Ajmer Dargah | ʼಶಿವ ದೇವಾಲಯʼ ಎಂಬ ಅರ್ಜಿ, ಅಜ್ಮೇರ್ ದರ್ಗಾಕ್ಕೂ ಕೋರ್ಟ್ ನೋಟಿಸ್
ಅಜ್ಮೇರ್‌ನ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಹೇಳುವ ಸಿವಿಲ್ ಮೊಕದ್ದಮೆಯಲ್ಲಿ ಮೂರು ಪಕ್ಷಗಳಿಗೆ ನೋಟಿಸ್ ನೀಡುವಂತೆ ಅಜ್ಮೀರ್ ನ ಸ್ಥಳೀಯ ನ್ಯಾಯಾಲಯ ನಿರ್ದೇಶಿಸಿದೆ.;
ಉತ್ತರ ಪ್ರದೇಶದ ಸಂಭಲ್‌ನಲ್ಲಿ ಇತ್ತೀಚೆಗೆ ಕೋರ್ಟ್ ಆದೇಶದ ಮೇರೆಗೆ ಮಸೀದಿಯೊಂದರ ಸಮೀಕ್ಷೆ ಮಾಡುವ ವೇಳೆ ಕೋಮು ಗಲಭೆ ನಡೆದು 4 ಮಂದಿ ಮೃತಪಟ್ಟು ಹಲವು ಪೊಲೀಸರಿಗೆ ಗಾಯಗಳಾಗಿದ್ದವು. ಈ ಕಹಿ ಘಟನೆ ಮಾಸುವ ಮುನ್ನವೇ ರಾಜಸ್ಥಾನದ ಅಜ್ಮೇರ್ ಸ್ಥಳೀಯ ನ್ಯಾಯಾಲಯವು ಬುಧವಾರ (ನವೆಂಬರ್ 27) 13ನೇ ಶತಮಾನದ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಆಡಳಿತ ಮಂಡಳಿಗೆ ನೋಟಿಸ್ ನೀಡಿದೆ. ಮಸೀದಿಯನ್ನು ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ದಾಖಲಿಸಲಾಗಿದ್ದ ಸಿವಿಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮುಸ್ಲಿಂ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ.
ಅಜ್ಮೇರ್‌ನ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಹೇಳುವ ಸಿವಿಲ್ ಮೊಕದ್ದಮೆಯಲ್ಲಿ ಮೂರು ಪಕ್ಷಗಳಿಗೆ ನೋಟಿಸ್ ನೀಡುವಂತೆ ಅಜ್ಮೀರ್ ನ ಸ್ಥಳೀಯ ನ್ಯಾಯಾಲಯ ನಿರ್ದೇಶಿಸಿದೆ.
ಸಿವಿಲ್ ನ್ಯಾಯಾಧೀಶ ಮನಮೋಹನ್ ಚಂದೇಲ್ ಅವರ ನ್ಯಾಯಾಲಯದಲ್ಲಿ ದಾವೆಯ ವಿಚಾರಣೆ ನಡೆಯುತ್ತಿದೆ ಎಂದು ಅರ್ಜಿದಾರರ ವಕೀಲ ಯೋಗೇಶ್ ಸಿರೋಜಾ ತಿಳಿಸಿದ್ದಾರೆ.
ಹಿಂದೂಗಳಿಗೆ ಹಕ್ಕು ನೀಡಿ
ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಹೇಳಿಕೊಂಡು ದೇವಾಲಯದಲ್ಲಿ ಮತ್ತೆ ಪೂಜೆಯನ್ನು ಪ್ರಾರಂಭಿಸಲು ನಿರ್ದೇಶನಗಳನ್ನು ಕೋರಿ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೂಫಿ ಸಂತನ ದರ್ಗಾ ಅಜ್ಮೀರ್ ನ ಪ್ರಸಿದ್ಧ ಹೆಗ್ಗುರುತಾಗಿದೆ.
ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಕಚೇರಿಗೆ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
"ಅಜ್ಮೀರ್ ದರ್ಗಾವನ್ನು ಸಂಕತ್ ಮೋಚನ್ ಮಹಾದೇವ್ ದೇವಾಲಯ ಎಂದು ಘೋಷಿಸಬೇಕು. ಸಮೀಕ್ಷೆಯನ್ನು ಎಎಸ್ಐ ಮೂಲಕ ನಡೆಸಬೇಕು ಮತ್ತು ಹಿಂದೂಗಳಿಗೆ ಅಲ್ಲಿ ಪೂಜಿಸುವ ಹಕ್ಕನ್ನು ನೀಡಬೇಕು" ಎಂದು ಅವರು ಹೇಳಿದರು.
ಮುಂದಿನ ವಿಚಾರಣೆ ಡಿಸೆಂಬರ್ 20ಕ್ಕೆ
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಹಳೆಯ ದೇವಾಲಯವನ್ನು ನಾಶಪಡಿಸಿ ನಿರ್ಮಿಸಲಾಗಿದೆ ಎಂಧು ಹೇಳಲಾಗುವ ಮಸೀದಿಯ ಸಮೀಕ್ಷೆಗೆ ಸ್ಥಳೀಯ ನ್ಯಾಯಾಲಯವು ಆದೇಶಿಸಿತ್ತು. ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ ಮತ್ತು ಅನೇಕರು ಗಾಯಗೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ.