'ಯುಎಸ್ ಅಧ್ಯಕ್ಷರಿಗೆ ಯಾರಾದರೂ ತಿಳಿ ಹೇಳಿ', ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾಪಕ್ಕೆ ಕಾಂಗ್ರೆಸ್, ಶಿವಸೇನೆ ತೀವ್ರ ವಿರೋಧ

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.;

Update: 2025-05-11 08:47 GMT

ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿಷಯದಲ್ಲಿ ಯುಎಸ್ ಅಥವಾ ಯಾವುದೇ ಇತರ ದೇಶದ ಮಧ್ಯಸ್ಥಿಕೆ ಪ್ರಸ್ತಾಪಕ್ಕೆ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ನಾಯಕರು ಭಾನುವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ಸಮಸ್ಯೆಯನ್ನು "1,000 ವರ್ಷಗಳ ಹಳೆಯ ಸಂಘರ್ಷ" ಎಂದು ಹೇಳಿರುವ ಮಾತಿಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ, ಮೇ 10ರಂದು ಭಾರತ ಮತ್ತು ಪಾಕಿಸ್ತಾನ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಗುಂಡಿನ ದಾಳಿ ಮತ್ತು ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ರಾಜಕೀಯ ಪ್ರತಿಕ್ರಿಯೆಗಳು ಹೊರಬಿದ್ದಿವೆ. ಈ ಒಪ್ಪಂದಕ್ಕೆ ಮುನ್ನ, ಗಡಿಯಲ್ಲಿ ನಾಲ್ಕು ದಿನಗಳ ಕಾಲ ತೀವ್ರವಾದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆದಿದ್ದವು.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕೆಂದು ಒತ್ತಾಯಿಸಿದ್ದಾರೆ. "ನಾವು ಶಿಮ್ಲಾ ಒಪ್ಪಂದವನ್ನು ತ್ಯಜಿಸಿದ್ದೇವೆಯೇ? ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಬಾಗಿಲು ತೆರೆದಿದ್ದೇವೆಯೇ, ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಮಾರ್ಗಗಳನ್ನು ಮತ್ತೆ ತೆರೆಯಲಾಗುತ್ತಿದೆಯೇ, ನಾವು ಯಾವ ಭರವಸೆಗಳನ್ನು ಕೋರಿದ್ದೇವೆ ಮತ್ತು ಪಡೆದಿದ್ದೇವೆ" ಎಂದು ಅವರು ಪ್ರಶ್ನಿಸಿದ್ದಾರೆ.

ಪಾಹಲ್ಗಾಮ್ ಘಟನೆ, ಆಪರೇಷನ್ ಸಿಂದೂರ್ ಮತ್ತು ಕದನ ವಿರಾಮ ಒಪ್ಪಂದದ ಬಗ್ಗೆ ವಿವರವಾದ ಚರ್ಚೆಗಾಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂವಾದಕ್ಕೆ "ತಟಸ್ಥ ಸ್ಥಳ" ಎಂದು ಉಲ್ಲೇಖಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಮೇಶ್ ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಯ ಇತಿಹಾಸದ ಬಗ್ಗೆ ಮನೀಶ್ ತಿವಾರಿ ಸ್ಪಷ್ಟನೆ

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು, ಟ್ರಂಪ್ ಅವರ ಮಧ್ಯಸ್ಥಿಕೆ ಪ್ರಸ್ತಾಪ ತಳ್ಳಿಹಾಕಿದ್ದಾರೆ ಮತ್ತು ಕಾಶ್ಮೀರವು "1,000 ವರ್ಷಗಳ ಹಳೆಯ ಬೈಬಲ್ ಸಂಘರ್ಷವಲ್ಲ, ಇದು ಕೇವಲ 78 ವರ್ಷಗಳ ಹಳೆಯ ಸಮಸ್ಯೆ ಎಂದು ಟೀಕಿಸಿದ್ದಾರೆ. ಅಕ್ಟೋಬರ್ 22ರಂದು ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ ಈ ಸಮಸ್ಯೆ ಆರಂಭವಾಯಿತು ಮತ್ತು ಅಕ್ಟೋಬರ್ 26, 1947 ರಂದು ಮಹಾರಾಜ ಹರಿ ಸಿಂಗ್ ರಾಜ್ಯವನ್ನು ಭಾರತಕ್ಕೆ ಸಂಪೂರ್ಣವಾಗಿ ವಿಲೀನಗೊಳಿಸಿದರು, ಇದರಲ್ಲಿ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳು ಸೇರಿವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ ಅಧ್ಯಕ್ಷರಿಗೆ ಈ ಬಗ್ಗೆ " ತಿಳಿವಳಿಕೆ ನೀಡಬೇಕು " ಎಂದು ಅವರು ಲೇವಡಿ ಮಾಡಿದ್ದಾರೆ. .

