"ನಮ್ಮಲ್ಲಿ ಶಾಂತಿ ಇದ್ದರೆ,... ಭಯೋತ್ಪಾದನೆ ವಿರುದ್ಧ ಶಾರುಖ್ ಖಾನ್ ಕಠಿಣ ಸಂದೇಶ
ಇದೇ ಸಂದರ್ಭದಲ್ಲಿ ಯೋಧರಿಗೆ ಅರ್ಪಿಸಿ ಬರೆದ ಕವಿತೆಯ ಸಾಲುಗಳನ್ನು ವಾಚಿಸಿದ ಶಾರುಖ್, "ನಿಮ್ಮ ಉದ್ಯೋಗವೇನೆಂದು ಯಾರಾದರೂ ಕೇಳಿದರೆ, 'ನಾನು ದೇಶವನ್ನು ರಕ್ಷಿಸುತ್ತೇನೆ' ಎಂದು ಹೆಮ್ಮೆಯಿಂದ ಹೇಳಿ ಎಂದರು.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಮುಂಬೈನಲ್ಲಿ ನಡೆದ 'ಗ್ಲೋಬಲ್ ಪೀಸ್ ಆನರ್ಸ್ 2025' ಕಾರ್ಯಕ್ರಮದಲ್ಲಿ ಭಯೋತ್ಪಾದನೆಗೆ ಬಲಿಯಾದವರಿಗೆ ಮತ್ತು ಹುತಾತ್ಮ ಯೋಧರಿಗೆ ಭಾವಪೂರ್ಣ ಗೌರವ ಸಲ್ಲಿಸಿದ್ದಾರೆ. ಇದೇ ವೇಳೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, "ನಾವೆಲ್ಲರೂ ಒಗ್ಗಟ್ಟಿನಿಂದ ಶಾಂತಿಯನ್ನು ಕಾಪಾಡಿಕೊಂಡರೆ, ಜಗತ್ತಿನ ಯಾವ ಶಕ್ತಿಯೂ ಭಾರತವನ್ನು ಸೋಲಿಸಲು ಅಥವಾ ನಮ್ಮ ಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ," ಎಂದು ಕರೆ ನೀಡಿದ್ದಾರೆ.
60 ವರ್ಷದ ನಟ ಶಾರುಖ್, 2008ರ ಮುಂಬೈ 26/11 ದಾಳಿ, ಕಳೆದ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿ ಹಾಗೂ ಇತ್ತೀಚಿನ ದೆಹಲಿ ಕೆಂಪುಕೋಟೆ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರು ಮತ್ತು ವೀರ ಯೋಧರನ್ನು ಸ್ಮರಿಸಿದರು. "ನಮ್ಮ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ, ಅಂತಹ ವೀರ ಪುತ್ರರಿಗೆ ಜನ್ಮ ನೀಡಿದ ತಾಯಂದಿರಿಗೆ ಮತ್ತು ಅವರ ಸಂಗಾತಿಗಳ ಧೈರ್ಯಕ್ಕೆ ನನ್ನ ಸೆಲ್ಯೂಟ್," ಎಂದು ಭಾವುಕರಾಗಿ ನುಡಿದರು.
ಶಾಂತಿಯೇ ನಮ್ಮ ಶಕ್ತಿ
"ಶಾಂತಿ ಎಂಬುದು ಸುಂದರವಾದ ವಿಷಯ. ಇಡೀ ಜಗತ್ತು ಇಂದು ಶಾಂತಿಗಾಗಿ ಹಂಬಲಿಸುತ್ತಿದೆ. ಶಾಂತಿ ಇದ್ದರೆ ಮಾತ್ರ ಹೊಸ ಆಲೋಚನೆಗಳು, ಅನ್ವೇಷಣೆಗಳು ಮತ್ತು ಅಭಿವೃದ್ಧಿ ಸಾಧ್ಯ. ಜಾತಿ, ಮತ, ಭೇದಭಾವಗಳನ್ನು ಮರೆತು ನಾವೆಲ್ಲರೂ ಮಾನವೀಯತೆಯ ಹಾದಿಯಲ್ಲಿ ಸಾಗಬೇಕು. ಆಗ ಮಾತ್ರ ನಮ್ಮ ಯೋಧರ ತ್ಯಾಗಕ್ಕೆ ಬೆಲೆ ಸಿಗುತ್ತದೆ," ಎಂದು ಶಾರುಖ್ ಪ್ರತಿಪಾದಿಸಿದರು.
ಸೈನಿಕರ ಬಗ್ಗೆ ಹೆಮ್ಮೆ
ಇದೇ ಸಂದರ್ಭದಲ್ಲಿ ಯೋಧರಿಗೆ ಅರ್ಪಿಸಿ ಬರೆದ ಕವಿತೆಯ ಸಾಲುಗಳನ್ನು ವಾಚಿಸಿದ ಶಾರುಖ್, "ನಿಮ್ಮ ಉದ್ಯೋಗವೇನೆಂದು ಯಾರಾದರೂ ಕೇಳಿದರೆ, 'ನಾನು ದೇಶವನ್ನು ರಕ್ಷಿಸುತ್ತೇನೆ' ಎಂದು ಹೆಮ್ಮೆಯಿಂದ ಹೇಳಿ. ಎಷ್ಟು ಸಂಪಾದಿಸುತ್ತೀರಿ ಎಂದು ಕೇಳಿದರೆ, '140 ಕೋಟಿ ಜನರ ಆಶೀರ್ವಾದ ಗಳಿಸುತ್ತೇನೆ' ಎಂದು ನಗುತ್ತಾ ಉತ್ತರಿಸಿ. ನಿಮಗೆ ಭಯವಾಗುವುದಿಲ್ಲವೇ ಎಂದು ಕೇಳಿದರೆ, ಕಣ್ಣಲ್ಲಿ ಕಣ್ಣಿಟ್ಟು ಹೇಳಿ - 'ನಮ್ಮ ಮೇಲೆ ದಾಳಿ ಮಾಡುವವರಿಗೇ ಭಯವಾಗಬೇಕು, ನಮಗಲ್ಲ'," ಎಂದು ವೀರಾವೇಶದಿಂದ ನುಡಿದರು.
ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಸೈನಿಕರ ಪಾತ್ರವನ್ನು ಕೊಂಡಾಡಿದ ಅವರು, ಸಮವಸ್ತ್ರದಲ್ಲಿರುವ ನಮ್ಮ ಸೂಪರ್‌ಹೀರೋಗಳು ಇರುವವರೆಗೂ ಭಾರತಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.