ಪಾಕ್ ಶೆಲ್‌ದಾಳಿಗೆ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಜನರ ನೋವನ್ನು ಕಡಿಮೆ ಮಾಡಲು ಸರ್ಕಾರದಿಂದಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಒಮರ್ ಅಬ್ದುಲ್ಲಾ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.;
ಜಮ್ಮಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಪಾಕ್ ಸೇನಾಪಡೆ ಕದನವಿರಾಮ ಉಲ್ಲಂಘಿಸಿ ಗಡಿಯುದ್ದಕ್ಕೂ ಶೆಲ್ ಹಾಗೂ ಡ್ರೋನ್ ದಾಳಿ ನಡೆಸಿದ ಪರಿಣಾಮ ಜಮ್ಮು ಕಾಶ್ಮೀರದಲ್ಲಿ 19 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದರು. ಮೃತಪಟ್ಟ ನಾಗರಿಕರ ಕುಟುಂಬಕ್ಕೆ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮೃತಪಟ್ಟವರಲ್ಲಿ ರಾಜೌರಿಯ ಅಪರ ಜಿಲ್ಲಾಧಿಕಾರಿ ರಾಜಕುಮಾರ್ ಥಾಪ ಕೂಡ ಸೇರಿದ್ದು, ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದರು. ಜಮ್ಮುವಿನ ಫೂಂಚ್, ರಾಝೌರಿ, ಮೆಂದರ್, ಬಿದಿಪುರಾ, ಬಾರಾಮುಲ್ಲಾ ಹಾಗೂ ಜಟ್ಟಾ ಸೇರಿದಂತೆ ಹಲವು ಭಾಗಗಳಲ್ಲಿ ಈ ದಾಳಿಗಳು ನಡೆದಿದ್ದವು.
ಇತ್ತೀಚೆಗೆ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಅಮಾಯಕ ನಾಗರಿಕರು ಬಲಿಯಾಗಿರುವುದು ತೀವ್ರ ನೋವುಂಟುಮಾಡಿದೆ ಎಂದು ಜಮ್ಮುಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿಷಾದ ವ್ಯಕ್ತಪಡಿಸಿದ್ದರು. ಜನರ ನೋವನ್ನು ಕಡಿಮೆ ಮಾಡಲು ಸರ್ಕಾರದಿಂದಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ, ಮೃತಪಟ್ಟ ನಾಗರಿಕರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಅಗತ್ಯ ಮುನ್ನೆಚರಿಕೆ ವಹಿಸಲಾಗಿತ್ತು.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ ಭಾರತೀಯ ಸೇನಾಪಡೆ 'ಆಪರೇಷನ್ ಸಿಂದೂರ' ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಗೊಳಿಸಿತ್ತು. ಈ ವೇಳೆ ನೂರಾರು ಉಗ್ರರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಸೇನೆ ಭಾರತದ ಜಮ್ಮುಕಾಶ್ಮೀರ, ಪಂಜಾಬ್ ಹಾಗೂ ರಾಜಸ್ತಾನದ ಗಡಿ ಭಾಗದಲ್ಲಿ ಶೆಲ್ ಹಾಗೂ ಡ್ರೋನ್ ಮೂಲಕ ದಾಳಿ ನಡೆಸಿತ್ತು.
ಸದ್ಯ, ಭಾರತ ಹಾಗೂ ಪಾಕಿಸ್ತಾನದ ಗಡಿ ಭಾಗದಲ್ಲಿನ ಉದ್ವಿಗ್ನತೆ ಕಡಿಮೆಯಾಗಿದೆ. ಶನಿವಾರ (ಮೇ 10) ಸಂಜೆ 5 ಗಂಟೆಯಿಂದ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ. ಮೇ 12ರಂದು ಉಭಯ ದೇಶಗಳ ಸೇನಾ ಮಹಾನಿರ್ದೇಶಕರು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.