ಹೋಗಿ ಬನ್ನಿ ಕಾಮ್ರೇಡ್‌ | ಯಾವಾಗಲೂ ʻಸರಿʼ ಹಾದಿಯಲ್ಲಿ ನಡೆದ ಎಡಪಂಥೀಯ ಯೆಚೂರಿ

ಯೆಚೂರಿ ಕಟ್ಟಾ ಕಮ್ಯುನಿಸ್ಟ್; ಪಕ್ಷದ ಸಿದ್ಧಾಂತದ ಬಗ್ಗೆ ಅಚಲ ನಂಬಿಕೆ ಹೊಂದಿದ್ದರು ಮತ್ತು ಜನರ ಒಳಿತಿನ ಉದ್ದೇಶ ಹೊಂದಿದ್ದರು. ಮೈತ್ರಿ ಮೂಲಕ ಕೋಮುವಾದ ಮತ್ತು ಕ್ರೋನಿ ಬಂಡವಾಳಶಾಹಿಯನ್ನು ಎದುರಿಸಲು ತಮ್ಮದೇ ಪಕ್ಷದೊಳಗಿನ ಕಠಿಣ ಸಿದ್ಧಾಂತಿಗಳ ವಿರುದ್ಧವೂ ಹೋರಾಡಿದರು.

Update: 2024-09-12 12:24 GMT

2004; ಭಾರತದ ರಾಜಕೀಯಕ್ಕೆ ಮಹತ್ವದ ತಿರುವು ನೀಡಿದ ವರ್ಷ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿಯು ʻಭಾರತ ಪ್ರಕಾಶಿಸುತ್ತಿದೆʼ ಎಂಬ ಘೋಷಣೆಯೊಂದಿಗೆ ಚುನಾವಣೆಗೆ ಇಳಿಯಿತು. ಆದರೆ, ಮತದಾರರು ಯಾವುದೇ ಪಕ್ಷಕ್ಕೂ ಬಹುಮತ ನೀಡಲಿಲ್ಲ. ಕಾಂಗ್ರೆಸ್ 145 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಸರ್ಕಾರ ರಚಿಸಲು 272 ಸ್ಥಾನ ಬೇಕಿತ್ತು.

ಎಡಪಂಥೀಯರ ಯುಗ: ಆಗ ಪ್ರವೇಶಿಸಿದವರು ಕಾಮ್ರೇಡ್ ಹರ್ಕಿಶನ್ ಸಿಂಗ್ ಸುರ್ಜೀತ್. ಸಿಪಿಐ(ಮಾರ್ಕ್ಸ್‌ವಾದಿ) ಅಥವಾ ಸಿಪಿಐ(ಎಂ) 43 ಸ್ಥಾನದೊಂದಿಗೆ ಮೂರನೇ ಅತಿ ದೊಡ್ಡ ಪಕ್ಷವಾಗಿದ್ದವು. ಸಿಪಿಐ 10, ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ) ಮತ್ತು ಫಾರ್ವರ್ಡ್ ಬ್ಲಾಕ್ ತಲಾ ಮೂರು ಸ್ಥಾನ ಗಳಿಸಿದ್ದವು. ಎಡ ಬಣದ 59 ಸ್ಥಾನಗಳು ನಿರ್ನಾಯಕವಾದವು. 

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸುರ್ಜಿತ್ ಅವರು ಸಮಾಜವಾದಿ ಪಕ್ಷ (ಎಸ್‌ಪಿ)ದ ಮುಲಾಯಂ ಸಿಂಗ್ ಯಾದವ್, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಲಾಲು ಪ್ರಸಾದ್ ಯಾದವ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನ ಎಂ.ಕರುಣಾನಿಧಿ ಅವರೊಂದಿಗೆ ಚರ್ಚೆ ಆರಂಭಿಸಿದರು. ಒಕ್ಕೂಟವೊಂದನ್ನು ರಚಿಸಿ, ಎಡ ಪಕ್ಷಗಳು ಹೊರಗಿನಿಂದ ಬೆಂಬಲವನ್ನು ನೀಡಲು ಮುಂದಾದವು. 

