ಪೊಲೀಸ್ ಮಾಹಿತಿದಾರರು ಎಂಬ ಅನುಮಾನದ ಮೇಲೆ ಮಾವೋವಾದಿಗಳು ಇಬ್ಬರನ್ನು ಹತ್ಯೆಗೈದಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪೆನುಗೋಲು ಗ್ರಾಮದ ಕಾರ್ಯದರ್ಶಿ ಓಕಾ ರಮೇಶ್ ಅವರ ಮೇಲೆ ಐವರು ಮಾವೋವಾದಿಗಳ ಗುಂಪು ಚಾಕುವಿನಿಂದ ಹಲ್ಲೆ ನಡೆಸಿದೆ. ಅವರ ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆಕೆಯನ್ನು ತಳ್ಳಿ ಹೋಗುವ ನಡೆಸಿದ್ದರು.
ರಮೇಶ್ ಅವರನ್ನು ಎಟುರುನಗರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮುನ್ನ ಮಾವೋವಾದಿಗಳು ಓಕಾ ಅರ್ಜುನ್ ಎಂಬ ಮತ್ತೊಬ್ಬ ಗ್ರಾಮಸ್ಥನನ್ನು ಅವರ ಮನೆಯಲ್ಲಿಯೇ ಹತ್ಯೆ ಮಾಡಿದ್ದರು.
ಮಾವೊವಾದಿಗಳು ಸಹಿ ಮಾಡಿರುವ ಪತ್ರದಲ್ಲಿ ಇಬ್ಬರೂ ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಮುಲುಗು ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.