ಸಂಸತ್ ಪ್ರವೇಶಿಸದಂತೆ ತಡೆದ ಸಿಐಎಸ್‌ಎಫ್ ಅಧಿಕಾರಿ: ಡಿಎಂಕೆ ಸಂಸದ ಆರೋಪ
ಸಂಸತ್ ಭದ್ರತಾ ಸೇವೆ (ಪಿಎಸ್‌ಎಸ್) ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾಗ ಜಾರಿಯಲ್ಲಿದ್ದ ಶಿಷ್ಟಾಚಾರಕ್ಕೆ ಈ ನಡವಳಿಕೆ ತದ್ವಿರುದ್ಧವಾಗಿದೆ ಎಂದು ಎಂ ಎಂ ಅಬ್ದುಲ್ಲಾ ಪತ್ರದಲ್ಲಿ ದೂರಿದ್ದಾರೆ.;
ಸಂಸತ್ತಿನ ಸಂಕೀರ್ಣಕ್ಕೆ ಪ್ರವೇಶಿಸದಂತೆ ತಡೆದು, ಅನಗತ್ಯ ವಿಚಾರಣೆಗೆ ಒಳಪಡಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿ ವಿರುದ್ಧ ಡಿಎಂಕೆಯ ರಾಜ್ಯಸಭೆ ಸದಸ್ಯ ಎಂ.ಎಂ. ಅಬ್ದುಲ್ಲಾ ಅವರು ಮಂಗಳವಾರ (ಜೂನ್ 18) ದೂರು ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ 2.40ರ ಸುಮಾರಿಗೆ ಸಿಐಎಸ್‌ಎಫ್ ಅಧಿಕಾರಿಗಳು ತಮ್ಮನ್ನು ಸಂಸತ್ತಿನೊಳಗೆ ಪ್ರವೇಶಿಸದಂತೆ ತಡೆದರು. ಎಲ್ಲಿಗೆ ಹೋಗುತ್ತಿದ್ದೀರಿ ಮತ್ತು ಭೇಟಿಯ ಉದ್ದೇಶವೇನು ಎಂದು ಪ್ರಶ್ನಿಸಿದರು ಎಂದು ಸಭಾಧ್ಯಕ್ಷ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಂಸತ್ ಭದ್ರತಾ ಸೇವೆ (ಪಿಎಸ್‌ಎಸ್) ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾಗ ಜಾರಿಯಲ್ಲಿದ್ದ ಶಿಷ್ಟಾಚಾರಕ್ಕೆ ಈ ನಡವಳಿಕೆ ತದ್ವಿರುದ್ಧವಾಗಿದೆ ಎಂದು ಅಬ್ದುಲ್ಲಾ ಹೇಳಿದರು.
ಅಭೂತಪೂರ್ವ ನಡವಳಿಕೆ: ಸಂಸತ್ತಿನಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂದು ಸಂಸದರನ್ನು ಕೇಳುವುದು ಅಭೂತಪೂರ್ವ ನಡವಳಿಕೆ ಎಂದು ಅಬ್ದುಲ್ಲಾ ಪತ್ರದಲ್ಲಿ ಹೇಳಿದ್ದಾರೆ.
ʻತಮಿಳುನಾಡಿನ ಜನರು ಮತ್ತು ಅವರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾನು, ಸಂಸತ್ತಿನಲ್ಲಿ ನನ್ನ ಉಪಸ್ಥಿತಿಯ ಉದ್ದೇಶವೇನು ಎಂಬ ಪ್ರಶ್ನೆಯಿಂದ ಆಶ್ಚರ್ಯಚಕಿತನಾದೆ. ಪಿಎಸ್‌ಎಸ್ ನಿರ್ವಹಣೆಯ ಹಿಂದಿನ ವ್ಯವಸ್ಥೆಯಲ್ಲಿ ಇಂತಹ ಉಪಚಾರವನ್ನು ಕಂಡುಕೇಳಿರಲಿಲ್ಲ,ʼ ಎಂದು ಬರೆದಿದ್ದಾರೆ.