ಭಾರತಕ್ಕೆ ವಿದೇಶಿ ಮಧ್ಯಸ್ಥಿಕೆಯ ಅಗತ್ಯವಿಲ್ಲ: ಶಿವಸೇನೆ (ಯುಬಿಟಿ)

ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು, ಕಾಶ್ಮೀರ ವಿಷಯವನ್ನು ಪರಿಹರಿಸಲು ಭಾರತಕ್ಕೆ ಯಾವುದೇ ವಿದೇಶಿ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಜವಾಬ್ದಾರಿಯನ್ನು ವಿಧಿಯು ಭಾರತಕ್ಕೆ ನೀಡಿದೆ ಮತ್ತು ಭಾರತವು ಈ ಸವಾಲನ್ನು ಸ್ವತಃ ಎದುರಿಸಬೇಕು ಎಂದು ಅವರು ಹೇಳಿದ್ದಾರೆ.

ಜೈರಾಮ್ ರಮೇಶ್ ಅವರು, ಹಿಂದಿನ ಸೈನಿಕ ಮುಖ್ಯಸ್ಥರ ಹೇಳಿಕೆಗಳನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯಿಂದ ಈ ವಿಷಯದ ಬಗ್ಗೆ ಸ್ಪಷ್ಟನೆ ಬೇಕು ಎಂದಿದ್ದಾರೆ. 1971ರಲ್ಲಿ ಇಂದಿರಾ ಗಾಂಧಿಯವರ "ಅಸಾಧಾರಣ ಧೈರ್ಯ ಮತ್ತು ನಿರ್ಣಾಯಕ ನಾಯಕತ್ವ" ವನ್ನು ದೇಶವು ನೆನಪಿಸಿಕೊಳ್ಳುವುದು ಸಹಜ ಎಂದು ಅವರು ಹೇಳಿದ್ದಾರೆ.

1980ರ ದಶಕದ ಆರಂಭದಲ್ಲಿ ಐಎಂಎಫ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ನಿರ್ವಹಣೆಯನ್ನು ಉಲ್ಲೇಖಿಸಿ, ಯುಎಸ್ ವಿರೋಧದ ನಡುವೆಯೂ ಭಾರತವು ಯಶಸ್ವಿಯಾಗಿ ಆರ್ಥಿಕ ಸವಾಲುಗಳನ್ನು ಎದುರಿಸಿದೆ ಎಂಬುದನ್ನು ಅವರು ಸ್ಮರಿಸಿದ್ದಾರೆ.

ಸರ್ಕಾರದ ಸ್ಪಷ್ಟನೆ

ಯುಎಸ್ ವಿದೇಶಾಂಗ ಕಾರ್ಯದರ್ಶಿ ರೂಬಿಯೊ ಅವರು "ತಟಸ್ಥ ಸ್ಥಳದಲ್ಲಿ ಮಾತುಕತೆ ನಡೆಯಲಿವೆ" ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ, ಯಾವುದೇ ಇತರ ವಿಷಯದಲ್ಲಿ ಯಾವುದೇ ಸ್ಥಳದಲ್ಲಿ ಮಾತುಕತೆ ನಡೆಸಲು ಯಾವುದೇ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದು ಕಾಶ್ಮೀರ ವಿಷಯದಲ್ಲಿ ವಿದೇಶಿ ಮಧ್ಯಸ್ಥಿಕೆಯನ್ನು ತಿರಸ್ಕರಿಸುವ ಮತ್ತು ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಪರಿಹರಿಸುವ ಭಾರತದ ನಿಲುವನ್ನು ಪುನರುಚ್ಚರಿಸಿದೆ.

Tags:    

Similar News