Ratan Tata | ಭಾರತದ ದಂತಕಥೆ ರತನ್‌: ರತನ್‌ ಕುರಿತ ಗೊತ್ತಿರಬೇಕಾದ ಸಂಗತಿಗಳು

ರತನ್‌ ಟಾಟಾ ಅವರಿಗೆ ನಾಯಿಗಳ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ 2018 ರಲ್ಲಿ ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು.;

Update: 2024-10-10 13:00 GMT
ರತನ್ ಟಾಟಾ ಅವರು Instagram ನಲ್ಲಿ ಹಂಚಿಕೊಂಡ ಅವರ ಥ್ರೋಬ್ಯಾಕ್ ಫೋಟೋ.
Click the Play button to listen to article

ಇಡೀ ಭಾರತ ಪ್ರೀತಿಸುವ ಗೌರವಾನ್ವಿತ ವ್ಯಕ್ತಿ ಹಾಗೂ  ಉದ್ಯಮ ಲೋಕದ ಧ್ರುವತಾರೆ ರತನ್‌ ಟಾಟಾ ಅವರ ನಿಧನಕ್ಕೆ ದೇಶವೇ ಕಣ್ಣೀರಿಡುತ್ತಿದೆ.

ರತನ್ ಟಾಟಾ ಕೇವಲ ಕೈಗಾರಿಕೋದ್ಯಮಿಯಾಗಿರಲಿಲ್ಲ. ಅವರು ಟಾಟಾ ಗ್ರೂಪ್‌ಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ವ್ಯಕ್ತಿ. ಅಷ್ಟೇ ಆಗಿದ್ದರೆ, ಬಹುಶಃ ಇಡೀ ದೇಶ ಹೀಗೆ ಅವರಿಗಾಗಿ ಮಿಡಿಯುತ್ತಿರಲಿಲ್ಲ. ದೇಶದ ಬಡವರು, ಮಧ್ಯಮವರ್ಗದ ಬದುಕಿನಲ್ಲಿ ಸುಧಾರಣೆ ತರುವ, ದೇಶದ ಕಲೆ, ಸಾಹಿತ್ಯ, ಪರಿಸರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅವರು ತೋರಿದ ಕಾಳಜಿ ಮತ್ತು ಆಸ್ಥೆಗಳು ಅವರನ್ನು ದೇಶದ ಉಳಿದೆಲ್ಲಾ ಉದ್ಯಮಿಗಳಿಗಿಂತ ಮೇಲುಸ್ತರದಲ್ಲಿ ಇರಿಸಿವೆ. ಹಣ ಮತ್ತು ವ್ಯವಹಾರಕ್ಕಷ್ಟೇ ಸೀಮಿತವಾಗಿ ಉದ್ಯಮ ಸಾಮ್ರಾಜ್ಯ ಕಟ್ಟುವುದಷ್ಟನ್ನೇ ಬದುಕಿನ ಸರ್ವಸ್ವ ಎಂದು ಎಣಿಸದೆ, ಹಾಗೇ ದೇಶವನ್ನು ಕಟ್ಟುವ, ದೇಶದ ಬದುಕು ಕಟ್ಟುವ ಕಾಳಜಿ ತೋರಿದ್ದಕ್ಕಾಗಿ ಅವರ ಅಗಲಿಕೆಯ ಈ ಹೊತ್ತು ದೇಶ ತಮ್ಮದೇ ಮನೆ ಮಗನನ್ನು ಕಳೆದುಕೊಂಡಂತೆ ಮಿಡಿಯುತ್ತಿದೆ.

ಭಾರತೀಯ ಉದ್ಯಮದ ಆಧಾರ ಸ್ತಂಭವಾಗಿದ್ದ ರತನ್‌ ಟಾಟಾ ಅವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಸಂಗತಿಗಳು ಇಲ್ಲಿವೆ... 