ʻಸಂಸದರು, ರಾಜ್ಯಸಭೆ ಸದಸ್ಯರು ಸಂಸತ್ತಿಗೆ ಮುಕ್ತ ಪ್ರವೇಶ ಹೊಂದಿರಬೇಕು. ಭೇಟಿಯ ಉದ್ದೇಶ ಕೇಳಿದಲ್ಲಿ, ಸಭಾಧ್ಯಕ್ಷರಿಗೆ ಮಾತ್ರ ಉತ್ತರಿಸಬೇಕು. ಸಂಸದರು ಅಧಿಕೃತ ಅನುಮತಿಯಿಲ್ಲದೆ ಸಂಸತ್ತಿಗೆ ಪ್ರವೇಶಿಸಲು ಅರ್ಹರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಒಂದುವೇಳೆ ಯಾವುದೇ ಅನುಮತಿ ಪಡೆಯದೆ ಇದ್ದರೆ, ರಾಜ್ಯಸಭೆಯ ಉಸ್ತುವಾರಿ ವಹಿಸಿರುವ ಸಭಾಧ್ಯಕ್ಷರಿಗೆ ಮಾತ್ರ ಉತ್ತರದಾಯಿಯಾಗಿರುತ್ತೇನೆ,ʼ ಎಂದು ಬರೆದಿದ್ದಾರೆ.
ಟಿಎಂಸಿ ಸಂಸದ ಬೆಂಬಲ: ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭೆ ಸಂಸದ ಸಾಕೇತ್ ಗೋಖಲೆ ಅವರು ಈ ಸಂಬಂಧ ಸರ್ಕಾರದ ವಿರುದ್ಧ ಹರಿಹಾಯ್ದರು. ʻಇಂಡಿಯ ಒಕ್ಕೂಟದ ಸಂಸದರನ್ನು ತಡೆಯಲು ಸಿಐಎಸ್‌ಎಫ್ ಅನ್ನು ನಿಯೋಜಿಸಿದ್ದಾರೆಯೇ?,ʼ ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ. ʻಸದನದ ಸದಸ್ಯರಾಗಿ ಸಂಸತ್ತಿನಲ್ಲಿ ಇರುವುದು ನಮ್ಮ ಹಕ್ಕು. ನಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯಲು ಸಿಐ ಎಸ್ಎಫ್ ನೇಮಿಸಲಾಗಿದೆಯೇ?,ʼ ಎಂದು ಪ್ರಶ್ನಿಸಿದ್ದಾರೆ.
ʻಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಸದರನ್ನು ತಡೆಯಲು ಮತ್ತು ಪ್ರಶ್ನಿಸಲು ಸಂಸತ್ತು ಮೋದಿ ಅಥವಾ ಶಾ ಅವರ ವೈಯಕ್ತಿಕ ಆಸ್ತಿಯಲ್ಲ,ʼ ಎಂದು ಹೇಳಿದರು.
ಪಿಎಸ್‌ಎಸ್ ಬದಲಾವಣೆ: ಕಳೆದ ಡಿಸೆಂಬರ್‌ನಲ್ಲಿ ನಡೆದ ಭದ್ರತಾ ಉಲ್ಲಂಘನೆ ಪ್ರಕರಣದ ನಂತರ ಸಂಸತ್ ಸಂಕೀರ್ಣದ ಭದ್ರತಾ ಉಸ್ತುವಾರಿಯನ್ನು ಸಿಐಎಸ್‌ಎಫ್ ವಹಿಸಲಾಗಿದೆ. ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಸ್ಪೀಕರ್ ಎದುರು ಘೋಷಣೆ ಕೂಗಿದರು ಮತ್ತು ಹೊಗೆ ಬಾಂಬ್ ಹಾಕಿದ್ದರು. ಸಂಸತ್ತಿನ ಹೊರಗೆ ಇದೇ ರೀತಿ ಪ್ರತಿಭಟನೆ ನಡೆಸಿದ ಇಬ್ಬರನ್ನು ಬಂಧಿಸಲಾಯಿತು.
ಅಬ್ದುಲ್ಲಾ ಅವರ ದೂರಿಗೆ ಸಭಾಧ್ಯಕ್ಷರಿಂದ ಅಧಿಕೃತ ಪ್ರತಿಕ್ರಿಯೆ ಬರಬೇಕಿದೆ.