ಎಡಪಕ್ಷಗಳ ವರ್ಚಸ್ವಿ ಪ್ರತಿನಿಧಿ: ಈ ರಾಜಕೀಯ ಬೆಳವಣಿಗೆಗಳಲ್ಲಿ ಸೀತಾರಾಮ್ ಯೆಚೂರಿ ಅವರು ಸುರ್ಜೀತ್ ಅವರ ಬಲಗೈಯಂತೆ ನಿರ್ಣಾಯಕ ಪಾತ್ರ ವಹಿಸಿದರು. ಸಂವಹನ, ಸಂಖ್ಯಾತ್ಮಕ ಕುಶಾಗ್ರತೆ, ಭಾಷೆ ಮೇಲಿನ ಹಿಡಿತ ಮತ್ತು ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾದ ಯೆಚೂರಿ ಅವರು ಈ ಹಿಂದೆ 1996 ರಲ್ಲಿ ಪಿ. ಚಿದಂಬರಂ ಅವರೊಂದಿಗೆ ಯುನೈಟೆಡ್ ಫ್ರಂಟ್ ಸರ್ಕಾರಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ(ಸಿಎಂಪಿ)ದ ಕರಡು ರಚಿಸಿದ್ದರು.ಮನಮೋಹನ್ ಸಿಂಗ್ ಸರ್ಕಾರದ ಮೊದಲ ಅವಧಿಯಲ್ಲಿ ಯುಪಿಎ-ಎಡ ಮೈತ್ರಿಕೂಟಕ್ಕೆ ಯೆಚೂರಿಯವರ ಕೊಡುಗೆ ಮತ್ತು ಕಾರ್ಯತಂತ್ರಗಳು ಪ್ರಮುಖವಾಗಿವೆ.

ಯೆಚೂರಿಯವರ ಅರ್ಥಶಾಸ್ತ್ರ ಮತ್ತು ಹಣಕಾಸು ಕುರಿತ ಆಳವಾದ ಜ್ಞಾನವು ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಭಾವಿಸಿತು. ಹಿಂದಿ ಮತ್ತು ಉರ್ದು ಭಾಷೆ ಮೇಲಿನ ಹಿಡಿತವು ಹಿಂದಿ ಭಾಷಿಕ ರಾಜಕಾರಣಿಗಳೊಂದಿಗೆ ಪ್ರತಿಧ್ವನಿಸಿತು. ಆದರೆ, ಬಂಗಾಳಿಯಲ್ಲಿ ಪ್ರಾವೀಣ್ಯತೆ, ಮಲಯಾಳಂ ಮತ್ತು ತಮಿಳಿನ ಅರಿವು ಅವರನ್ನು ಬಹುಮುಖ ಸಂವಹನಕಾರರನ್ನಾಗಿ ಮಾಡಿತು. ಈ ಹಿಂದೆ ದೆಹಲಿಯಲ್ಲಿ ವಾಸ್ತವಿಕ ವರ್ತನೆಗೆ ಹೆಸರುವಾಸಿಯಾಗಿದ್ದ ಮಾರ್ಕ್ಸ್‌ವಾದಿಗಳು ಯೆಚೂರಿ ಅವರಲ್ಲಿ ವರ್ಚಸ್ವಿ ಪ್ರತಿನಿಧಿಯನ್ನು ಕಂಡುಕೊಂಡರು.

ಯುವ ಐಕಾನ್: 2004 ರಿಂದ ಯೆಚೂರಿ ದೇಶದ ರಾಜಕೀಯದಲ್ಲಿ ಮಹತ್ವದ ವ್ಯಕ್ತಿಯಾಗಿ ಉಳಿದಿದ್ದಾರೆ. ಆನಂತರ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಹಿನ್ನಡೆಯಾದರೂ, ಯೆಚೂರಿಯವರ ಪ್ರಭಾವ ಮುಂದುವರಿಯಿತು.

