ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿಂದ ಶಂಕಿತ ಉಗ್ರ ಡಾ. ಉಮರ್ ನಬಿ ಮನೆ ಧ್ವಂಸ
ಕೆಂಪುಕೋಟೆ ಬಳಿ ಸ್ಫೋಟಗೊಂಡ ಐ20 ಕಾರಿನಲ್ಲಿ ಶಂಕಿತ ಉಗ್ರ ಡಾ. ಉಮರ್ ನಬಿ ಮೃತಪಟ್ಟಿದ್ದ. ದೇಹದ ವಿವಿಧ ಭಾಗಗಳ ಡಿಎನ್‌ಎಯನ್ನು ಆತನ ತಾಯಿಯ ಡಿಎನ್‌ಎ ಜೊತೆ ಪರೀಕ್ಷೆ ನಡೆಸಿದ ಬಳಿಕ ಮೃತ ವ್ಯಕ್ತಿ ಡಾ. ಉಮರ್ ನಬಿ ಎಂದು ದೃಢಪಟ್ಟಿತ್ತು.
ಶಂಕಿತ ಉಗ್ರ ಡಾ. ಉಮರ್ ನಬಿಯ ಮನೆಯನ್ನು ಧ್ವಂಸಗೊಳಿಸಿರುವ ಭದ್ರತಾ ಪಡೆಗಳು
ದೆಹಲಿಯಲ್ಲಿ ನವೆಂಬರ್ 10 ರಂದು ನಡೆದಿದ್ದ ಕಾರ್ ಬಾಂಬ್ ಎನ್ನಲಾದ ಶಂಕಿತ ಉಗ್ರ ಡಾ. ಉಮರ್ ನಬಿಯ ಮನೆಯನ್ನು ಶುಕ್ರವಾರ (ನ.14) ಮುಂಜಾವ ನೆಲಸಮ ಮಾಡಲಾಗಿದೆ.
ಕೆಂಪುಕೋಟೆ ಬಳಿ ಸ್ಫೋಟಗೊಂಡ ಐ20 ಕಾರಿನಲ್ಲಿ ಶಂಕಿತ ಉಗ್ರ ಡಾ. ಉಮರ್ ನಬಿ ಮೃತಪಟ್ಟಿದ್ದ. ದೇಹದ ವಿವಿಧ ಭಾಗಗಳ ಡಿಎನ್‌ಎಯನ್ನು ಆತನ ತಾಯಿಯ ಡಿಎನ್‌ಎ ಜೊತೆ ಪರೀಕ್ಷೆ ನಡೆಸಿದ ಬಳಿಕ ಮೃತ ವ್ಯಕ್ತಿ ಡಾ. ಉಮರ್ ನಬಿ ಎಂದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರುವ ಶಂಕಿತ ಉಗ್ರನ ಮನೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ (ನ.10) ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
26 ಲಕ್ಷ ರೂಪಾಯಿ ಸಂಗ್ರಹಿಸಿದ್ದ ಉಗ್ರರು
ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಕೆಂಪುಕೋಟೆ ಬಳಿಯ ಭೀಕರ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಬಂಧಿತ 'ವೈಟ್-ಕಾಲರ್ ಟೆರರ್ ಮಾಡ್ಯೂಲ್'ನ ವೈದ್ಯರು ಸ್ಫೋಟಕಗಳನ್ನು ತಯಾರಿಸಲು 26 ಲಕ್ಷ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು.
ಈ ಕುರಿತು ತನಿಖಾ ಅಧಿಕಾರಿಗಳು ಮಾಹಿತಿ ನೀಡಿದ್ದು, ಬಂಧಿತರಾಗಿರುವ ಡಾ. ಮುಝಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಾದರ್, ಡಾ. ಶಾಹೀನ್ ಸಯೀದ್ ಮತ್ತು ಡಾ. ಉಮರ್ ನಬಿ ಎಂಬ ನಾಲ್ವರು ವೈದ್ಯರು ಸೇರಿ ಈ ಹಣವನ್ನು ನಗದು ರೂಪದಲ್ಲಿ ಸಂಗ್ರಹಿಸಿದ್ದರು. ಈ ಹಣವನ್ನು ಸ್ಫೋಟದ ರೂವಾರಿ ಎನ್ನಲಾದ ಡಾ. ಉಮರ್‌ಗೆ ಕಾರ್ಯಾಚರಣೆಯ ಬಳಕೆಗಾಗಿ ಹಸ್ತಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಸಹಾಯಕ ಪ್ರಾಧ್ಯಾಪಕನಾಗಿದ್ದ ಶಂಕಿತ ಉಗ್ರ
ಸೋಮವಾರ ಸಂಜೆ ಕೆಂಪುಕೋಟೆಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟಗೊಂಡ ಹ್ಯುಂಡೈ ಐ20 ಕಾರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದ ಡಾ. ಉಮರ್ ನಬಿಯೇ ಚಲಾಯಿಸುತ್ತಿದ್ದ. ಈತ ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ. ಈ ಹಣ ಸಂಗ್ರಹವು ಒಂದು ದೊಡ್ಡ ಭಯೋತ್ಪಾದಕ ಪಿತೂರಿಯ ಭಾಗವಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.