ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಭಾರತದಲ್ಲಿ ನಿರ್ಬಂಧ
ಜುಲೈ 2 ರಂದು ಪಾಕಿಸ್ತಾನದ ಹಲವು ಯೂಟ್ಯೂಬ್ ಚಾನೆಲ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತೆ ಕಾಣಿಸಿಕೊಂಡ ಕೆಲವೇ ದಿನಗಳ ನಂತರ ಈ ಕ್ರಮ ಜರುಗಿಸಲಾಗಿದೆ.;
ಮಾಹಿರಾ ಖಾನ್, ಶಾಹಿದ್ ಅಫ್ರಿದಿ, ಹನಿಯಾ ಅಮೀರ್ ಸೇರಿದಂತೆ ಹಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ಮತ್ತೆ ನಿರ್ಬಂಧಿಸಲಾಗಿದೆ.
ಪಾಕಿಸ್ತಾನದ ಹಲವು ಖ್ಯಾತ ನಟರ ಸಾಮಾಜಿಕ ಮಾಧ್ಯಮದ ಖಾತೆಗಳ ಮೇಲೆ ಭಾರತ ಮತ್ತೊಮ್ಮೆ ಕ್ರಮ ಕೈಗೊಂಡಿದೆ.
ಭಾರತ ಗುರುವಾರ (ಜುಲೈ 3) ಮತ್ತೆ ಎಲ್ಲಾ ಪಾಕಿಸ್ತಾನಿ ಸೆಲೆಬ್ರಿಟಿಗಳ ಖಾತೆಗಳಿಗೆ ನಿರ್ಬಂಧ ಹೇರಿದೆ. ಜೊತೆಗೆ, ಯೂಟ್ಯೂಬ್ ಚಾನೆಲ್‌ಗಳ ಮೇಲಿನ ನಿಷೇಧವನ್ನೂ ಮುಂದುವರೆಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ರಾಷ್ಟ್ರೀಯ ಭದ್ರತಾ ಕಾಳಜಿ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. 2025 ಏಪ್ರಿಲ್ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನಿಯರ ಸಾಮಾಜಿಕ ಮಾಧ್ಯಮದ ಖಾತೆಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು.
ಜುಲೈ ಆರಂಭದಲ್ಲಿ ಕೆಲವು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಖಾತೆಗಳ ಕಾರ್ಯ ನಿರ್ವಹಣೆಗೆ ಸ್ವಲ್ಪ ಸಮಯದವರೆಗೆ ವಿನಾಯ್ತಿ ನೀಡಿತ್ತು. ಆದರೆ, ಈಗ ಅವುಗಳಿಗೂ ನಿಷೇಧ ಹೇರಿದೆ.
ಎಲ್ಲಾ ಪಾಕಿಸ್ತಾನಿಯರ ಖಾತೆಗಳನ್ನು ಮತ್ತೆ ನಿರ್ಬಂಧಿಸಲಾಗಿದೆ. ಅಲ್ಲದೇ, ಯೂಟ್ಯೂಬ್‌ನಲ್ಲಿ ಪಾಕಿಸ್ತಾನಿ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೆಗೂ ನಿರ್ಬಂಧ ವಿಧಿಸಲಾಗಿದೆ.
ಪಾಕಿಸ್ತಾನದ ಸೆಲೆಬ್ರೆಟಿಯರಾದ ಹನಿಯಾ ಆಮಿರ್, ಮಹಿರಾ ಖಾನ್, ಶಾಹಿದ್ ಅಫ್ರಿದಿ, ಮೌರಾ ಹೊಕೇನ್ ಮತ್ತು ಫವಾದ್ ಖಾನ್ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮೌರಾ ಹೊಕೇನ್, ಸಬಾ ಕಮರ್, ಅಹದ್ ರಜಾ ಮಿರ್, ಯುಮ್ನಾ ಜೈದಿ ಮತ್ತು ಡ್ಯಾನಿಶ್ ತೈಮೂರ್ ಅವರ ಖಾತೆಗಳು ತಾಂತ್ರಿಕ ದೋಷದಿಂದ ಕೂಡಿವೆ. ಹಾಗಾಗಿ ಈ ಖಾತೆಗಳನ್ನು ಮತ್ತೆ ನಿಷೇಧಿಸಲಾಗಿದೆ ಎನ್ನಲಾಗಿದೆ. ಆದರೆ, ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ದೇಶದಲ್ಲಿ ಕೈಗೊಳ್ಳುತ್ತಿರುವ ಭದ್ರತಾ ಕ್ರಮಗಳು ಮತ್ತು ಡಿಜಿಟಲ್ ಪ್ರಚಾರ ನಿಲ್ಲಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದುತಿಳಿದು ಬಂದಿದೆ.
ಡಾನ್ ನ್ಯೂಸ್, ಇರ್ಷಾದ್ ಭಟ್ಟಿ, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ದಿ ಪಾಕಿಸ್ತಾನ್ ರೆಫರೆನ್ಸ್, ಜಿಯೋ ನ್ಯೂಸ್, ಸಮಾ ಸ್ಪೋರ್ಟ್ಸ್, ಜಿಎನ್‌ಎನ್, ಉಜೈರ್ ಕ್ರಿಕೆಟ್, ಉಮರ್ ಚೀಮಾ ಎಕ್ಸ್‌ಕ್ಲೂಸಿವ್, ಅಸ್ಮಾ ಶಿರಾಜಿ, ಮುನಿಬ್ ಫಾರೂಕ್, ಸುನೋ ನ್ಯೂಸ್ ಎಚ್‌ಡಿ ಮತ್ತು ರಾಜಿ ನಮ ಯೂಟ್ಯೂಬ್ ಚಾನೆಲ್ ಗಳನ್ನೂ ನಿಷೇಧಿಸಲಾಗಿದೆ. ಇದಲ್ಲದೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಶೋಯೆಬ್ ಅಖ್ತರ್ ಮತ್ತು ಬಸಿತ್ ಅಲಿ ಅವರ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ.
ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಅನೇಕ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದುರಂತ ಪಹಲ್ಗಾಮ್ ಭಯೋತ್ಪಾದಕ ಘಟನೆಯ ನಂತರ ಈ ಚಾನೆಲ್‌ಗಳು ಭಾರತ, ಸೇನಾಪಡೆ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಪ್ರಚೋದನಾಕಾರಿ ವಿಷಯವನ್ನು ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದವು.