ಬಿಹಾರದಲ್ಲಿ 65 ಲಕ್ಷ ಮತದಾರರಿಗೆ ಕೊಕ್​; ಕಾರಣ ಸಹಿತ ಪಟ್ಟಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಕಾರಣಗಳಾದ ಸಾವು, ವಲಸೆ, ಅಥವಾ ದ್ವಿ-ನೋಂದಣಿಯಂತಹ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ ಪಟ್ಟಿ ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿದೆ.;

Update: 2025-08-14 12:05 GMT

ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಕರಡು ಮತದಾರರ ಪಟ್ಟಿಯಿಂದ ಅಳಿಸಲಾದ ಅಂದಾಜು 65 ಲಕ್ಷ ಮತದಾರರ ಜಿಲ್ಲಾವಾರು ಪಟ್ಟಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ, ಆಗಸ್ಟ್ 14ರಂದು ಚುನಾವಣಾ ಆಯೋಗಕ್ಕೆ (EC) ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್​ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ನೀಡಿದ್ದು, ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಪಾಲಿಸುವಂತೆ ಸೂಚಿಸಿದೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಕಾರಣಗಳಾದ ಸಾವು, ವಲಸೆ, ಅಥವಾ ದ್ವಿ-ನೋಂದಣಿಯಂತಹ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ ಪಟ್ಟಿ ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಸಂಪೂರ್ಣ ಮಾಹಿತಿಯನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ವೆಬ್​ಸೈಟ್​ನಲ್ಲಿ ಪ್ರದರ್ಶಿಸಬೇಕು ಹಾಗೂ ಮತದಾರರು ತಮ್ಮ EPIC (ಮತದಾರರ ಗುರುತಿನ ಚೀಟಿ) ಸಂಖ್ಯೆಯನ್ನು ಬಳಸಿ ತಮ್ಮ ಹೆಸರಿನ ಸ್ಥಿತಿಗತಿಯನ್ನು ಹುಡುಕಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಸೂಚನೆ

ಅಳಿಸಿ ಹಾಕಿರುವ ಹೆಸರುಗಳ ಮಾಹಿತಿಯನ್ನು ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಈ ಪ್ರಕ್ರಿಯೆಯನ್ನು ಮುಂದಿನ ಮಂಗಳವಾರದೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿದೆ. ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಅರ್ಜಿ ಸಲ್ಲಿಸುವಾಗ, ಮತದಾರರು ತಮ್ಮ ಆಧಾರ್ ಕಾರ್ಡ್​ಗಳನ್ನು ಸಹ ಗುರುತಿನ ಪುರಾವೆಯಾಗಿ ನೀಡಬಹುದು ಎಂದು ಸಾರ್ವಜನಿಕ ಪ್ರಕಟಣೆಗಳಲ್ಲಿ ಸ್ಪಷ್ಟಪಡಿಸಬೇಕು ಎಂದು ಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ

ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಈ ಅಳಿಸುವಿಕೆಗಳು ನಡೆದಿವೆ. ಆಗಸ್ಟ್ 1 ರಂದು ಚುನಾವಣಾ ಆಯೋಗವು ನೀಡಿದ ಮಾಹಿತಿಯ ಪ್ರಕಾರ, 22.34 ಲಕ್ಷ ಮಂದಿ ಮರಣ, 36.28 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, ಮತ್ತು 7.01 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವುದು ಹೆಸರುಗಳನ್ನು ತೆಗೆದುಹಾಕಲು ಕಾರಣಗಳಾಗಿವೆ.

ಆರ್​ಜೆಡಿ , ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಂತಹ ಎನ್​​ಜಿಒಗಳು, ಈ ಪರಿಷ್ಕರಣಾ ಪ್ರಕ್ರಿಯೆಯು ಲಕ್ಷಾಂತರ ಮತದಾರರನ್ನು ಅನ್ಯಾಯವಾಗಿ ಮತದಾನದ ಹಕ್ಕಿನಿಂದ ವಂಚಿತಗೊಳಿಸಬಹುದು ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ತಾನು "ತೀವ್ರ ರಾಜಕೀಯ ಹಗೆತನದ ವಾತಾವರಣದಲ್ಲಿ" ಕಾರ್ಯನಿರ್ವಹಿಸುತ್ತಿದ್ದು, ತನ್ನ ಬಹುತೇಕ ನಿರ್ಧಾರಗಳನ್ನು ಪ್ರಶ್ನಿಸಲಾಗುತ್ತಿದೆ ಎಂದು ವಾದಿಸಿತ್ತು.

Tags:    

Similar News