ರತನ್‌ ಬಾಲ್ಯ ಮತ್ತು ಶಿಕ್ಷಣ

ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಮುಂಬೈನಲ್ಲಿ ಜನಿಸಿದರು. ರತನ್ ಟಾಟಾ ಅವರು ಟಾಟಾ ಗ್ರೂಪ್ ಸಂಸ್ಥಾಪಕ ಜಮ್‌ ಶೆಡ್‌ಜೀ ಟಾಟಾ ಅವರ ಕುಟುಂಬಕ್ಕೆ ಸೇರಿದ್ದಾರೆ. ಅವರ ತಾಯಿ ಸುನಿ ಟಾಟಾ, ಮತ್ತು ತಂದೆ ನಾವುಲ್ ಟಾಟಾ. ರತನ್ ಟಾಟಾ ಅವರ ಪೋಷಕರು ಅವರು 10 ವರ್ಷದವರಾಗಿದ್ದಾಗ; 1948 ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಅವರನ್ನು ಅವರ ಅಜ್ಜಿ ನವಾಜ್ಬಾಯಿ ಟಾಟಾ ಬೆಳೆಸಿದರು. ಅವರ ಆರಂಭಿಕ ಶಾಲಾ ಶಿಕ್ಷಣವು ಮುಂಬೈ ಮತ್ತು ಶಿಮ್ಲಾದಲ್ಲಿ ಪೂರೈಸಿದರು. 1955 ರಲ್ಲಿ ನ್ಯೂಯಾರ್ಕ್‌ ಶಾಲೆಯಿಂದ ಪದವಿ ಪಡೆದರು. ಬಳಿಕ ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ವ್ಯಾಪಾರ ನಿರ್ವಹಣಾ ಪದವಿಯನ್ನು ಪಡೆದುಕೊಂಡಿದ್ದಾರೆ. 

ಮದುವೆಯಾಗಲಿಲ್ಲ ರತನ್‌ ಟಾಟಾ 

ರತನ್‌ ಟಾಟಾ ತಮ್ಮ ಜೀನವಪೂರ್ತಿ ಒಂಟಿಯಾಗಿಯೇ ಉಳಿದ್ದರು. ಎಂದೂ ಮದುವೆಯಾಗಿಲ್ಲ. ಆದರೆ ನಾಲ್ಕಾರು ಬಾರಿ ಪ್ರೀತಿಯಲ್ಲಿ ಬಿದ್ದಿದ್ದ ರತನ್‌ ಟಾಟಾಗೆ ಮದುವೆಯಾಗುವ ಅವಕಾಶಗಳು ಕೂಡ ಇತ್ತು. ಸಂದರ್ಶನವೊಂದರಲ್ಲಿ ರತನ್‌ ಟಾಟಾ, ತಮ್ಮ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅವರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಅವರಿಬ್ಬರ ನಡುವಿನ ಪ್ರೀತಿ ತುಂಬಾ ಆಳವಾಗಿತ್ತು ಮತ್ತು ಇಬ್ಬರೂ ಪರಸ್ಪರ ಮದುವೆಯಾಗಲು ಸಹ ಯೋಚಿಸಿದ್ದರು. ಇದೇ ವೇಳೆ ರತನ್ ಟಾಟಾ ಅವರ ಅಜ್ಜಿಯ ಆರೋಗ್ಯ ಹದಗೆಟ್ಟಾಗ, ಅವರು ಭಾರತಕ್ಕೆ ಮರಳಿದರು. ತನ್ನ ಗೆಳತಿ ಕೂಡ ಶೀಘ್ರದಲ್ಲೇ ಭಾರತಕ್ಕೆ ಬರುತ್ತಾಳೆ ಮತ್ತು ತಾವಿಬ್ಬರೂ ಇಲ್ಲೇ ಮದುವೆಯಾಗಬಹುದು ಎಂದು ಅವರು ಭಾವಿಸಿದ್ದರು. ದುರಾದೃಷ್ಟವಶಾತ್ ಭಾರತ ಮತ್ತು ಚೀನಾ ನಡುವೆ 1962 ರ ಯುದ್ಧ ಪ್ರಾರಂಭವಾಗಿತ್ತು ಮತ್ತು ಅವರ ಗೆಳತಿಯ ಕುಟುಂಬವು ಭಾರತಕ್ಕೆ ಬರಲು ನಿರಾಕರಿಸಿತು. ಹೀಗಾಗಿ ಅವರ ಪ್ರೇಮಕಥೆ ಅಲ್ಲಿಗೇ ಅಂತ್ಯವಾಯಿತು ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಕಾಣದಂತೆ ಕೊಡುತ್ತಿದ್ದ ಕೊಡುಗೈ ದಾನಿ 