ವಿದ್ಯಾರ್ಥಿ ದಿನಗಳಿಂದಲೇ ನಾಯಕತ್ವಕ್ಕೆ ಅವರು ಹೆಸರುವಾಸಿದ್ದರು. ತುರ್ತು ಪರಿಸ್ಥಿತಿಯಲ್ಲಿ ಬಂಧಿತರಾಗುವ ಮೊದಲು, ಪ್ರತಿರೋಧವನ್ನು ಸಂಘಟಿಸಲು ಭೂಗತರಾದರು. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಂದಿರಾ ಗಾಂಧಿ ಅವರನ್ನು ಒತ್ತಾಯಿಸಿ, ನಡೆಸಿದ ಮಾತುಕತೆ ಅವರನ್ನು ಯುವಜನರ ಐಕಾನ್‌ ಆಗಿ ಮಾಡಿತು. 1984 ರಲ್ಲಿ ಅವರು ಎಸ್‌ಎಫ್‌ಐ( ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ಮೊದಲ ಕೇರಳೇತರ, ಬಂಗಾಳಿಯಲ್ಲದ ಅಧ್ಯಕ್ಷರಾದರು. ಅದೇ ವರ್ಷ ಅವರನ್ನು ಸಿಪಿಐ(ಎಂ) ಕೇಂದ್ರ ಸಮಿತಿಗೆ ಸೇರಿಸಲಾಯಿತು. 1985ರಲ್ಲಿ ಅವರು ಜೆಎನ್‌ಯು ದಿನಗಳ ಹಿರಿಯ ಪ್ರಕಾಶ್ ಕಾರಟ್ ಅವರೊಂದಿಗೆ ಹೊಸ ದಾಗಿ ರಚನೆಯಾದ ಕೇಂದ್ರೀಯ ಕಾರ್ಯಕಾರಿಣಿಗೆ ಆಯ್ಕೆಯಾದರು.

ಸಿಡಿಲಿನಂಥ ಮಾತು, ಸೌಮ್ಯ ವರ್ತನೆ: 2005 ರಲ್ಲಿ ಯೆಚೂರಿ ಅವರು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆಯಾದರು. ಇದು ಹೊಸ ಯುಗಕ್ಕೆ ನಾಂದಿ ಹಾಡಿತು. ರಾಜ್ಯಸಭೆಯಲ್ಲಿ ಅವರ ನಿರರ್ಗಳ ಮತ್ತು ಯಾರಿಗೂ ಮಣಿಯದ ಭಾಷಣಗಳು ಗಮನಾರ್ಹ. ಅವರು ತಮ್ಮ ಪಕ್ಷದ ನಿಲುವುಗಳನ್ನು ಸ್ಪಷ್ಟವಾಗಿ ಹೇಳಿದರು ಮತ್ತು ಇತರ ಪಕ್ಷಗಳನ್ನು ಪಟ್ಟುಬಿಡದೆ ಟೀಕಿಸಿದರು. ಸಂಸದೀಯ ಕಾರ್ಯವಿಧಾನ, ಕಾನೂನು ಮತ್ತು ಸಂವಿಧಾನದಲ್ಲಿನ ಅವರ ಪರಿಣತಿಯು ಅವರಿಗೆ ಚರ್ಚೆಗಳಲ್ಲಿ ಮೇಲುಗೈ ನೀಡಿತು. ಅವರ ತೀಕ್ಷ್ಣ ಮತ್ತು ಚುಚ್ಚುವ ಭಾಷಣಗಳ ಹೊರತಾಗಿಯೂ, ಇತರ ಪಕ್ಷಗಳ ನಾಯಕರೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಂಡಿದ್ದರು.

ರಾಜ್ಯಸಭೆಯಲ್ಲಿ ಯೆಚೂರಿ ಅವರ ಭಾಷಣ ಕೇಳಲು ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಹಾಜರಾಗುತ್ತಿದ್ದರು. ಇತರ ಪಕ್ಷಗಳು ಅಥವಾ ರಾಜಕೀಯವನ್ನು ಟೀಕಿಸಿದರೂ, ಅದರಲ್ಲಿ ಒಳನೋಟ ಇರುತ್ತಿತ್ತು. ಅಸಾಧಾರಣ ಹಾಸ್ಯಪ್ರಜ್ಞೆಯಿಂದ ವಿವಾದಾತ್ಮಕ ಚರ್ಚೆಗಳನ್ನು ನಿರ್ವಹಿಸಿದರು. ಯಚೂರಿ ಆಗಾಗ ಚರ್ಚೆ ನಡುವೆ,ʻನನಗೆ ಹಿಂದೂ ಧರ್ಮವನ್ನು ಕಲಿಸಬೇಡಿ. ಹಿಂದೂ ಧರ್ಮದ ಬಗ್ಗೆ ನಿಮ್ಮೆಲ್ಲರಿಗಿಂತ ನನಗೆ ಹೆಚ್ಚು ತಿಳಿದಿದೆ. ರಾಮಾಯಣ, ಮಹಾಭಾರತ, ಗೀತೆಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಓದಿದ್ದೇನೆ. ನನ್ನ ಹೆಸರಲ್ಲೂ ಸೀತೆ ಮತ್ತು ರಾಮ ಇದ್ದಾರೆ,ʼ ಎಂದು ಹೇಳುತ್ತಿದ್ದರು.

