.

ಒಂದು ಮೇಲ್‌ ಸಂದೇಶದಲ್ಲಿ, ಏರ್ ಇಂಡಿಯಾ ಮತ್ತು ಇಂಡಿಗೊ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನುಒಳಗೊಂಡ ವಿಮಾನಗಳ ಹೈಜಾಕ್ ಬಗ್ಗೆ ಎಚ್ಚರಿಕೆಯನ್ನೂ ಕಳುಹಿಸಿದ್ದ. ಅದೇ ರೀತಿ ಅನೇಕ ವಿಮಾನ ಸಂಸ್ಥೆಗಳಿಗೆ ಬೆದರಿಕೆ ಒಡ್ಡಿದ್ದ.

'ಸೀಕ್ರೆಟ್ ಟೆರರ್ ಕೋಡ್'

ಪ್ರಚೋದನಾಕಾರಿ ಇಮೇಲ್‌ಗಳನ್ನು ಕಳುಹಿಸಿದ್ದಕ್ಕಾಗಿ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದ ಜಗದೀಶ್‌ ಇತ್ತೀಚೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೂ ಬೆದರಿಕೆ ಸಂದೇಶ ಕಳುಹಿಸಿದ್ದ ಎಂದು ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಹೇಳಿದ್ದಾರೆ. 24 ಗಂಟೆಗಳಲ್ಲಿ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸಿದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಬಂಧನಕ್ಕೆ ಒಳಗಾಗಿರುವ ಜಗದೀಶನನ್ನು ನಾಗ್ಪುರ ಪೊಲೀಸರು, ದೆಹಲಿ ಪೊಲೀಸರ ವಿಶೇಷ ಸೆಲ್‌ನೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ. 

ಭಯೋತ್ಪಾದಕ ಸಂಘಟನೆ ಜತೆ ನಂಟು ಇಲ್ಲ

ಪ್ರಸ್ತುತ ನಾಗ್ಪುರದಲ್ಲಿ ಬಂಧನದಲ್ಲಿರುವ ಜಗದೀಶ್‌ ನಿರಂತರ ವಿಚಾರಣೆ ಎದುರಿಸುತ್ತಿದ್ದಾನೆ. ಆದರೂ ಅಧಿಕಾರಿಗಳು ಭಯೋತ್ಪಾದಕ ಸಂಘಟನೆಗಳೊಂದಿಗೆ ಆತನಿಗೆ ಯಾವುದೇ ಬಲವಾದ ಸಂಪರ್ಕ ಇರುವುದನ್ನು ಪತ್ತೆ ಹಚ್ಚಿಲ್ಲ. 

Tags:    

Similar News