ರತನ್‌ ಟಾಟಾ ಯಾವುದೇ ಮಾಧ್ಯಮಗಳ ಗಮನಕ್ಕೆ ಬಾರದೆ, ಶತಕೋಟಿ ಡಾಲರ್‌ಗಳನ್ನು ಜನ ಸಮುದಾಯಗಳ ಒಳಿತಿನ ಉದ್ದೇಶಗಳಿಗಾಗಿ ದಾನ ಮಾಡಿದ್ದಾರೆ. 300 ಶತಕೋಟಿ ಮೌಲ್ಯದ ವಹಿವಾಟು ಸಾಮ್ರಾಜ್ಯದ ಚುಕ್ಕಾಣಿ ವಹಿಸಿದ್ದರೂ, ಅವರು ಸ್ವತಃ ಬಿಲಿಯನೇರ್ ಆಗಿರಲಿಲ್ಲ. ಅವರು ತಮ್ಮ ಹಣವನ್ನು ತಮಗೆ ಖರ್ಚು ಮಾಡಿಕೊಳ್ಳುವ ಬದಲು ಯೋಗ್ಯ ಸಾಮಾಜಿಕ ಯೋಜನೆಗಳಿಗೆ ದೇಣಿಗೆ ನೀಡಲು ಆದ್ಯತೆ ನೀಡುತ್ತಿದ್ದರು. 

ಪೈಲಟ್ ಆಗಿಯೂ ತರಬೇತಿ ಪಡೆದಿದ್ದ ಟಾಟಾ

ರತನ್‌ ಟಾಟಾ ಅವರು ಪೈಲಟ್‌ ಆಗಿಯೂ ತರಬೇತಿ ಪಡೆದಿದ್ದರು. ಅವರು ತಮ್ಮ ಸಹಪಾಠಿಗಳೊಂದಿಗೆ ಒಮ್ಮೆ ವಿಮಾನದಲ್ಲಿ ಚಲಿಸುತ್ತಿದ್ದಾಗ ಆ ವಿಮಾನದ ಎಂಜಿನ್‌ ವಿಫಲವಾಗಿತ್ತು. ಆಗ ರತನ್‌ ಟಾಟಾ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಅವರನ್ನು ರಕ್ಷಿಸಿದ್ದರು.  2007 ರಲ್ಲಿ F-16 ಫಾಲ್ಕನ್ ಫೈಟರ್ ಜೆಟ್ ಅನ್ನು ಹಾರಿಸಿದ ಮೊದಲ ಭಾರತೀಯರಾಗಿದ್ದಾರೆ ರತನ್‌ ಟಾಟಾ. 

ನಾಯಿಗಳ ಆಪತ್ಬಾಂಧವ ರತನ್‌ ಟಾಟಾ 

ರತನ್‌ ಟಾಟಾ ಅವರಿಗೆ ನಾಯಿಗಳ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ 2018 ರಲ್ಲಿ ಬ್ರಿಟನ್​ನ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಅಂದು ತಮ್ಮ ಸಾಕು ನಾಯಿಗೋಸ್ಕರ ತಿರಸ್ಕರಿಸಿದ್ದರು.