ಚತುರ ಸಂವಹನಕಾರ, ಮಾಧ್ಯಮ ನಿರ್ವಾಹಕ: ಪಕ್ಷದ ನಾಯಕರಾಗಿ ಅವರು ಮಾಧ್ಯಮಗಳನ್ನು ನಿಭಾಯಿಸುವುದರಲ್ಲಿ ನಿಪುಣರಾಗಿದ್ದರು. ಗೌರವಾನ್ವಿತ ಅಂತರ ಕಾಯ್ದುಕೊಂಡರೂ, ಸಂವಹನ ಮಾರ್ಗಗಳನ್ನು ತೆರೆದಿರುತ್ತಿದ್ದರು.ದಣಿವರಿಯದೆ ಮಾಧ್ಯಮಗಳಿಗೆ ಪಕ್ಷದ ನಿಲುವುಗಳನ್ನು ವಿವರಿಸಿದರು. ಸಿಪಿಐ(ಎಂ) ಮತ್ತು ಸಿಪಿಐ ರಾಷ್ಟ್ರೀಯ ಮತ್ತು ದೇಶಿ ಮಾಧ್ಯಮಗಳಲ್ಲಿ ಪ್ರಾಶಸ್ತ್ಯ ಪಡೆಯುವಂತೆ ನೋಡಿಕೊಂಡರು.

ಭಾರತ-ಅಮೆರಿಕ ಪರಮಾಣು ಒಪ್ಪಂದ ಮತ್ತು ಯುಪಿಎ-ಎಡ ಸಭೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದವು. ಸಿಪಿಐ(ಎಂ) ಸಿದ್ಧಾಂತವನ್ನು ಪ್ರಚಾರ ಮಾಡಲು ಯೆಚೂರಿ ಈ ಅವಕಾಶ ಬಳಸಿಕೊಂಡರು. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಮಾಧ್ಯಮಗಳ ಮುಂದೆ ಎಚ್ಚರಿಕೆ ಮತ್ತು ಅಸೌಖ್ಯ ಅನುಭವಿಸಿದಾಗ, ಯೆಚೂರಿ ಪತ್ರಕರ್ತರನ್ನು ಎದುರಿಸಿದರು. ಪ್ರತಿ ಅವಕಾಶವನ್ನು ಪಕ್ಷದ ಅನುಕೂಲಕ್ಕೆ ತಿರುಗಿಸಿದರು. ʻನಾನು ಐದು ಭಾಷೆಗಳಲ್ಲಿ ಇದೇ ವಿಷಯವನ್ನು ಪುನರಾವರ್ತಿಸಬಲ್ಲೆ. ಎರಡು ಭಾಷೆಗಳಲ್ಲಿ ಮಾತ್ರ ಇಲ್ಲ ಎಂದು ಹೇಳುತ್ತೇನೆ-ಮಲಯಾಳಂ ಮತ್ತು ತಮಿಳು,ʼ ಎಂದು ನಿರ್ದಿಷ್ಟ ಉತ್ತರ ನಿರೀಕ್ಷಿಸುತ್ತಿದ್ದ ವರದಿಗಾರರಿಗೆ ಹೇಳುತ್ತಿದ್ದರು.

ಸಮಸ್ಯೆ ಪರಿಹಾರಕ, ಒಮ್ಮತದ ಬಿಲ್ಡರ್: ಹಾಸ್ಯಪ್ರಜ್ಞೆ ಮತ್ತು ಹಗುರ ಮನೋಭಾವ ಅವರನ್ನು ಪರಿಣಾಮಕಾರಿ ಒಮ್ಮತದ ನಿರ್ಮಾಪಕನನ್ನಾಗಿ ಮಾಡಿತು. ಹರ್‌ಕಿಶನ್ ಸಿಂಗ್ ಸುರ್ಜೀತ್ ಅವರೊಂದಿಗಿನ ಸುದೀರ್ಘ ಒಡನಾಟವು ಮೈತ್ರಿಯ ಮಹತ್ವವನ್ನು ಕಲಿಸಿತು.

