ರೈತರಿಗೆ ರಾಹುಲ್ ಗಾಂಧಿ ಸಾಥ್: ʼನ್ಯಾಯ್ ಯಾತ್ರೆʼ ಮೊಟಕುಗೊಳಿಸಿ ದೆಹಲಿಯತ್ತ ಹೊರಟ ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ ಅವರು ಪ್ರತಿಭಟನಾನಿರತ ರೈತರೊಂದಿಗೆ ಸೇರಿಕೊಳ್ಳಲು ದೆಹಲಿಗೆ ತೆರಳಿದ್ದರಿಂದ ಜಾರ್ಖಂಡ್‌ನಲ್ಲಿ ನಡೆಯಬೇಕಿದ್ದ ನ್ಯಾಯ್ ಯಾತ್ರೆಯ ಎರಡನೇ ಹಂತವನ್ನು ರದ್ದುಗೊಳಿಸಲಾಗಿದೆ.;
ರಾಂಚಿ, ಫೆ 14: ಜಾರ್ಖಂಡ್‌ನಲ್ಲಿ ಬುಧವಾರ ಆರಂಭವಾಗಬೇಕಿದ್ದ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಎರಡನೇ ಹಂತವನ್ನು ರದ್ದುಗೊಳಿಸಲಾಗಿದೆ ಎಂದು ಪಕ್ಷದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ದೆಹಲಿಗೆ ಧಾವಿಸಿದ್ದರಿಂದ ನ್ಯಾಯ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿಯವರ ಅನುಪಸ್ಥಿತಿಯಲ್ಲಿ, ಗರ್ವಾ ಜಿಲ್ಲೆಯ ರಂಕಾದಲ್ಲಿ ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದವನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮತ್ತು ಇತರ ಪಕ್ಷದ ನಾಯಕರು ನಡೆಸಲಿದ್ದಾರೆ.
ಬುಧವಾರ ತನ್ನ ಎರಡನೇ ಹಂತದ ಯಾತ್ರೆಗಾಗಿ ಛತ್ತೀಸ್‌ಗಢದಿಂದ ಗರ್ಹ್ವಾ ಜಿಲ್ಲೆಯ ಮೂಲಕ ಜಾರ್ಖಂಡ್‌ಗೆ ರಾಹುಲ್ ಗಾಂಧಿ ಮರುಪ್ರವೇಶ ಮಾಡಬೇಕಿತ್ತು.
"ಮಂಗಳವಾರ ತಡರಾತ್ರಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಜಾರ್ಖಂಡ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ" ಎಂದು ಕಾಂಗ್ರೆಸ್ ವಕ್ತಾರ ಸೋನಾಲ್ ಶಾಂತಿ ಪಿಟಿಐಗೆ ತಿಳಿಸಿದ್ದಾರೆ.
ನಂತರ ಜಾರ್ಖಂಡ್‌ನಿಂದ ಯಾತ್ರೆ ಪುನರಾರಂಭವಾಗುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, ಜಾರ್ಖಂಡ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್, ಎನ್ಎಸ್‌ಯುಐ ಉಸ್ತುವಾರಿ ಕನ್ಹಿಯಾ ಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಬುಧವಾರ ರಂಕಾದಲ್ಲಿ ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ರಾಹುಲ್ ಗಾಂಧಿಯವರ ಮೊದಲ ಯಾತ್ರೆ ಫೆಬ್ರವರಿ ಮೊದಲ ವಾರದಲ್ಲಿ ನಡೆದಿದ್ದು, ಫೆಬ್ರವರಿ 2 ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್ ಪ್ರವೇಶಿಸಿ ಫೆಬ್ರವರಿ 6 ರಂದು ಒಡಿಶಾ ಪ್ರವೇಶಿಸಿತ್ತು. ಫೆಬ್ರವರಿ 15 ರಂದು ಬಿಹಾರಕ್ಕೆ ಪ್ರವೇಶಿಸುವ ಮೊದಲು ಗಾಂಧಿ ಅವರು ಎರಡನೇ ಹಂತದಲ್ಲಿ ಜಾರ್ಖಂಡ್‌ನಲ್ಲಿ ಎರಡು ದಿನಗಳ ಕಾಲ ಇರಬೇಕಿತ್ತು.
ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' 67 ದಿನಗಳಲ್ಲಿ 6,713 ಕಿ.ಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.