ವೈದ್ಯೆ ಅತ್ಯಾಚಾರ ಪ್ರತಿಭಟನೆ ವೇಳೆ ದುಷ್ಕರ್ಮಿಗಳ ಗುಂಪಿನ ದಾಂಧಲೆ; ಆರ್‌ಜಿ ಕರ್ ಆಸ್ಪತ್ರೆ ನರ್ಸ್‌ಗಳಿಂದ ಪ್ರತಿಭಟನೆ
ಆಸ್ಪತ್ರೆಯ ದಾದಿಯರು ಈ ವಿಧ್ವಂಸಕ ಕೃತ್ಯವನ್ನು ಪ್ರತಿಭಟಿಸಿದರು. ಆಸ್ಪತ್ರೆಯ ಆವರಣದಲ್ಲಿ ಸೂಕ್ತ ಭದ್ರತೆಗೆ ಒತ್ತಾಯಿಸಿದರು.
ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ನಡೆದ ವೈದ್ಯಕೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ, ಆರ್ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ ಬುಧವಾರ ರಾತ್ರಿ ಗುಂಪೊಂದು ಆಸ್ಪತ್ರೆ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯ ಎಸಗಿದೆ. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಅನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಗುರುವಾರ ಬೆಳಿಗ್ಗೆ ಆಸ್ಪತ್ರೆಯ ದಾದಿಯರು ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರು ಮಧ್ಯರಾತ್ರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ವಿಧ್ವಂಸಕ ಕೃತ್ಯ ನಡೆದಿದೆ. ಇದೀಗ ಆಸ್ಪತ್ರೆಯ ದಾದಿಯರು ಈ ವಿಧ್ವಂಸಕ ಕೃತ್ಯವನ್ನು ಪ್ರತಿಭಟಿಸಿದರು. ಆಸ್ಪತ್ರೆಯ ಆವರಣದಲ್ಲಿ ಸೂಕ್ತ ಭದ್ರತೆಗೆ ಒತ್ತಾಯಿಸಿದರು. ಆಸ್ಪತ್ರೆಯೊಳಗೆ ಇಂತಹ ಗೂಂಡಾಗಿರಿ ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾನಿರತ ನರ್ಸ್ ಒಬ್ಬರು ಹೇಳಿದರು.
ಸುಮಾರು 40 ಜನರು ಪ್ರತಿಭಟನಾಕಾರರಂತೆ ಮುಖವಾಡ ಧರಿಸಿ ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸಿದ್ದರು. ಆಸ್ಪತ್ರೆಯ ಆಸ್ತಿಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ ಹಾಜರಿದ್ದ ಪೊಲೀಸ್ ಸಿಬ್ಬಂದಿಗೆ ಕಲ್ಲು ತೂರಿದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ದೊಣ್ಣೆಗಳು, ಇಟ್ಟಿಗೆಗಳು ಮತ್ತು ರಾಡ್ಗಳನ್ನು ಹೊತ್ತ ದುಷ್ಕರ್ಮಿಗಳು, ಉತ್ತರ ಕೋಲ್ಕತ್ತಾದ ಆಸ್ಪತ್ರೆಯಲ್ಲಿನ ಹೊರ ರೋಗಿಗಳ ವಿಭಾಗದ (OPD) ವಿಭಾಗವನ್ನು ಹೊರತುಪಡಿಸಿ, ತುರ್ತು ಚಿಕಿತ್ಸಾ ವಿಭಾಗ, ಅದರ ನರ್ಸಿಂಗ್ ಸ್ಟೇಷನ್ ಮತ್ತು ಔಷಧಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ವಾಹನವೊಂದು ಪಲ್ಟಿಯಾಗಿದೆ ಮತ್ತು ಅಲ್ಲಿ ನಿಲ್ಲಿಸಿದ್ದ ಹಲವಾರು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಗೂಂಡಾಗಳು ಕ್ಯಾಂಪಸ್‌ಗೆ ನುಗ್ಗಿ ಧರಣಿ ನಿರತ ವೈದ್ಯರಿಗೆ ಥಳಿಸಿದ್ದಾರೆ. ಇದು ನಮ್ಮ ನೈತಿಕ ಸ್ಥೈರ್ಯವನ್ನು ಮುರಿಯುವ ಪ್ರಯತ್ನವಾಗಿದ್ದು, ಇಂತಹ ಘಟನೆಗಳ ವಿರುದ್ದ ಕೊನೆಯವರೆಗೂ ಹೋರಾಡುವ ನಮ್ಮ ಸಂಕಲ್ಪವನ್ನು ಬಲಪಡಿಸಿದೆ ಎಂದು ಪ್ರತಿಭಟನಾನಿರತ ವೈದ್ಯರೊಬ್ಬರು ಹೇಳಿದರು. ಪೊಲೀಸ್ ಸಿಬ್ಬಂದಿ ಇರುವಾಗಲೇ ವಿಧ್ವಂಸಕ ಕೃತ್ಯ ನಡೆದಿದೆ ಎಂದು ಆರೋಪಿಸಿದರು.
ಘಟನೆಯ ನಂತರ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್, "ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದರು. ದುರುದ್ದೇಶಪೂರಿತ ಪ್ರಚಾರ ನಡೆಸುತ್ತಿದ್ದೀರಿ ಎಂದು ಮಾಧ್ಯಮಗಳ ವಿರುದ್ಧವೇ ಹರಿಹಾಯ್ದರು.ಈ ಪ್ರಕರಣವನ್ನು ಭೇದಿಸಲು ಪೊಲೀಸರು ಏನು ಮಾಡಿಲ್ಲ? ಆದರೆ ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ಪ್ರಚಾರ ನಡೆಯುತ್ತಿದೆ ಎಂದು ಅವರು ಹೇಳಿದರು.
ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮರುದಿನ ಅಪರಾಧಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿದೆ. ಕಲ್ಕತ್ತಾ ಹೈಕೋರ್ಟ್ ಆಗಸ್ಟ್ 13 ರಂದು ಕೋಲ್ಕತ್ತಾ ಪೊಲೀಸರಿಂದ ಅಪರಾಧದ ತನಿಖೆಯನ್ನು ತಕ್ಷಣವೇ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು. ಇದೀಗ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.