ಟೆಸ್ಟ್, ಏಕದಿನ ಪಂದ್ಯಗಳಲ್ಲಿ ಕೆಲಕಾಲ ಆಟ ಮುಂದುವರಿಕೆ: ರೋಹಿತ್

Update: 2024-07-15 09:15 GMT

ಡಲ್ಲಾಸ್ (ಯುಎಸ್ಎ), ಜು.15- ಕಳೆದ ತಿಂಗಳು ವಿಶ್ವಕಪ್ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದ್ದ ರೋಹಿತ್‌ ಶರ್ಮಾ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಆಡುವುದನ್ನು ಸ್ವಲ್ಪ ದಿನ ಮುಂದುವರಿಸುವುದಾಗಿ ಹೇಳಿದ್ದಾರೆ. 

ವೆಸ್ಟ್ ಇಂಡೀಸ್‌ನಲ್ಲಿ ಪ್ರಶಸ್ತಿ ಗೆಲುವಿನ ನಂತರ ರೋಹಿತ್(37) ವಿಶ್ರಾಂತಿಯಲ್ಲಿದ್ದು, ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ. 

ʻನಾನು ಆಗ ಹಾಗೆ ಹೇಳಿದೆನಷ್ಟೇ. ನಾನು ಸ್ವಲ್ಪ ಸಮಯದವರೆಗೆ ಆಡುವುದನ್ನು ನೀವು ನೋಡುತ್ತೀರಿ,ʼ ಎಂದು ಭಾನುವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. 

ವೆಸ್ಟ್ ಇಂಡೀಸ್‌ನಲ್ಲಿ ಭಾರತ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿದ ನಂತರ ರೋಹಿತ್‌ ನಿವೃತ್ತಿಯನ್ನು ಘೋಷಿಸಿದ್ದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು ಮತ್ತು ಮುಂದಿನ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್‌ ಅವರು ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಈ ತಿಂಗಳ ಆರಂಭದಲ್ಲಿ ಖಚಿತಪಡಿಸಿದ್ದರು.

ರೋಹಿತ್ 2022 ರ ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು. ಸೆಮಿಫೈನಲ್‌ನಲ್ಲಿ ಚಾಂಪಿಯನ್ ಇಂಗ್ಲೆಂಡ್‌, ಭಾರತವನ್ನು ಸೋಲಿಸಿತ್ತು. ಒಂದು ವರ್ಷದ ನಂತರ ತವರಿನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನ ಫೈನಲ್‌ಗೆ ತಲುಪಿದ ತಂಡ, ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. ರೋಹಿತ್ 159 ಟಿ 20 ಪಂದ್ಯಗಳಲ್ಲಿ ಐದು ಶತಕ, 32 ಅರ್ಧ ಶತಕಗಳೊಂದಿಗೆ 4231 ರನ್‌ ಗಳಿಸಿದ್ದಾರೆ.

Tags:    

Similar News