2018ರ ಫೆಬ್ರವರಿ 6ರಂದು ಬ್ರಿಟನ್​ನ ರಾಜಮನೆತನ ಬಕಿಂಗ್​ಹ್ಯಾಮ್ ಅರಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬ್ರಿಟನ್ ರಾಯಲ್ ಪ್ರಿನ್ಸ್​​ ಚಾರ್ಲ್ಸ್​ ಅವರು ಭಾರತೀಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಲೋಕೋಪಕಾರಿ ಕೆಲಸಕ್ಕೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಅವರ ಸಾಕು ನಾಯಿ. ಅವರ ಒಂದು ಸಾಕು ನಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು, ಆ ಕಾರಣಕ್ಕೆ ತಮ್ಮ ಪ್ರೀತಿಯ ನಾಯಿಗೆ ಕಾಯಿಲೆಯಿಂದ ಬಳಲುತ್ತಿದೆ. ಅದನ್ನು ಬಿಟ್ಟುಬರಲು ಸಾಧ್ಯವಿಲ್ಲ ಎಂದು  ಹೇಳಿ ಈ ಕಾರ್ಯಕ್ರಮಕ್ಕೆ ರತನ್‌ ಟಾಟಾ ಹಾಜರಾಗಿಲ್ಲ. ರತನ್ ಟಾಟಾ ಬಾರದಿರುವುದರ ಹಿಂದಿನ ಕಾರಣ ಕೇಳಿ ಪ್ರಿನ್ಸ್ ಚಾರ್ಲ್ಸ್  ಅವರು, ಮನುಷ್ಯನೆಂದರೆ ಹೀಗಿರಬೇಕು, ರತನ್ ಟಾಟಾ ಅದ್ಭುತ ವ್ಯಕ್ತಿ ಎಂದು  ಹಾಡಿ ಹೊಗಳಿದ್ದರು. 

ಇದಲ್ಲದೆ ರತನ್‌ ಟಾಟಾ ಅವರು ಅನೇಕ ಬೀದಿ ನಾಯಿಗಳಿಗೆ ಆಶ್ರಯ ನೀಡಿದ್ದಾರೆ. ಮುಂಬೈನಲ್ಲಿರುವ ಟಾಟಾ ಮುಖ್ಯ ಕಚೇರಿ ಬಾಂಬೆ ಹೌಸ್‌ಗೆ ಭೇಟಿ ನೀಡಿದ ಬಗ್ಗೆ ಪತ್ರಕರ್ತರೊಬ್ಬರು ಹೀಗೆ ಬರೆದಿದ್ದರು. ಸುಮಾರು ಹತ್ತು ಬೀದಿ ನಾಯಿಗಳಿಗೆ ಆಶ್ರಯ ನೀಡಲಾಗಿದ್ದ ಮೆಜ್ಜನೈನ್ ಮಹಡಿಯಲ್ಲಿರುವ ದೊಡ್ಡ ಹವಾನಿಯಂತ್ರಿತ ಕೋಣೆಗೆ ನನ್ನನ್ನು ಕರೆದೊಯ್ದರು. ಅಲ್ಲಿ ಆ ನಾಯಿಗಳಿಗೆ ಸ್ನಾನದ ಸೌಲಭ್ಯ ಹಾಗೂ ಅವುಗಳನ್ನು ನೋಡಿಕೊಳ್ಳಲು ಸಿಬ್ಬಂದಿ ಕೂಡ ಇದ್ದರು ಎಂದು ಅವರು ಬರೆದಿದ್ದರು. 

ಬಾಂಬೆ ಹೌಸ್ ಮತ್ತು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಸೇರಿದಂತೆ ಎಲ್ಲಾ ಟಾಟಾ ಕಚೇರಿಗಳಲ್ಲಿ ಎಲ್ಲಾ ಬೀದಿ ನಾಯಿಗಳಿಗೆ ಆಶ್ರಯ ಮತ್ತು ಆರೈಕೆಯನ್ನು ಒದಗಿಸುವುದು ಮತ್ತು ಅವುಗಳನ್ನು ಎಂದಿಗೂ ಓಡಿಸಬಾರದು ಎಂಬ ನಿಯಮ ಕೂಡ ಬಹಳಷ್ಟು ಪ್ರಸಿದ್ದಿಯಲ್ಲಿದೆ. 

