ಗಾಯಕ ಜುಬೀನ್ ಗರ್ಗ್ ಸಾವು: ಮ್ಯಾನೇಜರ್, ಕಾರ್ಯಕ್ರಮ ಆಯೋಜಕನ ಬಂಧನ

ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಡೆದ ಈಶಾನ್ಯ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಜುಬೀನ್ ಗರ್ಗ್, ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಮುಳುಗಿ ಮೃತಪಟ್ಟಿದ್ದರು.

Update: 2025-10-01 04:09 GMT

ಜುಬೀನ್ ಗಾರ್ಗ್

Click the Play button to listen to article

ಸಿಂಗಾಪುರದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮ್ಯಾನೇಜರ್ ಮತ್ತು ಈಶಾನ್ಯ ಭಾರತ ಉತ್ಸವದ (NEIF) ಮುಖ್ಯ ಆಯೋಜಕನನ್ನು ಬಂಧಿಸಲಾಗಿದೆ. ಗರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಮತ್ತು ಉತ್ಸವದ ಸಂಘಟಕ ಶ್ಯಾಮಕಾನು ಮಹಾಂತ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ ಖಚಿತಪಡಿಸಿದ್ದಾರೆ.

ಸಿಂಗಾಪುರದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಹಾಂತ ಅವರನ್ನು ಬಂಧಿಸಲಾಯಿತು. ಇತ್ತ ಸಿದ್ಧಾರ್ಥ ಶರ್ಮಾ ಅವರನ್ನು ಗುರುಗ್ರಾಮ್‌ನ ಅಪಾರ್ಟ್‌ಮೆಂಟ್‌ನಿಂದ ವಶಕ್ಕೆ ಪಡೆಯಲಾಗಿದೆ. ಬುಧವಾರ ಮುಂಜಾನೆ ಇಬ್ಬರನ್ನೂ ವಿಚಾರಣೆಗಾಗಿ ಗುವಾಹಟಿಗೆ ಕರೆತರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಡೆದ ಈಶಾನ್ಯ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಜುಬೀನ್ ಗರ್ಗ್, ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಮುಳುಗಿ ಮೃತಪಟ್ಟಿದ್ದರು.. ಅವರ ಸಾವಿನ ಕುರಿತು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಅಸ್ಸಾಂ ಸರ್ಕಾರವು ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ತನಿಖೆಯ ಭಾಗವಾಗಿ, ಎಸ್‌ಐಟಿ ತಂಡವು ಮಹಾಂತ, ಶರ್ಮಾ ಸೇರಿದಂತೆ ಉತ್ಸವಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದ ಹಲವರಿಗೆ ನೋಟಿಸ್ ನೀಡಿತ್ತು. ಇಬ್ಬರ ವಿರುದ್ಧ ಇಂಟರ್‌ಪೋಲ್ ಮೂಲಕ 'ಲುಕ್‌ಔಟ್ ನೋಟಿಸ್' ಹೊರಡಿಸಲಾಗಿತ್ತು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ತಿಳಿಸಿದ್ದರು.

1972ರಲ್ಲಿ ಜನಿಸಿದ ಜುಬೀನ್ ಗರ್ಗ್, ಮೂರು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅಸ್ಸಾಮಿ, ಹಿಂದಿ ಮಾತ್ರವಲ್ಲದೆ, ಬಂಗಾಳಿ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. 'ಗ್ಯಾಂಗ್‌ಸ್ಟರ್' ಚಿತ್ರದ "ಯಾ ಅಲಿ" ಹಾಡು ಅವರಿಗೆ ದೇಶಾದ್ಯಂತ ಖ್ಯಾತಿ ತಂದುಕೊಟ್ಟಿತ್ತು.

Tags:    

Similar News