ತೆಲಂಗಾಣ: 6 ಮಾವೋವಾದಿಗಳ ಹತ್ಯೆ, ಇಬ್ಬರು ಕಮಾಂಡೋಗಳಿಗೆ ಗಾಯ

Update: 2024-09-05 08:42 GMT

ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊತಗುಡಂ ಜಿಲ್ಲೆಯಲ್ಲಿ ಉಗ್ರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ನಿಷೇಧಿತ ಸಿಪಿಐ (ಮಾವೋವಾದಿ) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದ ನಕ್ಸಲ್ ವಿರೋಧಿ ಪಡೆಯಾದ ಗ್ರೇಹೌಂಡ್ಸ್‌ ನ ಇಬ್ಬರು ಕಮಾಂಡೋಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಜಿಲ್ಲೆಯ ಕರಕಗುಡಂ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾವೋವಾದಿಗಳ ತಂಡ ನೆರೆಯ ಛತ್ತೀಸ್‌ಗಢ ದಿಂದ ತೆಲಂಗಾಣಕ್ಕೆ ಆಗಮಿಸಿದೆ ಎಂಬ ಮಾಹಿತಿ ಆಧರಿಸಿ, ವಿಶೇಷ ಪೊಲೀಸ್ ತಂಡಗಳು ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದವು ಎಂದು ಹೇಳಿದರು. 

ಹಿರಿಯ ಮಾವೋವಾದಿ, ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿದಂತೆ ಆರು ಮಾವೋವಾದಿಗಳ ಮೃತದೇಹಗಳನ್ನು ಸ್ಥಳದಿಂದ ವಶಪಡಿಸಿ ಕೊಳ್ಳಲಾಗಿದೆ. ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಿಂದ 2 ಎಕೆ 47, ಎಸ್‌ಎಲ್‌ಆರ್ ಸೇರಿದಂತೆ ಆರು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

Tags:    

Similar News