ಕಲೆ ಮತ್ತು ಆಟೋಮೊಬೈಲ್ ಉತ್ಸಾಹಿ

ರತನ್‌ ಟಾಟಾ ಅವರು ಕಲೆಯ ಉತ್ಸಾಹಿ ಸಂಗ್ರಾಹಕರಾಗಿದ್ದರು. ಅವರು ವರ್ಣಚಿತ್ರಗಳು, ಛಾಯಾಚಿತ್ರಗಳು ಮತ್ತು ಶಿಲ್ಪಗಳ ಸಂಗ್ರಹಕರಾಗಿದ್ದರು. ಎಮ್ ಎಫ್ ಹುಸೇನ್, ಅಂಜಲಿ ಇಳಾ ಮೆನನ್, ಜಹಾಂಗೀರ್ ಸಬವಾಲಾ ಮತ್ತು ಎಸ್‌ಎಚ್ ರಝಾ ಅವರು ರತನ್‌ ಅವರ ನೆಚ್ಚಿನ ಕಲಾವಿದರಾಗಿದ್ದರು. ಟಾಟಾ ಅವರಿಗೆ ಕಾರು ಮತ್ತು ಮೋಟಾರ್ ಸೈಕಲ್‌ಗಳ ಬಗ್ಗೆ ಒಲವು ಕೂಡ ಇತ್ತು.  ರಾಯಲ್ ಎನ್‌ಫೀಲ್ಡ್ ಬುಲೆಟ್, ಮರ್ಸಿಡಿಸ್-ಬೆನ್ಜ್ 500 ಎಸ್‌ಎಲ್ ಮತ್ತು ಫೆರಾರಿ ಕ್ಯಾಲಿಫೋರ್ನಿಯಾದಂತಹ ವಿಂಟೇಜ್ ಮತ್ತು ಆಧುನಿಕ ವಾಹನಗಳ ಸಂಗ್ರಹ ಟಾಟಾ ಅವರ ಬಳಿಯಿತ್ತು. 

26/11 ದಾಳಿಯ ವೇಳೆ ಉದ್ಯೋಗಿಗಳ ಕಾಳಜಿ

ಮುಂಬೈನಲ್ಲಿ 26/11 ರ ಭಯೋತ್ಪಾದಕ ದಾಳಿಯ ಸಮಯದಲ್ಲಿ ತಾಜ್ ಹೋಟೆಲ್‌ನಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದಾಗ  70 ವರ್ಷ ವಯಸ್ಸಿನ ಮತ್ತು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ಟಾಟಾ ಅವರು ಇಡೀ ದಿನ ಹೋಟೆಲ್‌ನ ಹೊರಗೆ ನಿಂತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವುದನ್ನು ವೀಕ್ಷಿಸುತ್ತಿದ್ದರು. ತಾಜ್ ಹೋಟೆಲ್‌ನಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬ ಸಂತ್ರಸ್ತರ ಮನೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಅವರ ಕುಟುಂಬಗಳಿಗೆ ಅಗತ್ಯವಿರುವ ಸಹಾಯ ತಲುಪಿರುವುದನ್ನು ಖಚಿತಪಡಿಸಿಕೊಂಡಿದ್ದರು. ಘಟನೆ ನಡೆದ ಒಂದು ತಿಂಗಳೊಳಗೆ, ಡಿಸೆಂಬರ್ 2008 ರಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಮಾನವೀಯ ಬೆಂಬಲವನ್ನು ಒದಗಿಸಲು ಟಾಟಾ ಗ್ರೂಪ್ ತಾಜ್ ಸಾರ್ವಜನಿಕ ಸೇವಾ ಕಲ್ಯಾಣ ಟ್ರಸ್ಟ್ ಅನ್ನು ಸ್ಥಾಪಿಸಿತು.

Tags:    

Similar News