ಎದುರಾಳಿಯನ್ನು ಕಟುವಾಗಿ ಟೀಕಿಸಿದ ನಂತರವೂ, ಮುಖದಲ್ಲಿ ಬೆಚ್ಚಗಿನ ನಗು ಇರುತ್ತಿತ್ತು ಮತ್ತು ಹಿಂಜರಿಕೆಯಿಲ್ಲದೆ ತಬ್ಬಿಕೊಳ್ಳುತ್ತಿದ್ದರು. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಮುಲಾಯಂ ಸಿಂಗ್, ಮಾಯಾವತಿ, ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರಂತಹ ನಾಯಕರೊಂದಿಗೆ ಸ್ನೇಹ ಸಂಬಂಧ ಉಳಿಸಿಕೊಂಡರು.

ಯುಪಿಎ-2ರ ಮೊದಲ ಬಜೆಟ್ ಅಧಿವೇಶನದಲ್ಲಿ, ಕೇರಳದ ಎಡ ಸಂಸದರು ಸೋನಿಯಾ ಅವರನ್ನು ಭೇಟಿ ಮಾಡಲು ಬಯಸಿದ್ದರು. ಹಳೆಯ ಸಂಸತ್ ಕಟ್ಟಡದ ಕೋಣೆಗೆ ಪ್ರವೇಶಿಸುವ ಮೊದಲು, ಸೋನಿಯಾ ನಿಮ್ಮನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ ಎಂದು ಸಿಬ್ಬಂದಿಯೊಬ್ಬರು ಯೆಚೂರಿ ಅವರಿಗೆ ತಿಳಿಸಿದರು. ಯೆಚೂರಿ ಅವರೊಂದಿಗೆ ಕೆಲವು ಪತ್ರಕರ್ತರು ಮಾತನಾಡುತ್ತಿರುವಾಗಲೇ, ಒಳ ಪ್ರವೇಶಿಸಿದರು. ಯೆಚೂರಿ ಅವರನ್ನು ನೋಡಿದ ಸೋನಿಯಾ, ʼಓ ಸೀತಾರಾಮ್, ನಿಮ್ಮ ಅನುಪಸ್ಥಿತಿ ಈಗಾಗಲೇ ನಮ್ಮನ್ನು ಕಾಡುತ್ತಿದೆ(Oh Sitaram, we already miss you)ʼ ಎಂದು ಹೇಳಿದರು.

ಚಾರ್ಮಿನಾರ್ ಸಿಗರೇಟ್, ಮಾಂಸಾಹಾರ ಪ್ರಿಯ: ಅವರ ನೆನಪು ನಮ್ಮನ್ನು ಕಾಡಲಿದೆ. ಯೆಚೂರಿ ಕಟ್ಟಾ ಕಮ್ಯುನಿಸ್ಟ್; ಪಕ್ಷದ ಸಿದ್ಧಾಂತದ ಬಗ್ಗೆ ಅಚಲ ನಂಬಿಕೆ ಹೊಂದಿದ್ದರು ಮತ್ತು ಜನರ ಒಳಿತಿನ ಉದ್ದೇಶ ಹೊಂದಿದ್ದರು. ಮೈತ್ರಿ ಮೂಲಕ ಕೋಮುವಾದ ಮತ್ತು ಕ್ರೋನಿ ಬಂಡವಾಳಶಾಹಿಯನ್ನು ಎದುರಿಸಲು ತಮ್ಮದೇ ಪಕ್ಷದೊಳಗಿನ ಕಠಿಣ ಸಿದ್ಧಾಂತಿಗಳ ವಿರುದ್ಧವೂ ಹೋರಾಡಿದರು.

ಚಾರ್ಮಿನಾರ್ ಸಿಗರೇಟ್ ಮತ್ತು ಮಾಂಸಾಹಾರ ಪ್ರಿಯ. ಮಾನವೀಯ ಮೌಲ್ಯಗಳನ್ನು ಮರೆಯಲಿಲ್ಲ. ಅವರು ನಿಜವಾದ ಜನರ ಒಡನಾಡಿಯಾಗಿದ್ದರು ಮತ್ತು ಅವರನ್ನು ಬಹಳ ಗೌರವದಿಂದ ಸ್ಮರಿಸಲಾಗುತ್ತದೆ.

ಹೋಗಿ ಬನ್ನಿ ಕಾಮ್ರೇಡ್, ವಿದಾಯ ನಿಮಗೆ.

Tags:    

Similar News