ತೆಲಂಗಾಣ: ಬಿಆರ್‌ಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಶಾಸಕ

ಬಿಆರ್‌ಎಸ್‌ಗೆ ಮತ್ತೊಂದು ಹಿನ್ನಡೆಯಾಗಿದ್ದು,ಚೆವೆಲ್ಲಾ ವಿಧಾನಸಭೆ ಕ್ಷೇತ್ರದ ಶಾಸಕ ಕಾಳೆ ಯಾದಯ್ಯ ಅವರು ದೆಹಲಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು.

Update: 2024-06-28 12:35 GMT

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬಿಆರ್‌ಎಸ್ ಶಾಸಕರ ವಲಸೆ ಮುಂದುವರಿದಿದ್ದು, ಶಾಸಕ ಕಾಳೆ ಯಾದಯ್ಯ ಶುಕ್ರವಾರ (ಜೂನ್ 28) ಆಡಳಿತ ಪಕ್ಷಕ್ಕೆ ಸೇರಿದ್ದಾರೆ.

ಚೆವೆಲ್ಲಾ ವಿಧಾನಸಭೆ ಕ್ಷೇತ್ರದ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಶಾಸಕ ಕಾಳೆ ಯಾದಯ್ಯ ಅವರು ದೆಹಲಿಯಲ್ಲಿ ತೆಲಂಗಾಣ ಮುಖ್ಯ ಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಶಿಬಿರ ಬದಲಿಸಿದ್ದಾರೆ. ಅವರು 2014 ರಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ. ಬಿಆರ್‌ಎಸ್ ಶಾಸಕ ಡಾ. ಎಂ. ಸಂಜಯ್ ಕುಮಾರ್ ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಇನ್ನೊಂದು ಪಕ್ಷಾಂತರ ನಡೆದಿದೆ.

ಡಾ. ಸಂಜಯ್ ಅವರು ನವೆಂಬರ್ 2023 ರಲ್ಲಿ ನಡೆದ ಚುನಾವಣೆಯಲ್ಲಿ ನಿಜಾಮಾಬಾದ್ ಜಿಲ್ಲೆಯ ಜಗ್ತಿಯಾಲ್ ವಿಧಾನಸಭೆ ಕ್ಷೇತ್ರದಿಂದ ಸತತ ಎರಡನೇ ಅವಧಿಗೆ ಮರು ಆಯ್ಕೆಯಾದರು. ಇದಕ್ಕೂ ಮೊದಲು, ಬನ್ಸವಾಡ ಶಾಸಕ ಮತ್ತು ಮಾಜಿ ವಿಧಾನಸಭೆ ಸ್ಪೀಕರ್ ಪೋಚಾರಂ ಶ್ರೀನಿವಾಸ್ ರೆಡ್ಡಿ ಕೂಡ ಕಾಂಗ್ರೆಸ್ ಸೇರಿದರು. 

ಕಾಂಗ್ರೆಸ್ ಸೇರಿದ ಆರನೇ ಶಾಸಕ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಕ್ಷ ನಿಷ್ಠೆಯನ್ನು ಬದಲಿಸಿದ ಆರನೇ ಶಾಸಕ ಕಾಳೆ ಯಾದಯ್ಯ. 

ಬಿಆರ್‌ಎಸ್ ನಾಯಕ ಚಂದ್ರಶೇಖರ್ ರಾವ್ ಅವರು ಸಿದ್ದಿಪೇಟೆ ಜಿಲ್ಲೆಯ ಎರ್ರವೆಲ್ಲಿಯಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಬಿಆರ್‌ಎಸ್ ಶಾಸಕರನ್ನು ಭೇಟಿಯಾಗುತ್ತಿದ್ದು, ವಲಸೆಯನ್ನು ತಡೆಯುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುವ ಸಾಧ್ಯತೆ ಇದೆ. 

119 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಆರ್‌ಎಸ್ 39 ಸ್ಥಾನ ಗೆದ್ದಿದೆ. ಆದರೆ, ಇತ್ತೀಚೆಗೆ ನಡೆದ ಸಿಕಂದರಾಬಾದ್ ಕಂಟೋನ್ಮೆಂಟ್ ಉಪ ಚುನಾವಣೆಯಲ್ಲಿನ ಸೋಲಿನಿಂದ ಪಕ್ಷದ ಬಲ 33ಕ್ಕೆ ಇಳಿದಿದೆ. 

ಲೋಕಸಭೆ ಚುನಾವಣೆಯಲ್ಲಿ ಬಿಆರ್‌ಎಸ್ ಹೀನಾಯ ಸೋಲು ಅನುಭವಿಸಿದ ನಂತರ, ಶ್ರೀನಿವಾಸ್ ರೆಡ್ಡಿ ಅವರು ಪಕ್ಷವನ್ನು ಬದಲಿಸಿದ ಮೊದಲ ಶಾಸಕ.

Tags:    

Similar News